ಲಕ್ಷ್ಮೇಶ್ವರ: ಪಟ್ಟಣದ ಹೊರವಲಯದಲ್ಲಿರುವ ಐತಿಹಾಸಿಕ ಇತಿಹಾಸವನ್ನು ಹೊಂದಿರುವ ಅಗಸ್ತ್ಯ ತೀರ್ಥ ಬಾವಿಗಳಲ್ಲಿ ಅನೇಕ ದುರ್ಘಟನೆಗಳು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಹೊಂಡಗಳಿಗೆ ತಡೆಗೋಡೆಗಳನ್ನು ನಿರ್ಮಿಸುವಂತೆ ಆಗ್ರಹಿಸಿ ತಾಲೂಕು ಜಯ ಕರ್ನಾಟಕ ಜನಪರ ವೇದಿಕೆ ಲಕ್ಷ್ಮೇಶ್ವರ ಘಟಕ ಹಾಗೂ ತಾಲೂಕು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದವರು ಸೇರಿ ಪುರಸಭೆ ಅಧ್ಯಕ್ಷೆ ಅಶ್ವಿನಿ ಅಂಕಲಕೋಟಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ತಾಲೂಕು ಜಯ ಕರ್ನಾಟಕ ಜನಪರ ವೇದಿಕೆ ತಾಲೂಕು ಅಧ್ಯಕ್ಷ ನಾಗೇಶ ಅಮರಾಪುರ ಹಾಗೂ ಜಿಲ್ಲಾ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಪ್ರಧಾನ ಕಾರ್ಯದರ್ಶಿ ನೀಲಪ್ಪ ಪಡಗೇರಿ, ಅಗಸ್ತ್ಯತೀರ್ಥ ಯಾವುದೇ ರೀತಿ ಅಭಿವೃದ್ಧಿ ಇಲ್ಲದೆ ನಿರ್ಲಕ್ಷ್ಯಕ್ಕೊಳಗಾಗಿ ಹಾಳು ಬೀಳುವಂತಾಗಿದೆ.
ಅಗಸ್ತ್ಯ ತೀರ್ಥಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದರ್ಶನಕ್ಕಾಗಿ ಆಗಮಿಸುತ್ತಾರೆ. ಇಲ್ಲಿರುವ ಎರಡು ಹೊಂಡಗಳಿಗೆ ಯಾವುದೇ ಭದ್ರತೆ ಇಲ್ಲದಂತಾಗಿ ಅನೇಕ ದುರ್ಘಟನೆಗಳಿಗೆ ಕಾರಣವಾಗುತ್ತಿದೆ. ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿರುವುದರಿಂದ ಇಲ್ಲಿನ ಸುತ್ತಮುತ್ತಲಿನ ಜನರಲ್ಲಿ ಭಯದ ವಾತಾವರಣ ಆವರಿಸಿದೆ.
ಈ ಹಿಂದೆಯೂ ಇದೆ ಹೊಂಡದಲ್ಲಿ ಮೂರ್ನಾಲ್ಕು ಸಾವುಗಳು ಸಂಭವಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಇಂತಹ ಘಟನೆಗಳು ಪದೇ ಪದೆ ನಡೆಯುವುದರಿಂದ ಅನೇಕ ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಆದಕಾರಣ ಇನ್ನು 15 ದಿನದ ಒಳಗೆ ಬಾವಿಯ ಸುತ್ತಲೂ ತಡೆಗೋಡೆ ನಿರ್ಮಿಸಬೇಕು. ಇಲ್ಲದಿದ್ದಲ್ಲಿ ಪುರಸಭೆ ಎದುರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು. ಪುರಸಭೆ ಅಧ್ಯಕ್ಷೆ ಅಶ್ವಿನಿ ಅಂಕಲಕೋಟಿ ಅವರು ಮನವಿ ಸ್ವೀಕರಿಸಿ, ಈ ಕುರಿತಂತೆ ಪುರಸಭೆಯ ಎಲ್ಲ ಸದಸ್ಯರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಮೋಹನ ನಂದೆಣ್ಣನವರ, ಸದಾನಂದ ನಂದೆಣ್ಣನವರ, ಮಾಲತೇಶ ರಗಟಿ, ಅಪ್ಪು ಉಮಚಗಿ, ಕಾರ್ತಿಕ ಕುಳಗೇರಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸುರೇಶ ಹಟ್ಟಿ, ಎಂ.ಎಂ. ಹೆಗ್ಗಣ್ಣನವರ, ಎಸ್.ಪಿ. ಕರಕಣ್ಣನವರ, ಮಂಜು ಗದ್ದಿ, ಪರಶುರಾಮ ಹೋರಿ, ಹಾಲಪ್ಪ ಹೋರಿ, ಎಂ.ಜಿ. ಗುರುಮಠ ಇದ್ದರು.