ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಎಬ್ಬಿಸಿ, ಪ್ಯಾನ್ ಇಂಡಿಯಾದಲ್ಲಿ ಮಿಂಚಿದ ʼಕಾಂತಾರʼ ಸಿನಿಮಾಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಕೇಳಿ ಬಂದಿತ್ತು. ಸದ್ಯ ಸಿನಿಮಾ ತಂಡ ಸಿನಿಮಾದ ಮುಂದುವರೆದ ಭಾಗವನ್ನು ತೆರೆ ಮೇಲೆ ತರುವುದರಲ್ಲಿ ನಿರತವಾಗಿದೆ.
ಇತ್ತೀಚೆಗಷ್ಟೇ ʼಕಾಂತಾರʼದ 100ನೇ ದಿನದ ಸಂಭ್ರಮದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಈಗಾಗಲೇ ನೀವು ನೋಡಿರುವುದು ʼಕಾಂತಾರ-2ʼ ಮುಂದೆ ಬರುವುದು ʼಕಾಂತಾರʼ ಪಾರ್ಟ್ -1 ಎಂದು ಹೇಳಿ, ಬಿಗ್ ಅಪ್ಡೇಟ್ ನೀಡಿದ್ದರು. ಸಿನಿಮಾದ ಸ್ಕ್ರಿಪ್ಟ್ ವರ್ಕ್ ಹಾಗೂ ಲೋಕೇಷನ್ ಹುಡುಕಾಟದಲ್ಲಿ ಬ್ಯುಸಿಯಾಗಿರುವ ಚಿತ್ರ ತಂಡ ಮುಂದಿನ ವರ್ಷ ಸಿನಿಮಾವನ್ನು ತೆರೆ ಮೇಲೆ ತರಲು ಯೋಜನೆಯನ್ನು ಹಾಕಿಕೊಂಡಿದೆ.
ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇತ್ತೀಚೆಗಷ್ಟೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಅವರೊಂದಿಗಿನ ಫೋಟೋವೊಂದನ್ನು ಹಂಚಿಕೊಂಡು ʼಕಾಂತಾರ-2ʼ ಲೋಡಿಂಗ್ ಎಂದು ಕ್ಯಾಷ್ಷನ್ ಬರೆದುಕೊಂಡಿದ್ದರು.
ಇದು ಊರ್ವಶಿ ರೌಟೇಲಾ ಹೊಂಬಾಳೆ ಬ್ಯಾನರ್ ನ ʼಕಾಂತಾರ-2ʼ ನಲ್ಲಿ ನಟಿಸುತ್ತಾರೆ ಎನ್ನುವ ಗಾಸಿಪ್ ಗೆ ಕಾರಣವಾಗಿತ್ತು. ಆದರೆ ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ನ ಆಪ್ತ ಮೂಲಗಳಿಂದ ಸ್ಪಷ್ಟನೆ ಸಿಕ್ಕಿದೆ.
ಊರ್ವಶಿ ʼಕಾಂತಾರ-2ʼ ನಲ್ಲಿ ನಟಿಸುತ್ತಾರೆ ಎನ್ನುವುದು ಸುಳ್ಳು ಹಾಗೂ ಇದೊಂದು ವದಂತಿಯಷ್ಟೇ. ಕಾರ್ಯಕ್ರಮವೊಂದರಲ್ಲಿ ಭೇಟಿಯಾದ ವೇಳೆ ರಿಷಬ್ ಅವರೊಂದಿಗೆ ಊರ್ವಶಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ ಅಷ್ಟೇ. ಅವರು ನಮ್ಮ ಚಿತ್ರದಲ್ಲಿ ನಟಿಸುತ್ತಿಲ್ಲ. ಇದೊಂದು ಸುಳ್ಳು ಸುದ್ದಿ ಎಂದು ಮೂಲಗಳು ತಿಳಿಸಿವೆ.
2022 ರ ಸೆಪ್ಟೆಂಬರ್ 30 ರಂದು ಮೊದಲು ಕನ್ನಡದಲ್ಲಿ ರಿಲೀಸ್ ಆದ ಸಿನಿಮಾ, ಆ ಬಳಿಕ ಇತರ ಭಾಷೆಯಲ್ಲಿ ಡಬ್ ಆಗಿ 400 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು.