ಚನ್ನರಾಯಪಟ್ಟಣ: ಈ ತಿಂಗಳ ಅಂತ್ಯದೊಳಗೆ ತಾಲೂಕಿನ ಶ್ರೀನಿವಾಸಪುರ ಬಳಿ ಇರುವ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಪ್ರ ಕ್ರಿಯೆಗೆ ಚಾಲನೆನೀಡದೆಹೋದರೆ, ಪಕ್ಷದಿಂದ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ.ರಾಮಚಂದ್ರ ಎಚ್ಚರಿಸಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಹಲವು ಬಾರಿ ಕಾರ್ಖಾನೆ ಪ್ರಾರಂಭಿಸುವುದಾಗಿ ದಿನಾಂಕ ನೀಡಿದ್ದಾರೆ, ಕಾರ್ಖಾನೆ ಅಧಿಕಾರಿಗಳು ಸೆ.14ರಂದು ಪೂಜೆ ಮಾಡಿ, ತಿಂಗಳಾಂತ್ಯದೊಳಗೆ ಚಾಲನೆ ನೀಡುವುದಾಗಿ ಹೇಳಿದ್ದರು. ಆದರೆ, ಈ ವರೆಗೆ ಕಾರ್ಖಾನೆ ಪೂಜೆ ಮಾಡಿಲ್ಲ. ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ತಾಲೂಕಿನ ರೈತರ ಹಿತದೃಷ್ಟಿಯಿಂದ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ರಾಜೀನಾಮೆ ನೀಡಲಿ: ಸೆ.7ರಂದು ಕಾಂಗ್ರೆಸ್ ಪಕ್ಷ ಜಿಲ್ಲಾ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಧರಣಿ ನಡೆಸಿ ಕಾರ್ಖಾನೆಯಿಂದ ತಾಲೂಕಿನ ಮಿನಿ ವಿಧಾನಸೌಧದವರೆಗೆ ರ್ಯಾಲಿ ಹಮ್ಮಿಕೊಳ್ಳುವ ಮೂಲಕ ಜಿಲ್ಲಾಡಳಿತದ ಗಮನಕ್ಕೆ ತರಲಾಗಿತ್ತು. ಅಂದು ಕ್ಷೇತ್ರದ ಶಾಸಕ ಬಾಲಕೃಷ್ಣ ಸುದ್ದಿಗೋಷ್ಠಿ ನಡೆಸಿ, ದಿನಾಂಕ ತಿಳಿಸಿದ್ದರು. ಅವರು, ಆಡಿದ ಮಾತಿನಂತೆ ನಡೆದುಕೊಳ್ಳಬೇಕು. ಇಲ್ಲವೆ, ರೈತರ ಹೆಸರಿನಲ್ಲಿ ಕಾರ್ಖಾನೆಯ ಮೂಲಕ ರಾಜಕೀಯ ಮಾಡುತ್ತಿರುವುದಾಗಿ ಹೇಳಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸಹಕಾರ ಆಡಳಿತ ಮಂಡಳಿಯವರು ನಡೆಸುತ್ತಿದ್ದ ಹೇಮಾವತಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಜೆಡಿಎಸ್ ಮುಖಂಡರು ತಮ್ಮ ಸ್ವಹಿತಕ್ಕಾಗಿ ಖಾಸಗಿಯವರಿಗೆ ನೀಡುವ ಮೂಲಕ ಜಿಲ್ಲೆಯಕಬ್ಬುಬೆಳೆಗಾರರಿಗೆ ದ್ರೋಹ ಮಾಡಿದ್ದಾರೆ. ಆರ್ಥಿಕವಾಗಿ ನಷ್ಟ ಅನುಭವಿಸುವಂತೆ ಮಾಡಿದ್ದಾರೆ, ಕಳೆದ ನಾಲ್ಕೂವರೆ ವರ್ಷದಿಂದ ಚಾಮುಂಡೇಶ್ವರಿ ಕಾರ್ಖಾನೆ ಪ್ರಾರಂಭಿಸುವ ಇರಾದೆ ಅವರಿಗಿಲ್ಲ, ಆಡಳಿತ ಮಂಡಳಿ ಇದ್ದು ಇಲ್ಲದಂತಾಗಿದೆ ಎಂದು ಕಿಡಿಕಾರಿದರು.
ಹೇಮಾವತಿ ಸಹಕಾರ ಸಕ್ಕರೆಕಾರ್ಖಾನೆಆಡಳಿತ ಮಂಡಳಿ ಖಾಸಗಿ ಪರವಾಗಿ ವಕಾಲತ್ತು ವಹಿಸುತ್ತಿದೆ, ಶಾಸಕರಿಗೆ ಕ್ಷೇತ್ರದ ರೈತರ ಹಿತಕ್ಕಿಂತ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಹಿತಕಾಯುವುದೇ ಮುಖ್ಯವಾಗಿದೆ, ಕೃಷಿ ಮಾಡಿಕೊಂಡು ಬದುಕುಕಟ್ಟಿಕೊಳ್ಳುತ್ತಿರುವವರ ಕಷ್ಟ ಬಾಲಕೃಷ್ಣಗೆ ತಿಳಿಯುತ್ತಿಲ್ಲ. ಅವರಿಗೆ ಸಕಾಲಕ್ಕೆ ಎಲ್ಲವೂ ಸಲ್ಲುತ್ತಿರುವುದರಿಂದಬಡವರಿಗಿಂತಗುತ್ತಿಗೆದಾರರು ಮುಖ್ಯವಾಗಿದ್ದಾರೆ ಎಂದು ದೂರಿದರು.
ಜಿಪಂ ಮಾಜಿ ಸದಸ್ಯ ಎಂ.ಕೆ.ಮಂಜೇಗೌಡ, ತಾಪಂ ಅಧ್ಯಕ್ಷೆ ಶಾಮಲಾ, ಉಪಾಧ್ಯಕ್ಷ ರಾಮಕೃಷ್ಣೇಗೌಡ, ಮುಖಂಡ ರಾಮಣ್ಣ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.