ಸಿರುಗುಪ್ಪ: ತಾಲೂಕು ಮುದೇನೂರು ಗ್ರಾಮದ 152 ಸಂತ್ರಸ್ತರು ತಮಗೆ ನಿವೇಶನ ಹಂಚಿಕೆ ಮಾಡಿ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ತಾಲೂಕು ಕಚೇರಿ ಮುಂದೆ ಮುದೇನೂರು ಗ್ರಾಮದ ನೆರೆ ಸಂತ್ರಸ್ತರ ಹೋರಾಟ ಸಮಿತಿ ಮತ್ತು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಧರಣಿ ನಡೆಸಿದರು.
ನೆರೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಎಸ್. ವೀರೇಶ್ ಮಾತನಾಡಿ, 2009ರಲ್ಲಿ ವೇದಾವತಿ ಹಗರಿ ನದಿ ನೀರು ಮತ್ತು ಮಳೆ ಸುರಿದಿದ್ದರಿಂದ ಗ್ರಾಮಕ್ಕೆ ನೀರು ನುಗ್ಗಿ ಮನೆಗಳು ಹಾನಿಯಾಗಿ ವಾಸಮಾಡಲು ಯೋಗ್ಯವಿಲ್ಲವೆಂದು ಅಲ್ಲದೆ ಪದೇ ಪದೇ ವೇದಾವತಿ ಹಗರಿ ನದಿಯ ನೀರು ಗ್ರಾಮಕ್ಕೆ ನುಗ್ಗುತ್ತವೆ ಎನ್ನುವ ಕಾರಣಕ್ಕೆ ನಮ್ಮ ಗ್ರಾಮದ ಹತ್ತಿರ ನವಗ್ರಾಮ ನಿರ್ಮಾಣ ಮಾಡಲಾಯಿತು.
ಇದರಲ್ಲಿ 327 ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಆದರೆ 175 ಜನಕ್ಕೆ ಮಾತ್ರ ಆಸರೆ ಮನೆ ಹಂಚಿಕೆ ಮಾಡಿ, 152 ಜನ ಫಲಾನುಭವಿಗಳಿಗೆ ಇಲ್ಲಿಯವರೆಗೆ ಆಸರೆ ಯೋಜನೆ ಮನೆಯನ್ನು ನಿರ್ಮಾಣಮಾಡಿಲ್ಲ, ಖಾಲಿ ನಿವೇಶನವನ್ನು ಕೂಡ ನೀಡಿ ಹಕ್ಕುಪತ್ರ ಹಂಚಿಕೆ ಮಾಡಿಲ್ಲ. ಇದರಿಂದಾಗಿ 152 ಕುಟುಂಬಗಳು ಕಳೆದ 11 ವರ್ಷಗಳಿಂದ ಮುರುಕಲು ಮನೆಯಲ್ಲಿಯೇ ವಾಸ ಮಾಡುತ್ತಿದ್ದೇವೆ. ಖಾಲಿ ನಿವೇಶನಕ್ಕೆ ಹಕ್ಕಪತ್ರ ನೀಡಿದರೆ ನಾವಾದರೂ ಮನೆ ಕಟ್ಟಿಕೊಳ್ಳುತ್ತೇವೆಂದು ಕಳೆದ 9ವರ್ಷಗಳಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೆ ಇಲ್ಲಿಯವರೆಗೂ ನಮಗೆ ಖಾಲಿ ನಿವೇಶನದ ಹಕ್ಕುಪತ್ರವನ್ನಾಗಲಿ ಅಥವಾ ಆಸರೆ ಯೋಜನೆಯಡಿ ಮನೆಗಳನ್ನು ಕಟ್ಟಿಕೊಟ್ಟಿಲ್ಲ. ನಮ್ಮ ಬದುಕು ಮೂರಾಬಟ್ಟೆಯಾಗಿದೆ.
ಕಳೆದ 9 ವರ್ಷಗಳಿಂದಲೂ ಅಧಿಕಾರಿಗಳು ನಿಮಗೆ ಮನೆ ಕಟ್ಟಿಸಿಕೊಡುತ್ತೇವೆ. ಇಲ್ಲವೆ ನಿವೇಶನ ಹಂಚಿಕೆ ಮಾಡುತ್ತೇವೆ ಎಂದು ಭರವಸೆ ನೀಡುತ್ತಲೇ ಬಂದಿದ್ದಾರೆ. ಇದರಿಂದಾಗಿ ನಾವು ಬದುಕು ನಡೆಸುವುದು ಕಷ್ಟಕರವಾಗಿದೆ. ಇನ್ನಾದರೂ ಸರ್ಕಾರ ನಮ್ಮ ಸಂಕಷ್ಟಕ್ಕೆ ಸ್ಪಂದಿಸಿ ನಿವೇಶನ ಹಂಚಿಕೆ ಮಾಡಿ, ಮನೆ ಕಟ್ಟಿಕೊಟ್ಟು ಹಕ್ಕುಪತ್ರಗಳನ್ನು ನೀಡಬೇಕೆಂದು ಆಗ್ರಹಿಸಿದರು.
ಸಂತ್ರಸ್ಥೆ ಸಣ್ಣಮ್ಮ ಮಾತನಾಡಿ, ಮುರುಕಲು ಗುಡಿಸಲು, ಮನೆಗಳಲ್ಲಿಯೇ ಬದುಕು ಸಾಗಿಸುತ್ತಿದ್ದೇವೆ. ನಾವು ಅನೇಕ ಬಾರಿ ನಮ್ಮ ಸಮಸ್ಯೆ ಪರಿಹರಿಸಿ ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲವೆಂದು ಆರೋಪಿಸಿದರು. ಮುಖಂಡರಾದ ಎಚ್ .ಬಿ. ಗಂಗಪ್ಪ, ಬಿ. ಅಡಿವೆಪ್ಪ, ಮಲ್ಲಪ್ಪ, ಮಾರೆಪ್ಪ, ಸಿದ್ದಪ್ಪ, ಹನುಮೇಶ, ಎಚ್. ವೀರೇಶ, ಎಸ್. ರಫಿ, ಸಣ್ಣಯ್ಯ, ಬಿ.ಹನುಮೇಶ, ನಾಡಂಗ ಚಂದ್ರ ಮತ್ತು ಸಂತ್ರಸ್ಥರು ಇದ್ದರು.