ನವದೆಹಲಿ: ಪರ್ಷಿಯನ್ ಗಲ್ಫ್ ರಾಷ್ಟ್ರದಲ್ಲಿ ತಲೆದೋರಿರುವ ಸಂಘರ್ಷವನ್ನು ಶಾಂತಿ ಮಾತುಕತೆ ಮೂಲಕ ಶಮನಗೊಳಿಸುವ ನಿಟ್ಟಿನಲ್ಲಿ ಭಾರತ ಮಹತ್ವದ ಪಾತ್ರವಹಿಸಬೇಕು ಎಂದು ಭಾರತದಲ್ಲಿರುವ ಇರಾನ್ ರಾಯಭಾರಿ ಅಲಿ ಚೇಗೇನಿ ಬುಧವಾರ ಮನವಿ ಮಾಡಿಕೊಂಡಿದ್ದಾರೆ.
ಭಾರತ ಕೂಡ ಗಲ್ಫ್ ರಾಷ್ಟ್ರದ ಭಾಗವಾಗಿದೆ. ಹೀಗಾಗಿ ಭಾರತ ಉದ್ವಿಗ್ನ ಶಮನಗೊಳಿಸುವಲ್ಲಿ ಪಾತ್ರವಹಿಸಬೇಕು. ನಮ್ಮ ಉತ್ತಮ ಗೆಳೆಯನಾಗಿರುವ ಭಾರತ ಸಂಘರ್ಷ ಶಮನಗೊಳಿಸುವ ಯಾವುದೇ ಹೆಜ್ಜೆ ಇಟ್ಟರೂ ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಇರಾನ್ ಗೆ ಯುದ್ಧ ಬೇಕಾಗಿಲ್ಲ. ನಾವು ಯುದ್ಧ ಪರಿಸ್ಥಿತಿಯನ್ನು ಎದುರು ನೋಡುತ್ತಿಲ್ಲ. ನಾವು ಪರ್ಷಿಯನ್ ಪ್ರದೇಶದಲ್ಲಿ ಭಾರತೀಯರು ಸೇರಿದಂತೆ ಎಲ್ಲರ ಜತೆಯೂ ಸಹೋದರತೆಯಿಂದ ಶಾಂತಿಯುತವಾಗಿ ಬದುಕಬೇಕಾಗಿದೆ. ನಮಗೆ ಯಾವುದೇ ಸಂಘರ್ಷ ಬೇಕಾಗಿಲ್ಲ ಎಂದು ಅಲಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವೆ ತಲೆದೋರಿರುವ ಯುದ್ಧ ಕಾರ್ಮೋಡದ ಹಿನ್ನೆಲೆಯಲ್ಲಿ ಅಲಿ ನವದೆಹಲಿಯಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಂದೆಡೆ ಇರಾನ್, ಅಮೆರಿಕದ ಸಂಘರ್ಷದ ಪರಿಸ್ಥಿತಿ ಕುರಿತು ಭಾರತ ತನ್ನ ನಿಲುವು ವ್ಯಕ್ತಪಡಿಸಬೇಕು ಎಂಬ ಒತ್ತಾಯವೂ ಕೇಳಿಬಂದಿರುವುದಾಗಿ ವರದಿ ತಿಳಿಸಿದೆ.
ಇರಾನ್ ಜನರಲ್ ಕಮಾಂಡರ್ ಖಾಸಿಂ ಸೊಲೆಮನಿಯನ್ನು ಅಮೆರಿಕ ವಾಯುಪಡೆ ದಾಳಿ ನಡೆಸಿ ಹತ್ಯೆಗೈದಿದ್ದಕ್ಕೆ ಪ್ರತೀಕಾರವಾಗಿ ಇರಾನ್ ಬುಧವಾರ ನಸುಕಿನ ವೇಳೆ ಇರಾಕ್ ನಲ್ಲಿರುವ ಅಮೆರಿಕ ಪಡೆಗಳ ಮೇಲೆ ಮಿಸೈಲ್ ದಾಳಿ ನಡೆಸಿತ್ತು. ಘಟನೆಯಲ್ಲಿ 80 ಮಂದಿ ಅಮೆರಿಕದ ಸೈನಿಕರು ಸಾವನ್ನಪ್ಪಿರುವುದಾಗಿ ಇರಾನ್ ಸ್ವಾಮಿತ್ವದ ಟೆಲಿವಿಷನ್ ಸುದ್ದಿ ಬಿತ್ತರಿಸಿತ್ತು.