Advertisement

ಸೋತ ಬಳಿಕ ಮೊದಲ ಬಾರಿ ಅತ್ತ ಸಿಂಧು

02:10 PM Aug 29, 2017 | Team Udayavani |

ಗ್ಲಾಸ್ಗೂ: ವಿಶ್ವ ನಂ.4 ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಭಾನುವಾರದ ಅಮೋಘ ಸಾಹಸದಲ್ಲಿ “ಬೆಳ್ಳಿಗೆ’ ಶರಣಾಗಿದ್ದು ಈಗ ಮುಗಿದ ಅಧ್ಯಾಯ. ಅಲ್ಲಿ ಆಕೆ ಸಂಘಟಿಸಿದ ಹೋರಾಟ ಬ್ಯಾಡ್ಮಿಂಟನ್‌ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಹೋರಾಟಗಳಲ್ಲೊಂದೆಂದು ದಾಖಲಾಗಿದೆ. ಇಂತಹ ಅಸಾಮಾನ್ಯ ಆಟವಾಡಿಯೂ ಸೋತ ಸಿಂಧು ಬಗ್ಗೆ ಕಣ್ಣೀರು ಮಿಡಿದವರು ಒಬ್ಬಿಬ್ಬರಲ್ಲ.  

Advertisement

ಆದರೆ ಸ್ವತಃ ಸಿಂಧು ಕೂಡ ಅತ್ತರು! ಇದೇನು ವಿಶೇಷವೆನ್ನುತ್ತೀರಾ? ವಾಲಿಬಾಲ್‌ ಆಟಗಾರರಾಗಿದ್ದ ಸಿಂಧು ತಂದೆ ರಮಣರಿಗೆ ಸೋಲು, ಗೆಲುವು ಹೊಸತೇನಲ್ಲ. ಅದು ಅವರ ಜೀವನದ ಭಾಗ. ಅವರ ಮಗಳಾಗಿರುವ ಸಿಂಧು ಕೂಡ ಸೋಲು, ಗೆಲುವನ್ನು ಸಮನಾಗಿಯೇ ಸ್ವೀಕರಿಸುತ್ತಿದ್ದರಂತೆ. ಆದರೆ ತಂದೆ ರಮಣ ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ ಸಿಂಧು ಸೋತ ನಂತರ ಅತ್ತಿದ್ದನ್ನು ನೋಡಿದ್ದಾರೆ. ಅದನ್ನು ಅವರೇ ಹೇಳಿಕೊಂಡಿದ್ದಾರೆ. ಗೆಲುವಿಗಾಗಿ ನಿಕಟವಾಗಿ ಕಾದಾಡಿದ ಸಿಂಧು ಕೊನೆಯ ಹಂತದವರೆಗೆ ಪಟ್ಟು ಬಿಡುವ ಲಕ್ಷಣವನ್ನೇ ತೋರಲಿಲ್ಲ. ಗೆಲುವಿನ ನಿಗದಿತ ಅಂಕ 21ಕ್ಕೆ ಪಂದ್ಯ ಮುಗಿಯದೇ 22ಕ್ಕೆ ಎಳೆದಿದ್ದೇ ತೀವ್ರ ಹಣಾಹಣಿಗೆ ಸಾಕ್ಷಿ. ಸಿಂಧು ಕೂಡ ಗೆಲ್ಲಲೇಬೇಕೆಂಬ ಹಟದಲ್ಲಿದ್ದರು.  ಇಂತಹ ಹೊತ್ತಿನಲ್ಲಿ ಕೇವಲ ಅದೃಷ್ಟವೊಂದೇ ಕೈಕೊಟ್ಟು ಸಿಂಧು ಸೋಲಬೇಕಾಗಿದ್ದು ಅವರಿಗೆ ನೋವು ತರಿಸಿದೆ. ಈ ಸ್ಥಿತಿ ಒಂದು ಕ್ಷಣ ಸಿಂಧುವನ್ನು ನೋಯಿಸಿ ಅಳುವಂತೆ ಮಾಡಿದೆ. ಅದನ್ನೇ ತಂದೆ ರಮಣ ಹೇಳಿಕೊಂಡಿದ್ದಾರೆ. 

ನೊಜೊಮಿ ಜಗ್ಗಲ್ಲ ಎಂದು ಕಡೆಗೆ ಗೊತ್ತಾಯಿತು: ಪಿ.ವಿ.ಸಿಂಧು ಈ ಪಂದ್ಯದ ಕುರಿತು ಅನ್ಯರು ಸಾವಿರ ಹೇಳಿಕೆ ನೀಡಿರಬಹುದು. ಸ್ವತಃ ಸಿಂಧು ಏನು ಹೇಳುತ್ತಾರೆನ್ನುವುದು ಕುತೂಹಲದ ಸಂಗತಿ. ಆಂಗ್ಲ ಮಾಧ್ಯಮವೊಂದಕ್ಕೆ ಅವರು ವಿಸ್ತೃತ ಸಂದರ್ಶನ ನೀಡಿದ್ದಾರೆ. ಅದರಲ್ಲಿ ಹಲವು ಕುತೂಹಲಕಾರಿ ಸಂಗತಿಗಳಿವೆ. “ಬೆಳ್ಳಿ ಗೆದ್ದಿದ್ದರಿಂದ ನನಗೆ ಸಂತೋಷವಾಗಿದೆ. ಆದರೆ ಪಂದ್ಯವನ್ನು ಸೋತಿದ್ದು ಮಾತ್ರ ಬೇಸರ ತರಿಸಿದೆ. ಯಾರು ಬೇಕಾದರೂ ಗೆಲ್ಲಬಹುದಾಗಿದ್ದ ಪಂದ್ಯವಿದು. ಪಂದ್ಯ 20-20ರಿಂದ ಸಮಗೊಂಡಿದ್ದಾಗ ನಾವಿಬ್ಬರೂ ಕೈಚೆಲ್ಲುವ ಸ್ಥಿತಿಯಲ್ಲಿರಲಿಲ್ಲ. ಆದರೆ ಅಂತಿಮ ಕ್ಷಣದಲ್ಲಿ ಎಲ್ಲವೂ ಬದಲಾಯಿತು. ನಾವಿಬ್ಬರೂ ಆತ್ಮವಿಶ್ವಾಸ ಹೊಂದಿದ್ದೆವು. ದೊಡ್ಡ ದೊಡ್ಡ ಪಂದ್ಯದಲ್ಲಿ ನನ್ನ ಮೇಲೆ ಬಹಳ ನಂಬಿಕೆ ಹೊಂದಿರುತ್ತೇನೆ. ಆದರೆ ಈ ದಿನ ಆಕೆ ಸ್ವಲ್ಪ ಹೆಚ್ಚೇ ವಿಶ್ವಾಸ ಹೊಂದಿದ್ದಳೆಂದು ಕಾಣುತ್ತದೆ. ಒಂದು ಹಂತದಲ್ಲಿ ಇಬ್ಬರೂ ಬಹಳ ದಣಿದಿದ್ದೆವು. ಸಾಧ್ಯವೇ ಇಲ್ಲ ಅನ್ನುವ ಸ್ಥಿತಿಯಿದ್ದರೂ ಹೋರಾಟ ನಿಲ್ಲಿಸಲು ಸಿದ್ಧವಿರಲಿಲ್ಲ. ಆಗ ನನಗೆ ಎದುರಾಳಿ ನೊಜೊಮಿ ನೊಕುಹರಾ ಏನೇ ಆಗಲಿ ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ಅರಿವಾಯಿತು’ ಎಂದು ಸಿಂಧು ಹೇಳಿದ್ದಾರೆ.

ಸಿಂಧುಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್‌ ಅಭಿನಂದನೆ
ನವದೆಹಲಿ: ಪಿ.ವಿ.ಸಿಂಧು ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ ಪದಕದ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸೇರಿದಂತೆ ಎಲ್ಲೆಡೆಯಿಂದ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ. ವಿಶ್ವ ಬ್ಯಾಡ್ಮಿಂಟನ್‌ ಕೂಟದಲ್ಲಿ ನಿಮ್ಮ ಆಟ ನೋಡಿ ನಾವು ಹೆಮ್ಮೆಪಟ್ಟಿದ್ದೇವೆ. ಅತ್ಯುತ್ತಮ ಆಟವನ್ನು ನಿರ್ವಹಿಸಿದ್ದೀರಿ. ನಿಮಗೆ ಅಭಿನಂದನೆಗಳು ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. ಇದೇ ವೇಳೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಿಂಧು ಆಟ ಅವಿಸ್ಮರಣೀಯ ಎಂದು ಟ್ವೀಟ್‌ ಮಾಡಿದ್ದಾರೆ. ತನ್ನ 22 ವರ್ಷದಲ್ಲೇ ಸಿಂಧು ದೇಶದ ಜನತೆಗೆ ಮಾದರಿಯಾಗಿದ್ದಾರೆ. ಅಭಿನಂದನೆಗಳು ಸಿಂಧು ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌ ಟ್ವೀಟ್‌ ಮಾಡಿದ್ದಾರೆ. ಪದಕ ವೇದಿಕೆಯಲ್ಲಿ ಇಬ್ಬರು ನಮ್ಮ ದೇಶದವರು. ಎಂತಹ ಅದ್ಭುತ ಘಳಿಗೆಯಿದು ಎಂದು ಲಿಯಾಂಡರ್‌ ಪೇಸ್‌ ಟ್ವೀಟ್‌ ಮಾಡಿದ್ದಾರೆ. ಇನ್ನು ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್, ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಸೇರಿದಂತೆ ಹಲವಾರು ಮಂದಿ ಟ್ವೀಟ್‌ ಮಾಡಿ ಸಿಂಧು ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಭಾನುವಾರ
ನಡೆದ ವಿಶ್ವ ಕೂಟದ ಫೈನಲ್‌ನ ಮ್ಯಾರಥಾನ್‌ ಹೋರಾಟದಲ್ಲಿ ಸಿಂಧು ಜಪಾನ್‌ನ ಆಟಗಾರ್ತಿ ನೂಕುಹರಾ ವಿರುದ್ಧ ಸೋಲು ಕಂಡಿದ್ದರು.

ನೋಡುತ್ತಾ ನೋಡುತ್ತಾ ನನ ° ಪೆಟ್ರೋಲ್‌ ಖಾಲಿಯಾಗಿತ್ತು: ಸೈನಾ  ಈಚಾರಿತ್ರಿಕ ಹೋರಾಟಕ್ಕೆ ಸೈನಾ ನೆಹ್ವಾಲ್‌ ಕೂಡ ಸಾಕ್ಷಿಯಾದರು. ಇತ್ತೀಚೆಗಿನ ದಿನಗಳಲ್ಲಿ ಸೈನಾ ಮತ್ತು ಸಿಂಧು ನಡುವೆ ಒಂದು ತಣ್ಣಗಿನ ಹೋರಾಟ ಚಾಲ್ತಿಯಲ್ಲಿದೆ, ಒಳಗೊಳಗೆ ಸಿಟ್ಟಿದೆ ಎಂಬ ಸುದ್ದಿಯಿದೆ. ಅದಕ್ಕೆ ಪೂರಕವಾಗಿ ಘಟನೆಗಳೂ ನಡೆಯುತ್ತಿವೆ. ಇಂತಹ ಸೈನಾ, ಭಾನುವಾರ ಸಿಂಧು ಆಡಿದ ಪಂದ್ಯ ನೋಡಿ ಅಚ್ಚರಿಗೊಳಗಾಗಿ ಸಂತಸಪಟ್ಟಿದ್ದಾರೆ. ಬಹಳ ಕಾಲದಿಂದ ಕೋಚ್‌ ಗೋಪಿಚಂದ್‌ರಿಂದ ದೂರವಿದ್ದರೂ ಭಾನುವಾರ ತಾವೇ ಹೋಗಿ ಗೋಪಿಚಂದ್‌ರನ್ನು ಮಾತನಾಡಿಸಿದ್ದಾರೆ. ಪಂದ್ಯ
ಪಂದ್ಯ ನೋಡುತ್ತಾ, ನೋಡುತ್ತಾ ನನ್ನ ಪೆಟ್ರೋಲ್‌ ಖಾಲಿಯಾಯ್ತು (ನೋಡಿ ನೋಡಿಯೇ ನನ್ನಲ್ಲಿನ ಶಕ್ತಿ ಉಡುಗಿದಂತಹ ಪರಿಸ್ಥಿತಿಗೆ ತಲುಪಿದ್ದೆ ಎಂಬರ್ಥ), ಇದು ಅತ್ಯದ್ಭುತ ಪಂದ್ಯ ಎಂದು ಗೋಪಿಗೆ ಸೈನಾ ಹೇಳಿದ್ದಾರೆ.  ಸಂತೋಷದ ಸಂಗತಿಯೆಂದರೆ ಈ ಪಂದ್ಯ ಭಾರತೀಯ ಬ್ಯಾಡ್ಮಿಂಟನ್‌ನ ಮೂವರು ದಿಗ್ಗಜರಾದ ಸೈನಾ, ಗೋಪಿಚಂದ್‌, ಸಿಂಧುವನ್ನು ಒಗ್ಗೂಡಿಸಿದ್ದು.

Advertisement
Advertisement

Udayavani is now on Telegram. Click here to join our channel and stay updated with the latest news.

Next