ಕನಕಪುರ: ಕೆ.ಪಿ.ನಂಜುಂಡಿ ಅವರಿಗೆ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿಯ 87 ಕೋಟಿ ರೂ. ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ, ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ನಗರದ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಕೆಎನ್‌ಎಸ್ ವೃತ್ತದವರೆಗೂ ಮುಖ್ಯ ರಸ್ತೆಗಳಲ್ಲಿ ಕಾಲ್ನಡಿಗೆ ಜಾಥಾ ನಡೆಸಿದ ಪ್ರತಿಭಟನಾಕಾರರು, ನಗರದ ಚನ್ನಬಸಪ್ಪ ವೃತ್ತದ ಬಳಿ ರಸ್ತೆ ತಡೆ ನಡೆಸಿ ಸಿಎಂ ಬಿಎಸ್‌ವೈ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿ ನಂತರ ವಿಶ್ವಕರ್ಮ ಮಹಾಸಭಾದ ಯುವ ಘಟಕದ ರಾಜ್ಯಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಸಿಎಂ ಯಡಿಯುರಪ್ಪನವರು ಕೊಟ್ಟ ಭರವಸೆ ಮರೆತು ಸಮುದಾಯವನ್ನು ರಾಜಕೀಯವಾಗಿ ತುಳಿಯುತ್ತಿದ್ದಾರೆ ಎಂದು ದೂರಿದರು.
ಬಿಜೆಪಿಗಾಗಿ ದುಡಿದಿದ್ದಾರೆ: ಹಿಂದುಳಿದ ವರ್ಗಗಳ ಸಂಖ್ಯೆಯಲ್ಲಿ ವಿಶ್ವಕರ್ಮ ಸಮಾಜ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 45 ಲಕ್ಷ ಜನಸಂಖ್ಯೆ ಹೊಂದಿದೆ. ಸಮುದಾಯ ಪ್ರತಿನಿಧಿಸುತ್ತಿರುವ ಏಕೈಕ ನಾಯಕ ಕೆ.ಪಿ.ನಂಜುಂಡಿ ಅವರಿಗೆ ಸಿಎಂ ಅವರು ಸೂಕ್ತ ಸ್ಥಾನಮಾನ ನೀಡುವುದಾಗಿ ಪಕ್ಷಕ್ಕೆ ಆಹ್ವಾನಿಸಿದ್ದರು. ಸಿಎಂ ಜೊತೆಯಲ್ಲಿ ನಂಜುಂಡಿ ಅವರು 2 ವರ್ಷ ಪರಿವರ್ತನ ಯಾತ್ರೆ, ಚುನಾವಣಾ ಪ್ರಚಾರ ಪ್ರವಾಸ ಮಾಡಿದ್ದಾರೆ. ವಿಶ್ವಕರ್ಮ ಸಮಾಜ, ಹಿಂದುಳಿದ ವರ್ಗಗಳ ಸಮುದಾಯ ಸಂಘಟನೆ ಮಾಡಿ ಬಿಜೆಪಿಗಾಗಿ ದುಡಿದಿದ್ದಾರೆ. ಬಿಜೆಪಿಯಲ್ಲಿ ಆಯ್ಕೆಯಾಗಿರುವ 105 ಅಭ್ಯರ್ಥಿಗಳ ಗೆಲುವಿನಲ್ಲಿ ನಂಜುಂಡಿ ಅವರು ಬಹಳ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಕೊಟ್ಟ ಭರವಸೆ ಮರೆತು ಸಮಾಜವನ್ನು ರಾಜಕೀಯವಾಗಿ ತುಳಿಯುವಂತಹ ಕೆಲಸ ಮಾಡುತ್ತಿದ್ದಾರೆ. ಇದು ಬೇಸರದ ಸಂಗತಿ. 2 ಬಾರಿ ಸಚಿವ ಸಂಪುಟ ವಿಸ್ತರಣೆಯಾದರೂ ನಂಜುಂಡಿ ಪರ ಯಾವುದೇ ಚರ್ಚೆ ಮಾಡದಿರುವುದು ನೋವಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸೌಧ ಮುತ್ತಿಗೆ: ಮುಂದಿನ ತಿಂಗಳು ಮಂಡಿಸಲಿರುವ ಬಜೆಟ್‌ನಲ್ಲಿ ನಮ್ಮ ಅಭಿವೃದ್ಧಿ ನಿಗಮಕ್ಕೆ 300 ಕೋಟಿ ರೂ.ಅನುದಾನ ಮೀಸಲಿಡಬೇಕು. ಕಳೆದ ಸರ್ಕಾರ ಮಾಡಿದ್ದ ಜಾತಿವಾರು ಜನಗಣತಿ ಬಹಿರಂಗಪಡಿಸಿ ಎಲ್ಲ ಹಿಂದುಳಿದ ವರ್ಗಗಳಿಗೆ ಜಾತಿವಾರು ಒಳಮೀಸಲಾತಿ ಕಲ್ಪಿಸಿಕೊಡಬೇಕು. ತಪ್ಪಿದ್ದಲ್ಲಿ ರಾಜ್ಯಾದ್ಯಂತ ಮನೆಗೊಬ್ಬರಂತೆ ವಿಶ್ವಕರ್ಮ ಸಮಾಜದ ಕುಲ ಬಾಂಧವರು ಹೋರಾಟ ಮಾಡಿ ವಿಧಾನಸೌಧ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಗರಸಭಾ ಸದಸ್ಯ ಶಿವ ರಾಮಾಚಾರಿ, ಮಳವಳ್ಳಿ ತಾಲೂಕಿನ ಅಧ್ಯಕ್ಷ ಸೋಮಶೇಖರ್, ಕಾಳಿಕಾಂಬ ಟ್ರಸ್ಟಿನ ಕಾರ್ಯದರ್ಶಿ ಜಯರಾಮಾಚಾರ್ಯ, ವಿಶ್ವಕರ್ಮ ಯುವ ಘಟಕದ ತಾಲೂಕು ಅಧ್ಯಕ್ಷಶೇಖರ್, ಪುಟ್ಟಸ್ವಾಮಿಚಾರ್ಯ, ತಾಲೂಕು ಗೌರವಾಧ್ಯಕ್ಷ ಕುಮಾರ್ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.