ಮುಂಬೈ: ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಅಂಗವೈಕಲ್ಯದ ಕುರಿತು ನಕಲಿ ಪ್ರಮಾಣಪತ್ರ ನೀಡಿರುವ ಆರೋಪದ ಮೇಲೆ ಈಗಾಗಲೇ ತನಿಖೆ ನಡೆಯುತ್ತಿದ್ದ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಇದೀಗ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪ್ರಕರಣ ದಾಖಲಿಸಿದೆ.
ನಕಲಿ ಗುರುತಿನ ಚೀಟಿ ಬಳಸಿ ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗಿದ್ದಕ್ಕಾಗಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆಯೋಗವು ನಾಗರಿಕ ಸೇವಾ ಪರೀಕ್ಷೆ-2022 ರ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಿ ಮುಂದಿನ ಪರೀಕ್ಷೆಗಳಿಗೆ ಹಾಜರಾಗದಂತೆ ತಡೆಯಲು ಶೋಕಾಸ್ ನೋಟಿಸ್ ಕೂಡ ನೀಡಿದೆ.
ನಾಗರಿಕ ಸೇವಾ ಪರೀಕ್ಷೆ-2022ಕ್ಕೆ ಆಯ್ಕೆಯಾಗಿರುವ ಪೂಜಾ ಮನೋರಮಾ ದಿಲೀಪ್ ಖೇಡ್ಕರ್ ಅವರ ಬಗ್ಗೆ ಯುಪಿಎಸ್‌ಸಿ ವಿವರವಾದ ಮತ್ತು ಸಂಪೂರ್ಣ ತನಿಖೆ ನಡೆಸಿದೆ ಎಂದು ಆಯೋಗವು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಅದರಂತೆ ತನಿಖೆ ವೇಳೆ ಹಲವಾರು ಸತ್ಯ ಸಂಗತಿಗಳು ಹೊರಬಂದಿದ್ದು ಖೇಡ್ಕರ್ ಅವರು ತಮ್ಮ ಹೆಸರು, ಪೋಷಕರ ಹೆಸರುಗಳು, ಅವರ ಭಾವಚಿತ್ರ, ಸಹಿ, ಅವರ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ಬದಲಾಯಿಸುವ ಮೂಲಕ ತಮ್ಮ ಗುರುತನ್ನು ಮರೆಮಾಚಿದ್ದಾರೆ ಇದರೊಂದಿಗೆ ದೊಡ್ಡ ಮಟ್ಟದಲ್ಲಿ ವಂಚನೆ ಎಸಗಿರುವುದು ತನಿಖೆ ಮೂಲಕ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈ ಎಲ್ಲ ವಿಚಾರಗಳನ್ನು ಮುಂದಿಟ್ಟು ಪೂಜಾ ಖೇಡ್ಕರ್ ವಿರುದ್ಧ ಪೊಲೀಸ್ ಎಫ್‌ಐಆರ್ ದಾಖಲಿಸುವುದು ಮತ್ತು ಕ್ರಿಮಿನಲ್ ಮೊಕದ್ದಮೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲು ಯುಪಿಎಸ್‌ಸಿ ಮುಂದಾಗಿದೆ.
ಇದನ್ನೂ ಓದಿ: Olympic: ಒಲಿಂಪಿಕ್ಸ್ ಹುಟ್ಟಿದ್ದು ಹೇಗೆ…ಭಾರತ ಮೊದಲು ಪಾಲ್ಗೊಂಡಿದ್ದು ಯಾವಾಗ?