ವಾಷಿಂಗ್ಟನ್: ಅಮೆರಿಕ ಕ್ಯಾಪಿಟಲ್ ನ ಹೊರಭಾಗದ ಬ್ಯಾರಿಕೇಡ್ ಬಳಿ ಇದ್ದ ಇಬ್ಬರು ಅಧಿಕಾರಿಗಳ ಮೇಲೆ ಕಾರನ್ನು ಹರಿಸಿದ ಪರಿಣಾಮ ಓರ್ವ ಅಧಿಕಾರಿ ಸಾವನ್ನಪ್ಪಿದ್ದು, ಮತ್ತೊಬ್ಬ ಅಧಿಕಾರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಮೆರಿಕದಲ್ಲಿ ಶುಕ್ರವಾರ(ಏಪ್ರಿಲ್ 02) ನಡೆದಿದ್ದು, ಈ ಹಿನ್ನೆಲೆಯಲ್ಲಿ ಅಮೆರಿಕ ಕ್ಯಾಪಿಟಲ್ ಅನ್ನು ಲಾಕ್ ಡೌನ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಬ್ಯಾರಿಕೇಡ್ ಗೆ ಕಾರನ್ನು ನುಗ್ಗಿಸಿದ ಪರಿಣಾಮ ಅಧಿಕಾರಿ ಸಾವನ್ನಪ್ಪಿದ್ದು, ಈ ಸಂದರ್ಭದಲ್ಲಿ ಕಾರು ಚಾಲಕ ಪರಾರಿಯಾಗಲು ಯತ್ನಿಸಿದಾಗ ಆತನನ್ನು ಗುಂಡಿಕ್ಕಿ ಕೊಲ್ಲಲಾಯಿತು ಎಂದು ಕ್ಯಾಪಿಟಲ್ ಪೊಲೀಸರು ತಿಳಿಸಿದ್ದಾರೆ.
ಗುಡ್ ಫ್ರೈಡೇ ದಿನವಾದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೊ ಬೈಡೆನ್ ಹಾಗೂ ಅಮೆರಿಕ ಪ್ರಥಮ ಮಹಿಳೆ ಜಿಲ್ ಬೈಡೆನ್ ಈಸ್ಟರ್ ನಲ್ಲಿ ಪಾಲ್ಗೊಂಡಿದ್ದರು. ವೇಗವಾಗಿ ಬಂದ ಕಾರು ಕ್ಯಾಪಿಟಲ್ ಕಟ್ಟಡದ ಹೊರಭಾಗದಲ್ಲಿದ್ದ ಬ್ಯಾರಿಕೇಡ್ ಹೊಡೆದುರುಳಿಸಿ ಇಬ್ಬರು ಅಧಿಕಾರಿಗಳಿಗೆ ಡಿಕ್ಕಿ ಹೊಡೆದಿತ್ತು.
ಘಟನೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ವಿಲಿಯಮ್ ಇವಾನ್ಸ್ ಸಾವನ್ನಪ್ಪಿದ್ದು, ಅಧ್ಯಕ್ಷ ಜೊ ಬೈಡೆನ್ ಅವರು ಕುಟುಂಬದ ಸದಸ್ಯರಿಗೆ ಸಂತಾಪ ಸೂಚಿಸಿದ್ದಾರೆ.
ಇದೊಂದು ಭಯೋತ್ಪಾದನೆಗೆ ಸಂಬಂಧಿಸಿದ ಘಟನೆಯಲ್ಲ ಎಂದು ತಿಳಿಸಿರುವ ವಾಷಿಂಗ್ಟನ್ ಮೆಟ್ರೊಪಾಲಿಟನ್ ಪೊಲೀಸ್ ವರಿಷ್ಠಾಧಿಕಾರಿ ರಾಬರ್ಟ್, ಈ ಬಗ್ಗೆ ತನಿಖೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.