ಜಗಳೂರು: ಉದ್ಯೋಗ ನೀಡುವಂತೆ ಒತ್ತಾಯಿಸಿ ತಾಲೂಕಿನ ಕ್ಯಾಸೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡಗೊಂಡನಹಳ್ಳಿ ಗ್ರಾಮಸ್ಥರು ಇಲ್ಲಿನ ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಉದ್ಯೋಗ ನೀಡುವಂತೆ ಅರ್ಜಿ ಸಲ್ಲಿಸಿ30 ದಿನಗಳು ಕಳೆದರೂ ಇದವರೆಗೂ ಅರ್ಜಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಏನನ್ನೂ ಹೇಳುತ್ತಿಲ್ಲ. ಉದ್ಯೋಗ ನೀಡಿ ಎಂದರೆ ಪಂಚಾಯಿತಿ ಅಭಿವೃದ್ಧಿ ಅಧಿಧಿಕಾರಿ ನೇಮಕವಾಗಿಲ್ಲ ಎಂದು ಇಲ್ಲದ ಸಬೂಬು ಹೇಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದಮುಖಂಡ ಎಂ.ಬಿ.ಲಿಂಗರಾಜ್ ಮಾತನಾಡಿ, ತಾಲೂಕು ಬರದಿಂದ ತತ್ತರಿಸಿ ಹೋಗಿದೆ. ಜನತೆಗೆ ಕೆಲಸವಿಲ್ಲದಂತಾಗಿದೆ. ಕೂಲಿಕಾರರು ಕೆಲಸ ಕೇಳಿ ತಕ್ಷಣವೇ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಉದ್ಯೋಗ ನೀಡುವಂತೆ ರಾಜ್ಯ ಸರ್ಕಾರವೇ ಆದೇಶಿಸಿದೆ.
ಆದರೆ ಜಗಳೂರು ತಾಲೂಕಿನಲ್ಲಿ ಇದಕ್ಕೆ ಕಿಮ್ಮತ್ತು ಇಲ್ಲವಾಗಿದೆ ಎಂದು ಆರೋಪಿಸಿದರು. ಕ್ಯಾಸೇನಹಳ್ಳಿ ಗ್ರಾಪಂ ವ್ಯಾಪ್ತಿಯ ಜನತೆ ಕೆಲಸವಿಲ್ಲದಂತಾಗಿದೆ. ಬರವನ್ನು ಸಮರ್ಪವಾಗಿ ನಿರ್ವಹಿಸಬೇಕಾಗಿತ್ತು. ಆದರೆ ಗ್ರಾಪಂ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ ತಾಳಿದ್ದಾರೆ.
ಕೂಡಲೇ ಕೆಲಸ ಕೇಳುವ ಸಾರ್ವಜನಿಕರಿಗೆ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು. ಮುಖಂಡ ನಾಗಲಿಂಗಪ್ಪ ವಕೀಲ ಆರ್. ಓಬಳೇಶ್, ಕೂಲಿಕಾರರಾದ ಮಂಜುನಾಥ್, ಕವಿತಮ್ಮ, ಚಂದ್ರಮ್ಮ, ಬಸವರಾಜ್, ಮಹೇಶ್ ಮತ್ತಿತರರಿದ್ದರು.