ದೊಡ್ಡಬಳ್ಳಾಪುರ: ತಾಲೂಕಿನ ಕೆಳಗಿನನಾಯಕ ರಾಂಡಹಳ್ಳಿ ಗ್ರಾಮದಲ್ಲಿ ಕಂದಾಯ ಗ್ರಾಮ ಘೋಷಣೆಯಾಗದೇ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದೆ.
ಇದಲ್ಲದೇ ಒಳ ಮೀಸಲಾತಿ ರದ್ದು, ಅರಣ್ಯ ಇಲಾಖೆ ಕಿರುಕುಳ ನಡೆಯುತ್ತಿದ್ದು, ಗ್ರಾಮದ ಮುಖಂಡರು, ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದ ಹೊರತು ಮತದಾನದಲ್ಲಿ ಭಾಗವಹಿಸದೇ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ತಾಲೂಕಿನ ಕೆಳಗಿನನಾಯಕರಾಂಡಹಳ್ಳಿ ಗ್ರಾಮ ಸ್ಥರು ಮತದಾನ ವಿರೋಧಿಸಿ ನಡೆದ ಸುದ್ಧಿ ಗೋಷ್ಠಿ ಯಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯ ಕೃಷ್ಣನಾಯಕ್, ಜನಪ್ರತಿನಿಧಿಗಳು ಚುನಾವಣೆ ಸಂದರ್ಭದಲ್ಲಷ್ಟೇ ಬಂದು ಆಶ್ವಾಸನೆ ನೀಡುತ್ತಾರೆ ಹೊರತು ಉಳಿದಂತೆ ಇತ್ತ ಸುಳಿಯುವುದೇ ಇಲ್ಲ.
ಗ್ರಾಮದಲ್ಲಿ 140 ಕುಟುಂಬಗಳು ಇವೆ. 900 ಜನ ಸಂಖ್ಯೆ ಇದ್ದು 486 ಮತದಾರರು ಇದ್ದಾರೆ. ನಾವು ಯಾರೂ ಮತದಾನದಲ್ಲಿ ಭಾಗವಹಿಸುವುದಿಲ್ಲ. ಸರ್ಕಾರದಿಂದ ದೊರೆಯುವ ಅವಕಾಶಗಳಿಂದ ವಂಚಿತರಾಗಿದ್ದೇವೆ. ಲಂಬಾಣಿ ಜನಾಂಗವನ್ನು ಅಲೆ ಮಾರಿಗಳು ಎಂದು ಕುಂಟು ನೆಪ ಹೇಳುತ್ತ ನಮ್ಮನ್ನು ಎಲ್ಲಾ ರೀತಿಯಲ್ಲಿ ಕಡೆಗಣಿಸಲಾಗಿದೆ. ನಮ್ಮ ಬೇಡಿಕೆಗಳು ಈಡೇರುವವರಿಗೆ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದರು.
90ರ ದಶಕದಲ್ಲೇ ಅಂಗೈ ಅಗಲದಷ್ಟು ಗೋಮಾಳ ಜಮೀನನ್ನು ನಮ್ಮ ಹೆಸರಿಗೆ ಖಾತೆ ಮಾಡಿ ಕೊಡಲಾಗಿತ್ತು. ಇದರಲ್ಲಿ ನಾವು ಕೃಷಿ ಮಾಡುತ್ತ ಜೀವನ ನಡೆಸುತ್ತಿದ್ದೆವು. ಇನ್ನೂ ಕೆಲವರು ನಮೂನೆ57, ನಮೂನೆ 53 ಅರ್ಜಿ ಹಾಕಿ ಉಳುಮೆ ಮಾಡುತ್ತಿದ್ದಾರೆ. ಈಗ ಏಕಾಏಕಿ ಅರಣ್ಯ ಇಲಾಖೆ ಅಧಿಕಾರಿಗಳು ಈ ಭೂಮಿ ಅರಣ್ಯ ಇಲಾಖೆಗೆ ಒಳಪಟ್ಟಿದೆ ಎಂದು ಕಾಲುವೆ ತೊಡಲು ಮುಂದಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಒಳ ಮೀಸಲಾತಿಯಿಂದ ಸಮುದಾಯಕ್ಕೆ ಅನ್ಯಾಯ: ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಗೋಪಾಲ್ ನಾಯಕ್ ಮಾತನಾಡಿ, ಚುನಾವಣೆ ಗಿಮಿಕ್ ಸಲುವಾಗಿ ಜಾರಿಗೆ ತರಲು ಮುಂದಾಗಿರು ಒಳ ಮೀಸಲಾತಿಯಿಂದ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ. ಇದನ್ನು ಕೂಡಲೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರ ಬೇಡಿಕೆಗಳು: ಕೆಳಗಿನನಾಯಕರಾಂಡನಹಳ್ಳಿ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಘೋಷಿಸಬೇಕು. ಗೋಮಾಳ ಭೂಮಿಯಲ್ಲಿ ದಶಕಗಳಿಂದ ಉಳುಮೆ ಮಾಡುತ್ತಿರುವ ರೈತರ ಹೆಸರಿಗೆ ಖಾತೆ ಮಾಡಿಸಬೇಕು. ಅರಣ್ಯ ಇಲಾಖೆ ವತಿಯಿಂದ ರೈತರಿಗೆ ನೀಡುತ್ತಿರುವ ಕಿರುಕುಳ ನಿಲ್ಲಿಬೇಕು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಒಳ ಮೀಸಲಾತಿ ಆದೇಶ ಹಿಂಪಡೆಯಬೇಕು. ರೈತರ ಮೇಲೆ ಹಾಕಿರುವ ಕ್ರಿಮಿನಲ್ ಮೊಕದ್ದಮೆ ಗಳನ್ನು ಹಿಂದಕ್ಕೆ ಪಡೆಯಬೇಕು. ಗ್ರಾಮಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದರು.