ಬೆಳಗಾವಿ: ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಹುಕ್ಕೇರಿ ತಾಲೂಕಿನ ಯರನಾಳ ಗ್ರಾಮದ ಕೃಷಿಕನ ಮಗ ಪ್ರಫುಲ್ ದೇಸಾಯಿ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯಲ್ಲಿ 532ನೇ ರ್‍ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ದ್ವಿತೀಯ ಪಿಯುವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಪಡೆದ ಪ್ರಫುಲ್ ದೇಸಾಯಿ ಮೊದಲಿನಿಂದಲೂ ಕೇಂದ್ರ ನಾಗರಿಕ ಸೇವಾ ಪರೀಕ್ಷೆ ಬರೆಯಬೇಕೆಂಬ ಕನಸು ಕಂಡಿದ್ದರು. ಎರಡು ಬಾರಿ ವಿಫಲವಾಗಿದ್ದ ಪ್ರಪುಲ್, ಮೂರನೇ ಸಲ ಛಲ ಬಿಡದೇ ಸಫಲರಾಗಿದ್ದಾರೆ. ಎಂಜಿನಿಯರಿಂಗ್ ಪದವೀಧರರಾದ ಪ್ರಫುಲ್ ಜಲಸಂಪನ್ಮೂಲ ಇಲಾಖೆಯಲ್ಲಿ ಸಹಾಯಕ ಅಭಿಯಂತರಾಗಿದ್ದಾರೆ. ಕಳೆದ ವರ್ಷವಷ್ಟೇ ಅಭಿಯಂತರಾಗಿ ಆಯ್ಕೆಯಾಗಿದ್ದರು.
ದಿನಾಲು 15 ಗಂಟೆ ಅಭ್ಯಾಸ: ತಂದೆ ಕೆಂಪಣ್ಣ ಕೃಷಿಕರಾಗಿದ್ದು, ತಾಯಿ ಮಂಗಲಾ ಗೃಹಣಿ. ಸಹೋದರಿ ತೇಜಸ್ವಿನಿ ಗೋಕಾಕನ ಕೋರ್ಟ್‌ನಲ್ಲಿ ಎಸ್‌ಡಿಎ ನೌಕರಿ ಮಾಡುತ್ತಿದ್ದಾರೆ. ಪ್ರಫುಲ್ ಅವರು 2017ರಿಂದ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿದ್ದರು. ನಿತ್ಯ ಬೆಳಗ್ಗೆ 9ರಿಂದ ರಾತ್ರಿ 12 ಗಂಟೆಯವರೆಗೆ ಅಭ್ಯಾಸ ಮಾಡುತ್ತಿದ್ದರು. ಸಹಾಯಕ ಅಭಿಯಂತರಾದಾಗ ದಿನಾಲೂ 6ರಿಂದ 8 ತಾಸು ಓದಿ ಪರೀಕ್ಷೆಗೆ ಸಿದ್ಧರಾಗಿದ್ದರು.
ಓದಿದ್ದು ಕನ್ನಡ ಮಾಧ್ಯಮದಲ್ಲಿ: ಹುಕ್ಕೇರಿ ತಾಲೂಕಿನ ಬಡಕುಂದ್ರಿಯ ಎ.ಎಲ್. ಕೋಟಿ ಕನ್ನಡ ಮಾಧ್ಯಮ ಶಾಲೆಯಲ್ಲಿ 1ರಿಂದ 4ನೇ ತರಗತಿ, ಹಿಡಕಲ್ ಡ್ಯಾಂನ ಯಮಕನಮರಡಿ ಶಾಲೆಯಲ್ಲಿ 5ರಿಂದ 7ನೇ ತರಗತಿ, ಹುಕ್ಕೇರಿ ತಾಲ್ಲೂಕಿನ ಯರಗಟ್ಟಿಯಲ್ಲಿ ಪ್ರೌಢಶಾಲೆ ಮುಗಿಸಿದ್ದರು. ನಂತರ ಸಂಕೇಶ್ವರದ ಎಸ್‌ಬಿವಿಎಸ್ ಸಂಸ್ಥೆಯ ಕಾಲೇಜಿನಲ್ಲಿ ಪಿಯು ವಿಜ್ಞಾನ ವಿಭಾಗದಲ್ಲಿ ಪಾಸಾಗಿದ್ದರು. ಹುಬ್ಬಳ್ಳಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ(ಮೆಕ್ಯಾನಿಕಲ್ ವಿಭಾಗ) ಬಿಇ ಮುಗಿಸಿದ್ದರು. ದೆಹಲಿಯ ಶ್ರೀರಾಮ್ ಐಎಎಸ್ ಕೋಚಿಂಗ್ ಸೆಂಟರ್‌ನಲ್ಲಿ ಅಭ್ಯಾಸ ನಡೆಸಿದ್ದರು. ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಪ್ರಫುಲ್ ಕನ್ನಡ ಮಾಧ್ಯಮದಲ್ಲಿಯೇ ಕಲಿತಿದ್ದಾರೆ.
ಅಧಿಕಾರಿಗಳ ಪ್ರೇರಣೆ: ಐಎಎಸ್ ಮಾಡಬೇಕೆಂದು ಮೊದಲಿನಿಂದಲೂ ಕನಸು ಕಂಡಿದ್ದೆ. ಚಿಕ್ಕವನಿದ್ದಾಗ ಬೆಳಗಾವಿ ಜಿಲ್ಲಾಧಿಕಾರಿಯಾಗಿದ್ದ ಶಾಲಿನಿ ರಜನೀಶ ಅವರ ಪ್ರೇರಣೆ ನನ್ನ ಮೇಲಿದೆ. ಅನೇಕ ಐಎಎಸ್ ಅಧಿಕಾರಿಗಳ ಸಂದರ್ಶನ ನೋಡಿದಾಗ ನಾನೂ ಈ ಪರೀಕ್ಷೆ ಪಾಸ್ ಆಗಬೇಕೆಂದು ಅಂದುಕೊಂಡಿದ್ದೆ. ಪರಿಶ್ರಮದ ಫಲವಾಗಿ ಯುಪಿಎಸ್‌ಸಿ ಪಾಸಾಗಿದ್ದೇನೆ ಎನ್ನುತ್ತಾರೆ ಪ್ರಫುಲ್ ದೇಸಾಯಿ.
ನಾಲ್ಕು ಎಕರೆ ಜಮೀನಿನಲ್ಲಿ ಮಗನಿಗೆ ಓದಿಸಿದ್ದೇನೆ. ಮೊದಲಿನಿಂದಲೂ ಶಾಲೆಯಲ್ಲಿ ಉತ್ತಮ ಅಂಕ ಗಳಿಸುತ್ತಿದ್ದನು. ಬಿಇ ಮುಗಿಸಿದ್ದರೂ ಐಎಎಸ್ ಮಾಡಬೇಕೆಂಬ ಗುರಿ ಇಟ್ಟುಕೊಂಡಿದ್ದನು. ಐಎಎಸ್ ಅಧಿ ಕಾರಿಗಳ ಪ್ರೇರಣೆಯಿಂದ ಈ ಸಾಧನೆ ಮಾಡಿದ್ದಾನೆ ಎನ್ನುತ್ತಾರೆ ತಂದೆ ಕೆಂಪಣ್ಣ ದೇಸಾಯಿ.
ಕೃಷಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರವಾಗಿ ಬದಲಾವಣೆ ಮಾಡಬೇಕೆಂಬ ಆಸೆ ಇತ್ತು. ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವುದರಿಂದ ಈ ಕ್ಷೇತ್ರ ಹೊಸತು ಎನ್ನುವಂತದ್ದಲ್ಲ. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸಲಾಗುವುದು.-
ಪ್ರಫುಲ್ ದೇಸಾಯಿ, ಯುಪಿಎಸ್‌ಸಿ 532ನೇ ರ್‍ಯಾಂಕ್
–ಭೈರೋಬಾ ಕಾಂಬಳೆ