Advertisement

ಅಂತಾರಾಷ್ಟ್ರೀಯ ಕ್ರಿಕೆಟಿಗೆ ಶ್ರೀಲಂಕಾದ ಉಪುಲ್‌ ತರಂಗ ವಿದಾಯ

06:49 PM Feb 23, 2021 | Team Udayavani |

ಕೊಲಂಬೊ : ಶ್ರೀಲಂಕಾ ತಂಡದ ಎಡಗೈ ಬ್ಯಾಟ್ಸ್‌ಮನ್‌ ಹಾಗೂ ವಿಕೆಟ್‌ ಕೀಪರ್‌ ಉಪುಲ್‌ ತರಂಗ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು.

Advertisement

36 ವರ್ಷದ ತರಂಗ 2005ರ ಭಾರತ ಪ್ರವಾಸದ ವೇಳೆ ಅಹ್ಮದಾಬಾದ್‌ನಲ್ಲಿ ಟೆಸ್ಟ್‌ ಪಂದ್ಯ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದರು. 31 ಟೆಸ್ಟ್‌ಗಳಿಂದ 1,754 ರನ್‌ ಪೇರಿಸಿದ ಸಾಧನೆ ಇವರದಾಗಿದೆ. 3 ಶತಕ ಹಾಗೂ 8 ಅರ್ಧ ಶತಕಗಳನ್ನು ಇದು ಒಳಗೊಂಡಿದೆ. 2017ರಲ್ಲಿ ಭಾರತದ ವಿರುದ್ಧವೇ ಪಲ್ಲೆಕೆಲೆಯಲ್ಲಿ ಅಂತಿಮ ಟೆಸ್ಟ್‌ ಆಡಿದ್ದರು.

ಏಕದಿನದಲ್ಲಿ ಹೆಚ್ಚಿನ ಯಶಸ್ಸು
ಉಪುಲ್‌ ತರಂಗ ಏಕದಿನದಲ್ಲಿ ಹೆಚ್ಚಿನ ಯಶಸ್ಸು ಪಡೆದಿದ್ದರು. 235 ಪಂದ್ಯಗಳಿಂದ 6,951 ರನ್‌ ಪೇರಿಸಿದ್ದರು. 15 ಶತಕ, 37 ಅರ್ಧ ಶತಕ ಬಾರಿಸಿದ ಸಾಧನೆ ಇವರದಾಗಿತ್ತು. 26 ಟಿ20 ಪಂದ್ಯಗಳನ್ನಾಡಿ 407 ರನ್‌ ಗಳಿಸಿದ್ದರು. ಏಕದಿನ ತಂಡದ ಉಸ್ತುವಾರಿ ನಾಯಕನಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು.

“ಎಲ್ಲ ಒಳ್ಳೆಯ ಸಂಗತಿಗಳಿಗೂ ಕೊನೆಯಿದೆ. ನನ್ನ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳುವ ಸಮಯ ಇದಾಗಿದೆ. ಮುಂದಿನ ಜೀವನವನ್ನು ಹಳೆಯ ನೆನಪುಗಳೊಂದಿಗೆ ಕಳೆಯುತ್ತೇನೆ’ ಎಂದು ತರಂಗ ಟ್ವೀಟ್‌ ಮಾಡಿದ್ದಾರೆ.

ಕೆಲವೇ ದಿನಗಳ ಅಂತರದಲ್ಲಿ ಲಂಕೆಯ ಇಬ್ಬರು ಕ್ರಿಕೆಟಿಗರು ನಿವೃತ್ತಿ ಘೋಷಿಸಿದಂತಾಯಿತು. ಇದಕ್ಕೂ ಮುನ್ನ ವೇಗಿ ಧಮ್ಮಿಕ ಪ್ರಸಾದ್‌ ಗುಡ್‌ಬೈ ಹೇಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next