ನ್ಯೂಯಾರ್ಕ್: ಅಮೆರಿಕದ ಮಾಜಿ ಬೇಸ್ ಬಾಲ್ ಆಟಗಾರ, ಜಗತ್ತಿನಾದ್ಯಂತ “ಐಸ್ ಬಕೆಟ್ ಚಾಲೆಂಜ್” ಮೂಲಕ ದೇಣಿಗೆ ಸಂಗ್ರಹಿಸಲು ಸ್ಫೂರ್ತಿಯಾಗಿದ್ದ ಪೀಟ್ ಫ್ರೇಟ್ಸ್(34ವರ್ಷ) ಸೋಮವಾರ ನಿಧನರಾಗಿರುವುದಾಗಿ ವರದಿ ತಿಳಿಸಿದೆ.
ಪೀಟ್ ಫ್ರೇಟ್ಸ್ ಅಥ್ಲೇಟಿಯಾಗಿ ಗಮನಸೆಳೆದವರು. ಬೋಸ್ಟನ್ ಪ್ರದೇಶದಲ್ಲಿ ಜನಿಸಿದ್ದ ಪೀಟ್ ಮಾರಣಾಂತಿಕ “ಲಾ ಗೆರಿಗ್ಸ್” ಎಂಬ ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ 2014ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಜನಪ್ರಿಯವಾಗಿದ್ದ “ಐಸ್ ಬಕೆಟ್ ಚಾಲೆಂಜ್” ಗೆ ಸ್ಫೂರ್ತಿಯಾಗಿದ್ದದ್ದು ಇದೇ ಪೀಟ್ .
ಮಾರಣಾಂತಿಕ ಲಾ ಗೆರಿಗ್ಸ್(ಎಎಲ್ ಎಸ್) ನರಸಂಬಂಧಿ ಕಾಯಿಲೆ ಕುರಿತ ವೈದ್ಯಕೀಯ ಸಂಶೋಧನೆಗಾಗಿ ಹಾಗೂ ರೋಗದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ಪೀಟ್ ಐಸ್ ಬಕೆಟ್ ಚಾಲೆಂಜ್ ಅನ್ನು ಹುಟ್ಟುಹಾಕಿದ್ದರು.
ದೇಣಿಗೆ ನೀಡುವ ಮೊದಲು ಮೈಕೊರೆಯುವಷ್ಟು ತಂಪಾದ(ಐಸ್) ಒಂದು ಬಕೆಟ್ ನೀರನ್ನು ತಲೆ ಮೇಲೆ ಸುರಿದುಕೊಳ್ಳುವುದೇ ಐಸ್ ಬಕೆಟ್ ಚಾಲೆಂಜ್ ಆಗಿತ್ತು. ಈ ಚಾಲೆಂಜ್ ಅನ್ನು ವಿಶ್ವಾದ್ಯಂತ ಲಕ್ಷಾಂತರ ಮಂದಿ ಸ್ವೀಕರಿಸುವ ಮೂಲಕ ದೇಣಿಗೆ ನೀಡಿದ್ದರು.
ಟೋಮ್ ಕ್ರೂಸ್, ಸ್ಟೀವನ್ ಸ್ಪೈಲ್ ಬರ್ಗ್, ಬಿಲ್ ಗೇಟ್ಸ್, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಸೇರಿದಂತೆ ಜಗತ್ತಿನಾದ್ಯಂತ ಘಟಾನುಘಟಿಗಳು ಐಸ್ ಬಕೆಟ್ ಚಾಲೆಂಜ್ ನಲ್ಲಿ ಭಾಗವಹಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.