Advertisement

6ನೇ ವೇತನ ಆಯೋಗ ಅನುಷ್ಠಾನ ಕೂಗಿಗೆ ಬಲ

04:39 PM Apr 05, 2021 | Team Udayavani |

ಹುಬ್ಬಳ್ಳಿ: ಸಾರಿಗೆ ನೌಕರರನ್ನು ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕೆನ್ನುವ ಕೂಗು ಇದೀಗ ಮುಷ್ಕರದರೂಪ ಪಡೆದಿದ್ದು, ವಾಣಿಜ್ಯ ನಗರಿಯಲ್ಲಿ ಹೊತ್ತಿದ ಕಿಡಿ ರಾಜ್ಯವ್ಯಾಪಿ ಆವರಿಸಿದೆ. ಸರಕಾರಿ ನೌಕರರ ಬದಲು ಇದೀಗ 6ನೇ ವೇತನ ಆಯೋಗದ ಅನುಷ್ಠಾನಕ್ಕೆ ವಾಲಿದ್ದು, ನಾಡೋಜ ಡಾ|ಪಾಟೀಲ ಪುಟ್ಟಪ್ಪ ಅವರು ಈ ಹೋರಾಟದ ರೂವಾರಿಯಾಗಿದ್ದರು.

Advertisement

ಸರಕಾರಿ ನೌಕರರಿಗೆ ಅನ್ವಯಿಸುವ ಬಹುತೇಕನಿಯಮಗಳು ಅನ್ವಯವಾಗುತ್ತವೆ. ಆದರೆ ಅವರಿಗೆನೀಡುವ ವೇತನ, ಸೌಲಭ್ಯ ತಮಗ್ಯಾಕೆ ಇಲ್ಲ ಎನ್ನುವತಾರತಮ್ಯದ ಆಕ್ರೋಶ ಸರಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎನ್ನುವ ಅಭಿಪ್ರಾಯಗಳು ಹುಟ್ಟಿಕೊಂಡವು. ನೌಕರರ ಈ ಬೇಡಿಕೆಗೆ ಕರ್ನಾಟಕರಾಜ್ಯ ನಿಗಮಗಳ ನೌಕರರ ಮೂಲಭೂತ ಹಕ್ಕುಗಳ ವಿಚಾರ ವೇದಿಕೆ ಕಲ್ಪಿಸಿತು. ವೇತನ ಹಾಗೂ ಪಿಂಚಣಿ ಎರಡು ಅಂಶಗಳ ಮೇಲೆ 2015ರಲ್ಲಿ ಸಮಾನ ಮನಸ್ಕ ಸಾರಿಗೆ ನೌಕರರು ಈ ವೇದಿಕೆ ಹುಟ್ಟು ಹಾಕಿದರು.ಒಂದು ವರ್ಷಗಳ ಕಾಲ ಅಡಾಕ್‌ ಸಮಿತಿ ವೇದಿಕೆರೂಪುರೇಷೆ ಹೇಗಿರಬೇಕು ಎನ್ನುವ ಅಧ್ಯಯನ, ಸಲಹೆ-ಸೂಚನೆ ಪಡೆದು 2016 ಜನವರಿಯಲ್ಲಿ ವೇದಿಕೆ ಅಧಿಕೃತವಾಗಿ ನೌಕರರ ನಡುವೆ ಬಂತು.

ವೇದಿಕೆಯ ಸಮಗ್ರತೆ: ಸಾರಿಗೆ ನೌಕರ ಅಥವಾ ಅಧಿಕಾರಿ ನಿವೃತ್ತನಾದರೆ ಇಂದು 3000 ರೂ. ಪಿಂಚಣಿ ಮಾತ್ರ. ಸೇವೆಯಲ್ಲಿ ಇದ್ದಾಗಲೂ ಕಡಿಮೆವೇತನ, ನಿವೃತ್ತಿಯನಂತರ ಪಿಂಚಣಿಇಲ್ಲ ಎನ್ನುವ ನೋವು ಸಾರಿಗೆ ನೌಕರರಲ್ಲಿ ಇತ್ತು.ಕೇವಲ ಕಾರ್ಮಿಕರಿಗೆ ಮಾತ್ರ ಸಂಘಟನೆಗಳು ಸೀಮಿತವಾಗಿದ್ದ ಸಂದರ್ಭದಲ್ಲಿ ವೇದಿಕೆ ಹೊಸಭಾಷ್ಯ ಹುಟ್ಟು ಹಾಕಿತು. ಇದರಲ್ಲಿ ನಾಲ್ಕನೇ ದರ್ಜೆಯ ನೌಕರನಿಂದ ಹಿಡಿದು ಆಯ್ಕೆ ಶ್ರೇಣಿ ಹಂತದ ಅಧಿಕಾರಿಗಳು ಸದಸ್ಯರಾಗಿದ್ದಾರೆ. ಕಾರಣ ಇದೊಂದು ಮುಷ್ಕರ ರಹಿತವಾದ ಸಂಘಟನೆ, ಸರಕಾರದ, ಜನಪ್ರತಿನಿಧಿಗಳ ಮನವೊಲಿಸಿ ಸಾರಿಗೆಸೇವೆಗೆ ಯಾವುದೇ ಸಮಸ್ಯೆಯಾಗದಂತೆ ಜನ್ಮ ತಾಳಿದಸಂಘಟನೆ ಎನ್ನುವ ಕಾರಣಕ್ಕೆ ಸದಸ್ಯತ್ವದಲ್ಲಿ ವೈವಿಧ್ಯತೆ ಇದೆ. ಹೀಗಾಗಿ ಕೇವಲ ಮೂರು ವರ್ಷದಲ್ಲಿ 28ಸಾವಿರ ನೌಕರರ ಬಲ ಗಳಿಸಲು ಸಾಧ್ಯವಾಯಿತು.

ಶಕ್ತಿಯಾಗಿದ್ದ ಪಾಪು: ಸಾರಿಗೆ ನೌಕರರ ಈ ಬೇಡಿಕೆಗೆ ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅವರ ಬೆಂಬಲ ದೊಡ್ಡ ಶಕ್ತಿಯಾಗಿತ್ತು. ಸಾರಿಗೆ ನೌಕರರ ಬವಣೆಗಳನ್ನು ಪತ್ರಗಳ ಮೂಲಕ ಸರಕಾರಕ್ಕೆ ಚಾಟಿಬೀಸಿದ ಪರಿಣಾಮ ಬೇಡಿಕೆಗೆ ದೊಡ್ಡ ಮಟ್ಟದ ಧ್ವನಿ ದೊರೆಯಿತು. ಜನಪ್ರತಿನಿಧಿ ಗಳಿಗೆ ಪತ್ರಚಳವಳಿ, ಟ್ವಿಟರ್‌ ಚಳವಳಿ, ಕಪ್ಪುಪಟ್ಟಿ ಚಳವಳಿ ಹೀಗೆ ಶಾಂತಿಯುತವಾದ ಆಕ್ರೋಶ ಸರಕಾರದ ಹಂತದಲ್ಲಿಚರ್ಚೆಗೆ ಆಗುವಷ್ಟು ಸದ್ದು ಮಾಡಿತು. ಸಾರಿಗೆ ನೌಕರರನ್ನಾಗಿ ಪರಿಗಣಿಸಲು ಸಾಧಕ-ಬಾಧಕ ಅಧ್ಯಯನಕ್ಕೆ ಹಿರಿಯ ಐಎಎಸ್‌ ಅಧಿಕಾರಿಗಳ ಸಮಿತಿ ರಚನೆಯಾಗಿತ್ತು. ಅಧಿವೇಶನದಲ್ಲಿ ಶಾಸಕರು ಸರಕಾರವನ್ನು ಪ್ರಶ್ನಿಸಿದರು. 2020 ಫೆಬ್ರವರಿ 20ರಂದು ಬೆಂಗಳೂರಿನಲ್ಲಿ ನಡೆದ ಬೃಹತ್‌ ಪ್ರತಿಭಟನೆ ಸರಕಾರದ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಪ್ರೇರಣೆ ನೀಡಿತು.

ಹೋರಾಟ ಸ್ವರೂಪ ಬದಲು: ಪಕ್ಕದ ಆಂಧ್ರಪ್ರದೇಶದಲ್ಲಿ ಸಾರಿಗೆ ನೌಕರರನ್ನು ಸರಕಾರಿನೌಕರರನ್ನಾಗಿ ಮಾಡಿರುವುದು ವೇದಿಕೆ ಹೋರಾಟಕ್ಕೆಇನ್ನಷ್ಟು ಬಲ ಸಿಕ್ಕಂತಾಯಿತು. ಸರಕಾರದ ಗಮನಸೆಳೆಯುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಸಾರಿಗೆ ನೌಕರರ ಹೋರಾಟ ನಿರ್ಲಕ್ಷಿಸಿದ ಪರಿಣಾಮ ಮುಷ್ಕರ ಸ್ವರೂಪ ಪಡೆಯಿತು. ನೌಕರರ ಸಿಟ್ಟಿನ ಕಟ್ಟೆಯೊಡೆದು 2020 ಡಿಸೆಂಬರ್‌ 11ರಿಂದ ನಾಲ್ಕುದಿನಗಳ ಕಾಲ ಬಸ್‌ ರಸ್ತೆಗಿಳಿಯದಂತಾಯಿತು.ನಾಯಕ ರಹಿತವಾಗಿ ನಡೆದ ಮುಷ್ಕರ ಸರಕಾರಿ ನೌಕರರ ಬೇಡಿಕೆ ಬದಲು 6ನೇ ವೇತನ ಆಯೋಗದಅನುಷ್ಠಾನದ ಬೇಡಿಕೆಯ ಹಂತಕ್ಕೆ ಬಂದು ನಿಲ್ಲಿಸಿದೆ.

Advertisement

ಸಾಧ್ಯಾಸಾಧ್ಯತೆಗಳ ಚರ್ಚೆ: ಸರಕಾರ 9 ಬೇಡಿಕೆಗಳಲ್ಲಿ 8 ಈಡೇರಿಸಿರುವ ಅಧಿಕೃತ ಆದೇಶಗಳು ಹೊರಬಿದ್ದಿವೆ. ಆದರೆ ಕೆಲ ಬೇಡಿಕೆಗಳನ್ನು ಸಾರಿಗೆ ನಿಗಮಗಳಆರ್ಥಿಕ ಸಂಪನ್ಮೂಲದಿಂದಲೇ ಜಾರಿಗೆ ತರಬೇಕಿದೆ. ನಾಲ್ಕು ನಿಗಮಗಳ ಆರ್ಥಿಕ ಸಂಕಷ್ಟದಲ್ಲಿರುವಾಗ 6ನೇ ವೇತನ ಆಯೋಗ ಅನುಷ್ಠಾನಕ್ಕೆ ತಗಲುವಆರ್ಥಿಕ ಹೊರೆ ನಿಗಮಗಳ ಮೇಲೆ ಹಾಕಿದರೆನಾಲ್ಕರಲ್ಲಿ ಎರಡು ನಿಗಮಗಳಲ್ಲಿ ಉಸಿರಾಡುವುದುಕಷ್ಟವಾಗಲಿದೆ. ಇನ್ನು ವೇತನ ಆಯೋಗದ ಬದಲುಹಿಂದಿನಂತೆ ಕೈಗಾರಿಕೆ ಒಪ್ಪಂದದಂತೆ ಶೇ.20-22ವೇತನ ಹೆಚ್ಚಾಗುವ ಸಾಧ್ಯತೆಗಳು ಸಂಸ್ಥೆಯಲ್ಲಿಹರಿದಾಡುತ್ತಿವೆ. ಹೇಗಾದರೂ ಆಗಲಿ ಒಟ್ಟಾರೆವೇತನ ಹೆಚ್ಚಾದರೆ ಸಾಕೆನ್ನುವ ನಿರೀಕ್ಷೆ ನೌಕರರಲ್ಲಿದೆ.ಒಂದು ವೇಳೆ ಮುಷ್ಕರಕ್ಕೆ ಹೋದರೆ ನಿತ್ಯ 20-22 ಕೋಟಿ ರೂ. ಸಾರಿಗೆ ನಷ್ಟವಾಗಲಿದೆ.

ಸರಕಾರಿ ನೌಕರರನ್ನಾಗಿ :

ಪರಿಗಣಿಸಬೇಕೆನ್ನುವ ಹೋರಾಟ ಮುಷ್ಕರ ರಹಿತವಾಗಿತ್ತು. ಹಲವು ಶಾಸಕರು, ಸಾಹಿತಿಗಳು, ಹೋರಾಟಗಾರರು ಬೆಂಬಲ ವ್ಯಕ್ತಪಡಿಸಿದ್ದರು. ಬೆಂಗಳೂರಿನಲ್ಲಿ 20 ಸಾವಿರಕ್ಕೂ ಹೆಚ್ಚು ನೌಕರರು ಪಾಲ್ಗೊಂಡಿದ್ದರು. ಸಾರಿಗೆ ಬಸ್‌ಗಳ ಸಂಚಾರಕ್ಕೆ ತೊಂದರೆಯಾಗಿರಲಿಲ್ಲ. ಕಾರ್ಮಿಕರು, ಅಧಿಕಾರಿಗಳು ಎನ್ನುವ ಬೇಧ ಇಲ್ಲಿಲ್ಲ.ಮುಂದೆಯೂ ಮೂಲ ಉದ್ದೇಶದಂತೆ ಸರಕಾರದ ಮೇಲೆ ಒತ್ತಡ ಹಾಕುವ ಕೆಲಸ ಆಗಲಿದೆ. ತಿಪ್ಪೇಶ್ವರ ಅಣಜಿ, ರಾಜ್ಯ ಪ್ರಧಾನ ಕಾರ್ಯದರ್ಶಿ

 

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next