Advertisement
ಮೊನ್ನೆ ನನ್ನ ಹಳೆಯ ಗೆಳತಿಯೊಬ್ಬಳು ಕಾಲ್ ಮಾಡಿ, ಕ್ಷೇಮದ ಬಗ್ಗೆ ವಿಚಾರಿಸುತ್ತಾ “ನಾನು ನಿನ್ನೊಂದಿಗೆ ಓದಲು ಬರುತ್ತೇನೆ. ನಿಮ್ಮ ವಿಶ್ವವಿದ್ಯಾಲಯದಲ್ಲಿ ಅಪ್ಲಿಕೇಷನ್ ಕೊಡೋದು ಯಾವಾಗ?’ ಎಂದು ಕೇಳಿದಳು. ನನಗೆ ಆಶ್ಚರ್ಯ! “ಮದ್ವೆ ಆಗಿ ಒಂದು ಮಗು ಇರುವ ನಿನಗೆ, ಗಂಡ- ಮನೆ- ಮಗು ಬಿಟ್ಟು ಈ ಸಮಯದಲ್ಲಿ ಓದುವ ಆಸೆ ಯಾಕೆ ಬಂತು?’ ಎಂದು ಮರುಪ್ರಶ್ನೆ ಹಾಕಿದೆ. ಅವಳು ಬೇಜಾರಿನಿಂದಲೇ ಉತ್ತರಿಸಿದಳು, “ಗಂಡನಿಗೆ ಜವಾಬ್ದಾರಿಯಿಲ್ಲ. ದಿನವೂ ಕುಡಿದು ಬರುತ್ತಾನೆ. ಜೊತೆಗೆ ಮಗು ಬೇರೆ. ಅವಳ ಭವಿಷ್ಯ ಚೆನ್ನಾಗಿರಬೇಕು ಅಂದ್ರೆ ನಾನು ಓದಿ ಒಳ್ಳೆಯ ಕೆಲಸ ಪಡೆದು ಅವಳನ್ನು ಸಾಕಬೇಕು. ಹಾಗಾಗಿ, ವಿದ್ಯಾಭ್ಯಾಸ ಮುಂದುವರಿಸಲೇಬೇಕು ನಾನೀಗ.’ ಅವಳು ಹೇಳಿದ್ದು ಕೇಳಿ ನನಗೆ ಗೊತ್ತಿಲ್ಲದೇ ನನ್ನ ಕಣ್ಣಲ್ಲಿ ನೀರು ಜಿನುಗಿತು.
Related Articles
Advertisement
ಮದ್ವೆ ಯಾವತ್ತೂ ದುಡುಕಿನ ಸಂಗತಿ ಆಗಬಾರದು. ಸಾಮಾನ್ಯವಾಗಿ ಹೆಣ್ಮಕ್ಕಳ ವಯಸ್ಸು 20 ದಾಟುತ್ತಿದ್ದ ಹಾಗೆಯೇ ಪೋಷಕರಲ್ಲಿ ತಳಮಳ ಶುರುವಾಗುತ್ತದೆ. ವಯಸ್ಸು ಹೆಚ್ಚಾದಂತೆ ತಮ್ಮ ಮಗಳನ್ನು ಯಾರೂ ಒಪ್ಪುವುದಿಲ್ಲ ಎಂಬ ತಲೆಬಿಸಿ ಹುಟ್ಟಿಕೊಳ್ಳುತ್ತದೆ. ಮನೆಯಲ್ಲಿನ ಹೆಣ್ಮಕ್ಕಳ ಕುರಿತು ಸಂಬಂಧಿಕರು ಏನಾದರೂ ಕೊಂಕು ನುಡಿಯುತ್ತಾರೆ ಎಂಬ ಭಯವೂ ಹೆತ್ತವರನ್ನು ಕಾಡುತ್ತಿರುತ್ತದೆ. ಹೀಗೆ ಏನೇನೊ ವಿಷಯಗಳು ಅವರ ತಲೆಯಲ್ಲಿ ಗಿರಕಿ ಹೊಡೆಯುತ್ತಿರುತ್ತವೆ. ಆದರೆ, ಅವಸರದಿಂದಾಗುವ ಅಪಾಯಗಳಿಗೆ ಯಾರು ಹೊಣೆಗಾರರಾಗುತ್ತಾರೆ? ಮದ್ವೆಗೆ ಸ್ವಲ್ಪ ತಡವಾದರೆ ಪ್ರಳಯವೇನೂ ಆಗುವುದಿಲ್ಲ. ಕಾಯುವ ತಾಳ್ಮೆ ಇದ್ದಾಗ ಎಲ್ಲವೂ ಶುಭವಾಗುತ್ತದೆ.
ಪೋಷಕರ ಗಮನಕ್ಕೆ…– ಮಗಳಿಗೆ ವಯಸ್ಸು ಏರುತ್ತಿದೆಯೆಂಬ ಆತಂಕವನ್ನು ಮೊದಲು ತೊರೆಯಿರಿ.
– ಮಗಳ ಭಾವನೆಗೆ ಬೆಲೆಕೊಡಿ.
– ಕೈಹಿಡಿಯುವ ಹುಡುಗನ ಬಗ್ಗೆ ನಾಲ್ಕು ದಿಕ್ಕಿನಿಂದ ವಿಚಾರಿಸಬೇಕು.
– ಆಕೆಯ ಶಿಕ್ಷಣ, ಅಭಿರುಚಿಗೆ ತಕ್ಕಂತೆ ಹುಡುಗನನ್ನು ಹುಡುಕುವುದು ಉತ್ತಮ.
– ಮಗಳ ಮನಸ್ಸಿನಲ್ಲಿ ಯಾರಾದರೂ ಒಳ್ಳೆಯ ಹುಡುಗನಿದ್ದರೆ, ಆ ಬಗ್ಗೆಯೂ ಮಾತುಕತೆ ನಡೆಸಿ. – ಪವಿತ್ರ ಎ. ಆರ್. ಅಂತರಗಟ್ಟೆ, ಕಡೂರು