ಹೊಸದಿಲ್ಲಿ: ಗ್ರಾಹಕರಿಗೆ ಸದ್ಯದಲ್ಲೇ ಪೆಟ್ರೋಲ್- ಡೀಸೆಲ್ ದರ ಇಳಿಕೆಯ ನೆಮ್ಮದಿ ದೊರೆಯಲಿದೆಯೇ? 15 ದಿನಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ದರ ಶೇ. 10ರಷ್ಟು ಇಳಿಮುಖ ವಾಗಿದ್ದು, ದೇಶೀಯ ಮಟ್ಟಚದಲ್ಲೂ ತೈಲ ದರ ಇಳಿಕೆ ಮಾಡಲು ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳಿಗೆ ಇದು ಸುಸಮಯವಾಗಿದೆ.
ಪ್ರಸಕ್ತ ತಿಂಗಳ ಆರಂಭದಲ್ಲಿ ಬ್ಯಾರೆಲ್‌ಗೆ 71 ಡಾಲರ್ ಇದ್ದ ಕಚ್ಚಾ ತೈಲದ ದರ ಈಗ 64 ಡಾಲರ್‌ಗೆ ಇಳಿಕೆಯಾಗಿದೆ. ಐರೋಪ್ಯ ರಾಷ್ಟ್ರಗಳಲ್ಲಿ ಕೊರೊನಾ ಸೋಂಕಿನ ಹೊಸ ಅಲೆಗಳು ಕಾಣಿಸಿಕೊಂಡಿರುವುದು ತೈಲದ ಬೇಡಿಕೆ ಸುಧಾರಿಸುವ ಭರವಸೆಯನ್ನು ಸುಳ್ಳಾಗಿಸಿದೆ.
ದೇಶದಲ್ಲಿ ಈ ವರ್ಷದ ಆರಂಭದಿಂದ ಈವರೆಗೆ ಪೆಟ್ರೋಲ್-ಡೀಸೆಲ್ ದರವು ಲೀಟರ್‌ಗೆ 7.5 ರೂ.ಗಳಷ್ಟು ಏರಿಕೆ ಕಂಡಿದೆ. ಆದರೆ ಫೆ. 27ರಿಂದ ದೇಶಾದ್ಯಂತ ತೈಲ ದರ ಸ್ಥಿರವಾಗಿದ್ದು, ಏರಿಕೆ ಯಾಗಿಲ್ಲ. ಈಗ ಕಚ್ಚಾ ತೈಲದ ದರ ಗಣ ನೀಯವಾಗಿ ಇಳಿಕೆ ಯಾಗಿ ರುವುದ ರಿಂದ ತೈಲ ಕಂಪೆನಿಗಳು ಪೆಟ್ರೋಲ್, ಡೀಸೆಲ್ ದರ ಇಳಿಸುವ ಸಾಧ್ಯತೆಯಿದೆ.
ಜಿಎಸ್‌ಟಿ ವ್ಯಾಪ್ತಿಗೆ: ಚರ್ಚೆ
ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಕುರಿತು ಮುಂದಿನ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಚರ್ಚಿಸಲು ಸಿದ್ಧ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳ ವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.