ನವದೆಹಲಿ: 2020ರ ಸಾಲಿನ ಯುಪಿಎಸ್‌ಸಿ ಮುಖ್ಯ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟವಾಗಿದ್ದು, ಒಟ್ಟು 761 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ಇಂದು ಸಂಜೆ ಕೇಂದ್ರ ಲೋಕಸೇವಾ ಆಯೋಗವು ಫಲಿತಾಂಶ ಪ್ರಕಟಿಸಿದ್ದು, ಶುಭಮ್ ಕುಮಾರ್ ಅವರು ಪ್ರಥಮ ರ್‍ಯಾಂಕ್ ಗಳಿಸಿದ್ದಾರೆ. ಇನ್ನುಳಿದಂತೆ ಜಾಗ್ರತಿ ಅವಸ್ತಿ ಮತ್ತು ಅಂಕಿತಾ ಜೈನ್ ಎಂಬುವವರು ಕ್ರಮವಾಗಿ ಎರಡು ಮತ್ತು ಮೂರನೇ ರ್‍ಯಾಂಕ್ ಪಡೆದಿದ್ದಾರೆ.
ಪ್ರಥಮ್ ರ್‍ಯಾಂಕ್ ಪಡೆದಿರುವ ಶುಭಮ್ ಅವರು ಐಐಟಿ ಮುಂಬೈನಲ್ಲಿ ಬಿಟೆಕ್( ಸಿವಿಲ್ ಇಂಜನಿಯರಿಂಗ್) ಪದವಿ ಪಡೆದಿದ್ದಾರೆ. ಎರಡನೇ ರ್‍ಯಾಂಕ್ ಪಡೆದಿರುವ ಜಾಗೃತಿ ಅವರು ಭೂಪಾಲ್ನ MANIT ಯಲ್ಲಿ ಬಿಟೆಕ್ ಪದವಿ (ಇಲೆಕ್ಟ್ರಾನಿಕ್ ಎಂಜನೀಯರಿಂಗ್) ಪೂರೈಸಿದ್ದಾರೆ.
ನೇಮಕಾತಿಗೆ ಶಿಫಾರಸು ಮಾಡಲಾಗಿರುವ ಒಟ್ಟು 761 ಅಭ್ಯರ್ಥಿಗಳ ಪೈಕಿ 545 ಮಂದಿ ಪುರುಷರಾಗಿದ್ದರೆ, 216 ಮಂದಿ ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. ಟಾಪ್ 25 ರಲ್ಲಿ 13 ಜನ ಪುರುಷರು ಹಾಗೂ 12 ಜನ ಮಹಿಳಾ ಅಭ್ಯರ್ಥಿಗಳಿದ್ದಾರೆ. ಈ ಬಾರಿ 25 ವಿಶೇಷ ಚೇತನ ಅಭ್ಯರ್ಥಿಗಳು ಯುಪಿಎಸ್‍ಸಿ ಪರೀಕ್ಷೆ ಪಾಸ್ ಮಾಡಿದ್ದಾರೆ.
ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಿ ಸೇವೆ (ಐಎಫ್‌ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಮತ್ತು ಇತರ ಅಧಿಕಾರಿಗಳನ್ನು ಆಯ್ಕೆ ಮಾಡಲು ಯುಪಿಎಸ್‌ಸಿಯು ನಾಗರಿಕ ಸೇವಾ ಪರೀಕ್ಷೆಯನ್ನು ವಾರ್ಷಿಕವಾಗಿ ಮೂರು ಹಂತಗಳಲ್ಲಿ ನಡೆಸುತ್ತದೆ.
ರ್‍ಯಾಂಕ್ ಪಡೆದ ಕರ್ನಾಟಕದ ಆಭ್ಯರ್ಥಿಗಳು
ಅಕ್ಷಯ್ ಸಿಂಹ ಕೆ.ಜೆ – 77
ನಿಶ್ಚಯ್ ಪ್ರಸಾದ್ ಎಂ – 130
ಅನಿರುದ್ದ್ ಆರ್ ಗಂಗಾವರಂ – 252
ಸೂರಜ್ ಡಿ – 255
ನೇತ್ರಾ ಮೇಟಿ– -326
ಬಿಂದು ಮಣಿ ಆರ್. ಎನ್ – 468
ಪ್ರಮೋದ್ ಆರಾಧ್ಯ
ಎಚ್. ಆರ್ -601
ಸೌರಬ್ ಕೆ– – 725