ಬೆಂಗಳೂರು: ಉರಿಗೌಡ- ನಂಜೇಗೌಡ ಕಾಲ್ಪನಿಕ ವ್ಯಕ್ತಿಗಳು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಾಡಿದ್ದ ಟ್ವೀಟ್‌ಗೆ ಈಗ ಬಿಜೆಪಿ ದಾಖಲೆ ಸಮೇತ ತಿರುಗೇಟು ನೀಡಿದೆ.
2006ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದ ಪುಸ್ತಕದಲ್ಲಿ ಇವರಿಬ್ಬರ ಹೆಸರು ಉಲ್ಲೇಖವಾಗಿರುವ ದಾಖಲೆಯನ್ನು ಸಾರ್ವಜನಿಕರ ಮುಂದಿಟ್ಟಿದೆ.
ದೇಜಗೌ ಅವರ ಸಂಪಾದಕತ್ವದಲ್ಲಿ ಹೊರಬಂದ “ಸುವರ್ಣ ಮಂಡ್ಯ’ ಪುಸ್ತಕದಲ್ಲಿ ಉರಿಗೌಡ ಹಾಗೂ ದೊಡ್ಡನಂಜೇಗೌಡರ ಬಗ್ಗೆ ಉಲ್ಲೇಖ ಇರುವುದನ್ನು ಬಿಜೆಪಿ ಪತ್ತೆ ಹಚ್ಚಿದೆ. ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಪುಸ್ತಕವನ್ನು ಖುದ್ದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಬಿಡುಗಡೆ ಮಾಡಿದ್ದರು. ವೇದಿಕೆಯಲ್ಲಿ ಕುಮಾರಸ್ವಾಮಿಯವರೇ ಉಪಸ್ಥಿತರಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಅಂದು ಸಾರಿಗೆ ಸಚಿವರಾಗಿದ್ದ ಚಲುವರಾಯಸ್ವಾಮಿ ಸುವರ್ಣ ಮಂಡ್ಯ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರು ಎಂದು ಬಿಜೆಪಿ ಆರೋಪಿಸಿದೆ. ಉರಿಗೌಡ- ನಂಜೇಗೌಡರ ವಿಚಾರದಲ್ಲಿ ನಾಟಕ ಮಾಡುತ್ತಿದ್ದ ಜೆಡಿಎಸ್ ನಾಟಕ ಮಂಡಳಿಯ ಅಸಲಿ ಮುಖ ಬಯಲಾಗಿದೆ ಎಂದು ತಿರುಗೇಟು ನೀಡಿದೆ.
ಪುಸ್ತಕದಲ್ಲಿ ಏನಿದೆ?:
ಬಿಜೆಪಿ ಬಿಡುಗಡೆ ಮಾಡಿರುವ ಪುಸ್ತಕದಲ್ಲಿ “ಆ ಕಾಲದ ದೊಡ್ಡ ನಂಜೇಗೌಡ, ಉರಿಗೌಡ ಮುಂತಾದವರು ಹೈದರಾಲಿ ಮತ್ತು ಟಿಪ್ಪು ವಿರುದ್ಧ ಸೆಟೆದು ನಿಂತವರು. ಅದಕ್ಕೆ ಟಿಪ್ಪುವಿನ ಧಾರ್ಮಿಕ ಮತ್ತು ಭಾಷಾ ನೀತಿಯೂ ಕಾರಣ. ಟಿಪ್ಪು ಆಡಳಿತದ ಎಲ್ಲ ಅಂಗಗಳಲ್ಲಿಯೂ ಬರಿ ಮುಸಲ್ಮಾನರನ್ನೇ ನೇಮಿಸಿದ್ದು ಮತ್ತು ಪರ್ಷಿಯನ್ ಭಾಷೆಯನ್ನು ಆಡಳಿತ ಭಾಷೆಯಾಗಿ ಘೋಷಿಸಿದ್ದು ಈ ನೆಲದ ಜನರಲ್ಲಿ ಅಭದ್ರತೆ ಮತ್ತು ಅನುಮಾನಗಳನ್ನು ಬಿತ್ತಿದ್ದಂತೆ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದ ಅನೇಕ ಗೌಡರು ಟಿಪ್ಪು ವಿರುದ್ಧ ತಿರುಗಿ ಬಿದ್ದು ಇಂಗ್ಲಿಷರಿಗೆ ಬೆಂಬಲ ಸೂಚಿಸಿದ ಉದಾಹರಣೆಗಳಿವೆ’ ಎಂಬ ಉಲ್ಲೇಖವಿದೆ.
Related Articles
ಈ ಗ್ರಂಥವನ್ನು ನನ್ನ ಮಹಾನಾಯಕರು ಹಾಗೂ ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಎಚ್.ಡಿ.ದೇವೇಗೌಡರು ಬಿಡುಗಡೆ ಮಾಡುತ್ತಿರುವುದು ನನ್ನ ಸೌಭಾಗ್ಯವೆಂದೇ ಭಾವಿಸುತ್ತೇನೆ ಎಂದು ಚಲುವರಾಯಸ್ವಾಮಿ ಬರೆದ ಮುನ್ನುಡಿಯನ್ನು ಬಿಜೆಪಿ ಉಲ್ಲೇಖೀಸಿದೆ.
ಮುನಿರತ್ನ ಟ್ವೀಟ್
ಇದೆಲ್ಲದರ ಮಧ್ಯೆ ಸಚಿವ ಮುನಿರತ್ನ ಮಾಡಿರುವ ಟ್ವೀಟ್ ವಿವಾದಕ್ಕೆ ಇನ್ನಷ್ಟು ರಂಗು ನೀಡಿದೆ. “ವೃಷಬಾದ್ರಿ ಪ್ರೊಡಕ್ಷನ್ ನಿರ್ಮಾಣದ ಐತಿಹಾಸಿಕ ಘಟನೆ ಆಧರಿತ ಉರಿಗೌಡ ನಂಜೇಗೌಡ ಚಿತ್ರದ ಮುಹೂರ್ತ ಮೇ 18ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಡಾ.ಸಿ.ಎನ್.ಅಶ್ವತ್ಥನಾರಾಯಣ ಚಿತ್ರಕಥೆ ಇರುವ ಈ ಚಿತ್ರವನ್ನು ಆರ್.ಎಸ್.ಗೌಡ ನಿರ್ದೇಶನ ಮಾಡುತ್ತಿದ್ದಾರೆಂದು ಘೋಷಿಸಿದ್ದಾರೆ.
ಈ ಮೂಲಕ ಸಿನಿಮಾಕ್ಕೆ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಚಿತ್ರಕತೆ ಬರೆಯುತ್ತಾರೆಯೇ ? ಎಂದು ಪ್ರಶ್ನಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ ಟಕ್ಕರ್ ನೀಡಿದ್ದಾರೆ.