Advertisement

ವಿಶ್ವಕಪ್‌ ಫುಟ್ಬಾಲ್: ಉರುಗ್ವೆ-ದಕ್ಷಿಣ ಕೊರಿಯ ಪಂದ್ಯ ಡ್ರಾ

10:15 PM Nov 24, 2022 | Team Udayavani |

ದೋಹಾ: ಬಲಿಷ್ಠ ತಂಡ ಉರುಗ್ವೆ ಹಾಗೂ ಅರ್ಹತಾ ಸುತ್ತಿನಿಂದ ಮೇಲೇರಿ ಬಂದ ದಕ್ಷಿಣ ಕೊರಿಯ ತಂಡಗಳ ನಡುವಿನ ಗುರುವಾರದ ಪಂದ್ಯ ಯಾವುದೇ ಗೋಲುಗಳನ್ನು ಕಾಣಲಿಲ್ಲ. ಹೀಗಾಗಿ ಪಂದ್ಯ ಡ್ರಾಗೊಂಡಿತು. ಎರಡೂ ತಂಡಗಳು ನಿಕಟವಾಗಿ ಕಾದಾಡಿದರೂ, ನಿರೀಕ್ಷಿತ ಫ‌ಲಿತಾಂಶ ಸಿಗಲಿಲ್ಲ. ಈ ಫ‌ಲಿತಾಂಶ ದ.ಕೊರಿಯಕ್ಕಿಂತ ಉರುಗ್ವೆಗೆ ಆಘಾತಕಾರಿ. ಕಾರಣ 2018ರ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಅದು ಫ್ರಾನ್ಸ್‌ ಎದುರು ಸೋತಿತ್ತು. ಈ ಬಾರಿ ಅದು ಭರ್ಜರಿ ಸಿದ್ಧತೆಯೊಂದಿಗೆ ಆಗಮಿಸಿತ್ತು. ಆದರೆ ಆಡಿದ ಮೊದಲನೇ ಪಂದ್ಯದಲ್ಲಿಯೇ ಎಲ್ಲ ಲೆಕ್ಕಾಚಾರಗಳು ಉಲ್ಟಾ ಆಗಿವೆ.

Advertisement

ಈ ಕೂಟದ ಆರಂಭಕ್ಕೂ ಮುನ್ನ ಉರುಗ್ವೆ 9 ಪಂದ್ಯಗಳನ್ನಾಡಿತ್ತು. ಅದರಲ್ಲಿ ಸೋತಿದ್ದು ಒಮ್ಮೆ ಮಾತ್ರ. 7 ಪಂದ್ಯಗಳನ್ನು ಗೆದ್ದಿತ್ತು. ಅದರಲ್ಲೂ ಪನಾಮ ವಿರುದ್ಧ 5-0 ಗೋಲುಗಳಿಂದ ಮೆರೆದಾಡಿತ್ತು. ಮೆಕ್ಸಿಕೊ, ಚಿಲಿ, ಕೆನಡವನ್ನೂ ಮಣಿಸಿತ್ತು. ಇನ್ನು ಅರ್ಹತಾ ಸುತ್ತಿನಲ್ಲಿ ಆಡಿದ್ದ ದ.ಕೊರಿಯ ಅಲ್ಲಿ 2ನೇ ಸ್ಥಾನ ಪಡೆದಿತ್ತು. ಇರಾನ್‌ ಅಗ್ರಸ್ಥಾನ ಪಡೆದಿತ್ತು. 2018ರ ವಿಶ್ವಕಪ್‌ನಲ್ಲಿ ಜರ್ಮನಿಯನ್ನೇ ಮಣಿಸಿದ್ದ ದ.ಕೊರಿಯಕ್ಕೆ ಈ ಬಾರಿ ಅಂತಹದ್ದೇ ಇನ್ನೊಂದು ಫ‌ಲಿತಾಂಶ ನೀಡುವ ತವಕವಿತ್ತು. ಆದರೆ ಎರಡೂ ತಂಡಗಳು ತಂತಮ್ಮ ಯೋಜನೆಗಳಲ್ಲಿ ವಿಫ‌ಲವಾಗಿವೆ.

ಮೊದಲ ಅವಧಿಯಲ್ಲಿ ಯಾವ ತಂಡಗಳೂ ಗೋಲು ಹೊಡೆಯುವ ಗಂಭೀರ ಯತ್ನ ನಡೆಸಲಿಲ್ಲ. ಈ ಹೊತ್ತಿನಲ್ಲಿ ನೆನಪು ಮಾಡಿಕೊಳ್ಳಬಹುದಾದ ಯತ್ನವೆಂದರೆ 34ನೇ ನಿಮಿಷದಲ್ಲಿ ದ.ಕೊರಿಯದ ಯುಐ ಜೊ ಹೊಡೆತ. ಅದು ಗೋಲುಪೆಟ್ಟಿಗೆ ಮೇಲಕ್ಕೆ ಹಾರಿಹೋಯಿತು. ಇನ್ನು ಉರುಗ್ವೆ ಪರ ಗೊಡಿನ್‌ ಭರ್ಜರಿ ಆಟವಾಡಿದ್ದರು. ಅವರು ತಲೆಯಲ್ಲಿ ಹೊಡೆದ ಹೊಡೆತವೊಂದು ಗೋಲುಪೆಟ್ಟಿಗೆ ಕಂಬಿಗೆ ಬಡಿದು ಹೊರಹೋಯಿತು.

64ನೇ ನಿಮಿಷದಲ್ಲಿ ಉರುಗ್ವೆಯ ಖ್ಯಾತ ಆಟಗಾರ ಲೂಯ್ ಸ್ವಾರೆಝ್ ಪಂದ್ಯದಿಂದ ಹೊರ ನಡೆದರು. ಅವರ ಜಾಗದಲ್ಲಿ ಎಡಿನ್ಸನ್‌ ಕವಾನಿ ಬಂದರು. 74ನೇ ನಿಮಿಷದಲ್ಲಿ ದ.ಕೊರಿಯದ ಹ್ವಾಂಗ್‌ ಯುಐ ಜೊ ಹೊರಬಿದ್ದರು. ದ.ಕೊರಿಯವಂತೂ ಇನ್ನೂ ಹಲವು ಆಟಗಾರರನ್ನು ಹೊರಕಳುಹಿಸಿ, ಬದಲಿ ಆಟಗಾರರನ್ನು ಪಡೆಯಿತು. ಅದರಿಂದ ಉಪಯೋಗವೇನೂ ಆಗಲಿಲ್ಲ. 2ನೇ ಅವಧಿ ಬಹುತೇಕ ಶಾಂತವಾಗಿಯೇ ಮುಗಿಯಿತು. ಯಾವುದೇ ತಂಡಗಳು ಇನ್ನೇನು ಗೋಲು ಹೊಡೆದೇಬಿಟ್ಟವು ಎಂಬ ಸ್ಥಿತಿಯನ್ನೂ ನಿರ್ಮಿಸಲಿಲ್ಲ. 90ನೇ ನಿಮಿಷದಲ್ಲಿ ಉರುಗ್ವೆಯ ವ್ಯಾಲ್ವೆರ್ಡ್‌ ಬಲವಾದ ಹೊಡೆತವನ್ನು ದೂರದಿಂದಲೇ ಬಾರಿಸಿದರು. ಆ ತಂಡದ ಆಟಗಾರರು ಅದಕ್ಕೆ ಪೂರಕವಾಗಿ ಸ್ಪಂದಿಸಲಿಲ್ಲ.

ಇದುವರೆಗೆ ಉರುಗ್ವೆ ತಂಡ 14 ಬಾರಿ ವಿಶ್ವಕಪ್‌ನಲ್ಲಿ ಪಾಲ್ಗೊಂಡಿದೆ. ಈ ಪೈಕಿ ಅದಾಡಿದ ಮೊದಲ ಪಂದ್ಯಗಳಲ್ಲೇ ಸೋತಿದ್ದು ಕೇವಲ 3 ಬಾರಿ ಮಾತ್ರ. ಇನ್ನು ಹಿಂದಿನ ಐದು ವಿಶ್ವಕಪ್‌ಗ್ಳಲ್ಲಿ ಅದು 2 ಪಂದ್ಯಗಳನ್ನು ಗೋಲುರಹಿತ ಡ್ರಾ ಮಾಡಿಕೊಂಡಿದೆ. ಅದೇ ಸಾಲಿಗೆ ಪ್ರಸ್ತುತ ಪಂದ್ಯವೂ ಸೇರಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next