Advertisement

ಎತ್ತರಕ್ಕೇರಿದ ವಿಭೀಷಣ, ಭರತತ್ರಯರು, ಧ್ರುವ

11:58 AM Jan 06, 2018 | |

ಸ್ವಭಾವಕ್ಕೆ ಜಾತಿಭೇದವಿಲ್ಲ. ಯಾವುದೇ ಕುಲದಲ್ಲಿ ಹುಟ್ಟಿದರೂ ರಾವಣ ಸ್ವಭಾವವೂ ಬರಬಹುದು, ವಿಭೀಷಣನ ಸ್ವಭಾವವೂ ಬರಬಹುದು ಎನ್ನುವುದಕ್ಕೆ ಇವರಿಬ್ಬರು ಮತ್ತು ರಾಕ್ಷಸ ಕುಲದಲ್ಲಿ ಹುಟ್ಟಿದರೂ ಸಾತ್ವಿಕನಾಗಿ ಬದುಕಬಹುದು ಎಂಬುದಕ್ಕೆ ವಿಭೀಷಣ ಉದಾಹರಣೆ. ಸಾಧನೆಯಿಂದ ಎತ್ತರಕ್ಕೇರಿದ ಭರತ ಹೆಸರಿನ ಮೂವರು ದೇಶವನ್ನು ಆಳಿದ್ದಾರೆ. ಮಕ್ಕಳು ಹೇಗಿರಬೇಕು ಎಂಬುದಕ್ಕೆ ಧ್ರುವ, ತಾಯಿ ಹೇಗಿರಬೇಕೆಂಬುದಕ್ಕೆ ಸುನೀತಿ ನಮ್ಮೆದುರು ತೆರೆದುಕೊಳ್ಳುತ್ತಾರೆ. ಬೆಳಗೆದ್ದು ಇಂತಹವರ ಸ್ಮರಣೆ ಮಾಡಿದರೆ ಸ್ವಲ್ಪ ಪ್ರಭಾವ ನಮ್ಮ ಮೇಲೂ ಆಗಬಹುದು. ಬಹುಜನರ ಮೇಲೆ ಇಂತಹ ಸ್ವಲ್ಪ ಪ್ರಭಾವವಾದರೂ ಒಟ್ಟು ಸಮಾಜದಲ್ಲಿ ದೊಡ್ಡ ಧನಾತ್ಮಕ ಪರಿಣಾಮ ಬೀರುತ್ತದೆ ಎಂಬ ಆಶಯ ಶ್ರೀರಾಜರಾಜೇಶ್ವರಯತಿಗಳದ್ದು, “ಮಂಗಲಾಷ್ಟಕ’ ಮೂಲಕ. 

Advertisement

ಇಕ್ಷ್ವಾಕುಶ್ಚ ವಿಭೀಷಣಶ್ಚ ಭರತಶೊತ್ತಾನಪಾದಧ್ರುವೌ
ಇತ್ಯಾದ್ಯಾ ಭುವಿ ಭೂಭುಜಶ್ಚ ಸತತಂ ಕುರ್ವಂತು ನೋ ಮಂಗಲಮ್‌||

ಇಕ್ಷ್ವಾಕು ಮಹಾರಾಜ ಈ ಮನ್ವಂತರವಾದ ವೈವಸ್ವತಮನುವಿನ ಮಗ. ಪಿತೃ ಕಾರ್ಯಕ್ಕೆ ಆದ್ಯತೆ ನೀಡುವವ. ಧರ್ಮ ಕಾರ್ಯದಲ್ಲಿ ಶ್ರದ್ಧೆಯುಳ್ಳವ. ಇವನಿಂದಾಗಿ ಇಕ್ಷ್ವಾಕು ವಂಶ ಎಂದು ಹೆಸರು ಬಂತು. ದಶರಥ, ರಾಮಚಂದ್ರ, ಮಾಂಧಾತ, ಸಗರ ಮೊದಲಾದ ರಾಜರ್ಷಿಗಳು ಇದೇ ವಂಶದಲ್ಲಿ ಬಂದವರು. 

ವಿಭೀಷಣನ ಸಾತ್ವಿಕತೆ
ರಾವಣನ ತಮ್ಮ ವಿಭೀಷಣ. ರಾವಣ ಎಸಗಿದ ಕೃತ್ಯದಲ್ಲಿ ನ್ಯಾಯ ಮಾರ್ಗವಿಲ್ಲ ಎಂಬುದು ಗೊತ್ತಾದಾಗ ರಕ್ತ ಸಂಬಂಧವನ್ನು ತೊರೆದು ರಾಮಚಂದ್ರನ ಕಡೆಗೆ ಬಂದು ಸೇವೆ ಸಲ್ಲಿಸಿದವ. ಇಲ್ಲಿ ಅಧಿಕಾರವನ್ನು, ಸಂಪತ್ತನ್ನು ಬಯಸದ ವಿಭೀಷಣ ನಮಗೆಲ್ಲರಿಗೂ ಆದರ್ಶಪ್ರಾಯ. ರಾಕ್ಷಸ ವಂಶದಲ್ಲಿ ಹುಟ್ಟಿದರೂ ರಾಮಭಕ್ತನಾಗಿ ಆಂಜನೇಯನಂತೆ ಚಿರಂಜೀವಿ ಎನಿಸಿ ಪ್ರಾತಃಸ್ಮರಣೀಯನಾದ. ವಿಭೀಷಣ, ರಾವಣ, ಕುಂಭಕರ್ಣರು ಸತ್ವ, ರಜ, ತಮೋ ಗುಣದ ಪ್ರತೀಕ. 

 ಭರತನಿಂದಾಯಿತು ಭಾರತ
ಮೂವರು ಭರತರು ಪ್ರಸಿದ್ಧರು. ಒಬ್ಬ ರಾಮಚಂದ್ರನ ತಮ್ಮ ಭರತ. ಈತನೂ ಅಧಿಕಾರವನ್ನು ಬಯಸದೆ, ಅನ್ಯಾಯ ಮಾರ್ಗವನ್ನು ತುಳಿದ ತಾಯಿ ಮಾತಿಗೂ ಬೆಲೆ ಕೊಡದೆ ಆದರ್ಶಪುರುಷನಾಗಿ ಬಾಳಿದವ.  

Advertisement

ಜೈನಧರ್ಮದ ಮೂಲಪುರುಷ 
ಈ ದೇಶಕ್ಕೆ ಭಾರತವೆಂಬ ಹೆಸರು ಬಂದದ್ದು ಇನ್ನೊಬ್ಬ ಭರತನಿಂದ. ಈತ ಋಷಭ ನಾಮಕ ಪರಮಾತ್ಮನ ಹಿರಿಯ ಮಗ. ಋಷಭನನ್ನು ಭಾಗವತ ಪುರಾಣ ಭಗವಂತನ ಅವತಾರ ಎಂದು ಬಣ್ಣಿಸಿದರೆ, ಜೈನರು ಆದಿತೀರ್ಥಂಕರ ಎಂದು ಬಣ್ಣಿಸುತ್ತಾರೆ. ಎರಡು ಬಣ್ಣನೆಯಾದರೂ ಘಟನೆ, ವ್ಯಕ್ತಿ ಒಬ್ಬನೇ. ಋಷಭ ಭರತನಿಗೆ ಪಟ್ಟ ಕಟ್ಟಿ ವೈರಾಗ್ಯ ಶಿಖಾಮಣಿಯಾಗಿ ಬೆತ್ತಲೆಯಾಗಿ ಹೋದ. ಇದು ಹೊಸಧರ್ಮದ ಆವಿಷ್ಕಾರವೆನಿಸಿತು, ಜೈನಪಂಥವಾಯಿತು. ಆಗಿನ ಕಾಲದಲ್ಲಿ ರಾಜರು ವೃದ್ಧರಾದಾಗ ವ್ಯವಹಾರವನ್ನು ಮಕ್ಕಳಿಗೆ ಬಿಟ್ಟುಕೊಟ್ಟು ತಾವು ವಾನಪ್ರಸ್ಥಿಗಳಾಗುವ ಕ್ರಮವಿತ್ತು. ಈಗಿನಂತಲ್ಲ. ಭರತನೂ ಹೀಗೆ ವೈರಾಗ್ಯ ತಾಳಿ ಪುಲಹಾಶ್ರಮಕ್ಕೆ ಹೋದ. ಅಲ್ಲೊಂದು ಜಿಂಕೆಮರಿ ಸಹವಾಸವಾಯಿತು. ಸಾಯುವಾಗ ಜಿಂಕೆಯನ್ನು ನೆನೆಯುತ್ತ ಸತ್ತ ಕಾರಣ ಜಿಂಕೆಯಾಗಿ ಹುಟ್ಟಿದ. ಹಿಂದಿನ ಜನ್ಮದ ಪುಣ್ಯದ ಫ‌ಲವಾಗಿ ಪೂರ್ವಜನ್ಮದ ಸ್ಮರಣೆ ಇತ್ತು. ಪುಲಹಾಶ್ರಮದಲ್ಲಿಯೇ ಇದ್ದು ದೇಹತ್ಯಾಗ ಮಾಡಿದ. ಮೂರನೆಯ ಜನ್ಮದಲ್ಲಿ ಜಡಭರತ ಎನಿಸಿದ. ಅವಧೂತ ಚರ್ಯೆಯಲ್ಲಿದ್ದ. ಸಿಂಧುಸೌವೀರದ (ಪಾಕಿಸ್ಥಾನದ ಪ್ರದೇಶ) ದೊರೆ ರಹೂಗಣ, ಜಡಭರತ ನಿಂದ ಪಲ್ಲಕ್ಕಿಯಲ್ಲಿ ಹೊರಿಸಿ ಕೊಳ್ಳುವಾಗ ಪಲ್ಲಕ್ಕಿ ಅಲು ಗಾಡಿತು. ದೊರೆ ಬೈದ. ಜಡಭರತ ಕೊಟ್ಟ ಉತ್ತರದಿಂದ ಜ್ಞಾನೋ ದಯವಾದ ದೊರೆ ಜಡಭರತ ನಿಂದ ತತ್ತೂ$Ìà ಪದೇಶ ಪಡೆದ. 

ಇನ್ನೊಬ್ಬ ಭರತ ದುಃಶಂತನ ಮಗ. ಇವರು ಚಂದ್ರವಂಶದ ದೊರೆ. ಈ ವಂಶದವರನ್ನು ಭಾರತರು ಎಂದು ಕರೆಯುವ ಕ್ರಮವಿದೆ. ದುಃಶಂತ- ಶಕುಂತಲೆ ದಂಪತಿಗೆ ಹುಟ್ಟಿದವ ಭರತ. ಈ ಕಥಾನಕ ಕಾಳಿದಾಸನ ನಾಟಕ “ಶಾಕುಂತಳಾ’ದಲ್ಲಿ ಪ್ರಸಿದ್ಧ. ಬಾಲಕನಾಗಿದ್ದಾಗ ಹುಲಿಯೊಂದಿಗೆ ಕಾದಾಡಿದ್ದ ಎಂಬುದು ಭರತನ ಎದೆಗಾರಿಕೆಗೆ ಸಾಕ್ಷಿ. ಸರ್ವದಮನ ಎಂದು ಈತನಿಗೆ ಬಾಲ್ಯದಲ್ಲಿಯೇ ಹೆಸರಿತ್ತು. ಈ ಕುಲದವರಿಗೆಲ್ಲ ಭರತಕುಲದವರೆಂಬ ಹೆಸರನ್ನು ತಂದುಕೊಟ್ಟವನೀತ.  

 ಸುರುಚಿ-ಸುನೀತಿ: ಯಾರು ಮುಖ್ಯರು?
ಸ್ವಾಯಂಭುವ ಮನುವಿನ ಇಬ್ಬರು ಗಂಡುಮಕ್ಕಳಲ್ಲಿ ಉತ್ತಾನಪಾದ ಒಬ್ಬ. ಈತನಿಗೆ ಇಬ್ಬರು ಪತ್ನಿಯರು. ಸುರುಚಿ ಮತ್ತು ಸುನೀತಿ. ಹೆಸರೇ ಹೇಳುವಂತೆ ಒಬ್ಬಳು ರುಚಿಕರವಾಗಿಯೂ, ಇನ್ನೊಬ್ಬಳು ನೀತಿಕರವಾಗಿಯೂ ಇದ್ದಳು. ಸುರುಚಿ ಪ್ರೀತಿಯ ಪತ್ನಿಯಾದಳು, ಸುನೀತಿ ಆಗಲಿಲ್ಲ. ನಮ್ಮ ಜೀವನದಲ್ಲಿಯೂ ಹೀಗೇ ಅಲ್ಲವೆ? ಸುರುಚಿಯ ಮಗ ಉತ್ತಮನಿಗೆ ಎಲ್ಲ ಸೌಲಭ್ಯ, ಸುನೀತಿಯ ಮಗ ಧ್ರುವನಿಗೆ ಇಲ್ಲ ಸೌಲಭ್ಯ. ಇಲ್ಲಿ ಏನೂ ಸಿಗದೆಂದಾದಾಗ ಸುನೀತಿ ಐದು ವರ್ಷದ ಮಗು ಧ್ರುವನಿಗೆ ಕಾಡಿಗೆ ಹೋಗಿ ದೇವರನ್ನು ಒಲಿಸಿಕೊಳ್ಳಲು ಉಪದೇಶಿಸಿದಳು. ನಾರದರೂ ವಾಸುದೇವ ಮಂತ್ರವನ್ನು ಉಪದೇಶಿಸಿದರು. ಕಠಿನವಾದ ವ್ರತವನ್ನು ನಡೆಸಿ ದೇವರನ್ನು ಸಾಕ್ಷಾತ್ಕರಿಸಿಕೊಂಡ ಸಾಧಕ ಬಾಲಕ ಧ್ರುವ. ಬಹಳ ದೀರ್ಘ‌ಕಾಲ ರಾಜ್ಯವಾಳಿದ ಧ್ರುವ. ಈಗಲೂ ನಾವು ಧ್ರುವ ನಕ್ಷತ್ರವನ್ನು ಉತ್ತರ ದಿಕ್ಕಿನಲ್ಲಿ ನೋಡಬಹುದು. ಈಗ ಮಕ್ಕಳನ್ನು ಬೆಳೆಸುವ ಪರಿ ಎಲ್ಲರಿಗೂ ಗೊತ್ತಿದ್ದದ್ದೇ. ಅಂಕ, ರ್‍ಯಾಂಕದ ಹೆಸರಿನಲ್ಲಿ ಯಾರಿಗೂ ಗೊತ್ತಿಲ್ಲದಂತೆ ಅನಗತ್ಯ ಪೈಪೋಟಿ, ದ್ವೇಷ, ಅಸೂಯೆಯನ್ನು ಬೆಳೆಸುತ್ತಿದ್ದೇವೆ. ಇನ್ನೊಂದೆಡೆ ನೀತಿ ಇಲ್ಲದ ರುಚಿಯ ಹಿಂದಿನ ಓಟಕ್ಕೆ ಬ್ರೇಕ್‌ ಕೊಡಬೇಕಲ್ಲವೆ? ಈ ಆಶಯವೇ ರಾಜರಾಜೇಶ್ವರಯತಿಗಳದ್ದು, “ಮಂಗಲಾಷ್ಟಕ’ ಮೂಲಕ. 

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next