Advertisement

ಹಸಿರು ಬಜೆಟ್‌ ಮಂಡನೆಗೆ ಅಶೀಸರ ಒತ್ತಾಯ

06:44 PM Sep 20, 2020 | Suhan S |

ಕಡೂರು: ಪರಿಸರ ಸಂರಕ್ಷಣೆ ಕುರಿತಂತೆ ರಾಜ್ಯ ಸರ್ಕಾರವು ಪ್ರತ್ಯೇಕ ಹಸಿರು ಬಜೆಟ್‌ ಮಂಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ಪಂಚಾಯತ್‌ ಪ್ರತಿನಿಧಿಗಳು, ಅರಣ್ಯ, ತಾಪಂ ಇಲಾಖೆಯ ಅಧಿಕಾರಿ ವರ್ಗದವರೊಂದಿಗೆ ತಾಲೂಕಿನ ಜೀವ ವೈವಿಧ್ಯ ತಾಣಗಳ ಸಂರಕ್ಷಣೆ ಕುರಿತಂತೆ ನಡೆದ ಸಭೆಯಲ್ಲಿ ವಿಷಯ ಮಂಡಿಸಿ ಅವರು ಮಾತನಾಡಿದರು.

ಕೃಷಿ ಭೂಮಿ, ಕೆರೆ-ಕಟ್ಟೆ, ತೋಟ, ಗುಡ್ಡಗಾಡು ಮುಂತಾದ ಪ್ರದೇಶಗಳನ್ನು ಮೂಲ ಸ್ವರೂಪದಲ್ಲಿಯೇ ಉಳಿಸಿಕೊಳ್ಳುವ ಸುಸ್ಥಿರ ಅಭಿವೃದ್ಧಿ ಯೋಜನೆ ಜಾರಿ ಕುರಿತಂತೆ ಮಂಡಳಿಯೂ ರಾಜ್ಯ ಮಟ್ಟದಲ್ಲಿ ಪ್ರವಾಸ ನಡೆಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.

ಅತಿವೃಷ್ಟಿ, ಅನಾವೃಷ್ಠಿ, ಕೊರೊನಾ ಮುಂತಾದ ಪ್ರಾಕೃತಿಕ ವಿಕೋಪದಿಂದ ಅಭಿವೃದ್ಧಿಗೆ ತೊಂದರೆಯಾಗಿದೆ. ಸುಸ್ಥಿರ ಅಭಿವೃದ್ಧಿ ಈಗ ಅನಿವಾರ್ಯವಾಗಿದೆ. 2030 ರ ವೇಳೆಗೆ ರಾಜ್ಯವು ಯಾವ ರೀತಿಯ ಸುಸ್ಥಿರ ಅಭಿವೃದ್ಧಿ ಹೊಂದಬೇಕುಎಂಬ ಬಗ್ಗೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಈ  ನಿಟ್ಟಿನಲ್ಲಿ ಸರ್ಕಾರ ಹಸಿರು ಬಜೆಟ್‌ ಮಂಡಿಸಿದಲ್ಲಿ ಇದಕ್ಕೆ ಪೂರಕವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕಡೂರು ತಾಲೂಕಿನ ಹೊಗರೆಖಾನ್‌ ಗಿರಿ ಪ್ರದೇಶವನ್ನು ಜೀವ ವೈವಿಧ್ಯ ತಾಣ ಎಂದು ಘೋಷಿಸಲಾಗಿದೆ. ಇದೇ ರೀತಿ ಬಾಸೂರು ಅಮೃತ ಮಹಲ್‌ ಕಾವಲು ಪ್ರದೇಶದಲ್ಲಿ ಅಮೂಲ್ಯ ಕೃಷ್ಣಮೃಗಗಳಿರುವುದರಿಂದ ಹಾಗೂ ಜಾನುವಾರು ಕಾವಲು ತಳಿಗಳ ಅಭಿವೃದ್ಧಿ ನಡೆಯುತ್ತಿರುವುದರಿಂದ ಇದನ್ನು ಕೂಡ ಜೀವ ವೈವಿದ್ಯ ತಾಣ ಎಂದು ಘೋಷಿಸಲು ಮಂಡಳಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಿದ್ಧವಿದೆ ಎಂದು ಹೇಳಿದರು.

Advertisement

ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳನ್ನು ಈ ರೀತಿ ತಾಣಗಳ ಬಗ್ಗೆ ಮಾಹಿತಿ ಕೇಳಿದಾಗ ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ| ದೇವರಾಜ್‌ನಾಯ್ಕ ಸಖರಾಯಪಟ್ಟಣದ ಶಕುನಗಿರಿ ಮತ್ತು ಹೇಮಗಿರಿ ಶ್ರೀ ಮಲ್ಲಿಕಾರ್ಜುನಸ್ವಾಮಿ ಬೆಟ್ಟ ಪ್ರದೇಶವನ್ನು ಸೇರಿಸ ಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದಾಗ ಅದರ ಬಗ್ಗೆ ಮಾಹಿತಿ ಸಂಗ್ರಹಿಸಿ ಕೈಪಿಡಿ ಕಳುಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಮಂಡಳಿಯ ಅಧಿಕಾರಿ ಪ್ರೀತಮ್‌ ಮಾತನಾಡಿ, ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಸಂಬಂಧ ಸ್ಥಳೀಯ ಮಟ್ಟದ ಸಮಿತಿಗಳ ರಚನೆಯಾಗಬೇಕು. ವಿಶೇಷ ಪ್ರದೇಶಗಳ ಗುರುತಿಸುವಿಕೆ ಕೆಲಸವಾಗಬೇಕು.ಈಗಾಗಲೇ ಘೋಷಿತವಾಗಿರುವ ಹೊಗರೆಖಾನ್‌ಗಿರಿ ಪ್ರದೇಶವನ್ನು ಯಾವ ರೀತಿ ಸಂರಕ್ಷಿಸಬೇಕು ಎಂಬ ಬಗ್ಗೆ ಸ್ಥಳೀಯ ಮಟ್ಟದ ಅರಣ್ಯ ಮತ್ತು ಪಂಚಾಯತ್‌ ವ್ಯಾಪ್ತಿಯ ಅಧಿ ಕಾರಿಗಳು ಒಂದು ಸ್ಥೂಲವಾದ ವರದಿಯನ್ನು ಮಂಡಳಿಗೆ ಸಲ್ಲಿಸಲು ಕೋರಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ ಮಾತನಾಡಿ, ಹೊಗರೇಖಾನ್‌ ಗಿರಿ ಪ್ರದೇಶ ಸುತ್ತ ಟ್ರಂಚ್‌ ಮಾಡುವುದು, ಚಿಕ್ಕಮಗಳೂರು ಗಿರಿ ಪ್ರದೇಶ ವ್ಯಾಪ್ತಿಯಲ್ಲಿರುವ ಶೋಲಾ ಅರಣ್ಯ ಸಂರಕ್ಷಣೆ ಕುರಿತಂತೆ ಮಂಡಳಿಯು ಸರ್ಕಾರಕ್ಕೆ

ಒತ್ತಡ ಹಾಕಬೇಕು. ಕೆರೆಗಳ ಪುನಃಶ್ಚೇತನಕ್ಕೆ ಗ್ರಾಪಂ ಮಟ್ಟದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದಾಗ ಸಭೆ ಅನುಮೋದಿ ಸಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷೆ ಪ್ರೇಮಾಬಾಯಿ ಕೃಷ್ಣಮೂರ್ತಿ ವಹಿಸಿದ್ದರು. ಸಾಮಾಜಿಕ ಅರಣ್ಯ ಡಿಸಿಎಫ್‌ ಶರಣಬಸಪ್ಪ, ಇಒ ದೇವರಾಜ ನಾಯ್ಕ ಇದ್ದರು. ಸಭೆಯ ಬಳಿಕ ಮಂಡಳಿಯ ಅಧ್ಯಕ್ಷರು ಮತ್ತು ಅಧಿಕಾರಿಗಳನ್ನೊಳಗೊಂಡ ತಂಡ ಹೊಗರೇಖಾನ್‌ ಗಿರಿ ಮತ್ತು ಹೇಮಗಿರಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು

Advertisement

Udayavani is now on Telegram. Click here to join our channel and stay updated with the latest news.

Next