“ಕೈ’ ಮತ್ತು “ಸೈಕಲ್’ ಒಟ್ಟಾಗಿ ಸೇರಿವೆ. ನಮ್ಮ ಧ್ಯೇಯ ಬಿಜೆಪಿಯನ್ನು ಸೋಲಿಸುವುದೇ ಆಗಿದೆ.
Advertisement
ಇದು ಉತ್ತರ ಪ್ರದೇಶದಲ್ಲಿ ಮೈತ್ರಿ ಮಾಡಿಕೊಂಡಿರುವ ರಾಹುಲ್ ಗಾಂಧಿ ಮತ್ತು ಅಖೀಲೇಶ್ ಯಾದವ್ ಮಾತುಗಳು. ಮೈತ್ರಿಯ ನಂತರ ಇದೇ ಮೊದಲ ಬಾರಿಗೆ ಲಕ್ನೋದಲ್ಲಿ ಒಟ್ಟಿಗೇ ಕಾಣಿಸಿಕೊಂಡ ಇವರಿಬ್ಬರು ಮೊದಲಿಗೆ ಪತ್ರಿಕಾಗೋಷ್ಠಿ ನಡೆಸಿದರು. ಬಳಿಕ 16 ಕಿ.ಮೀ. ಗಳ ರೋಡ್‌ಶೋ ನಡೆಸಿ ಶಕ್ತಿಪ್ರದರ್ಶನ ಮಾಡಿದರು. ವಿಶೇಷವೆಂದರೆ ರಾಹುಲ್ ಮತ್ತು ಅಖೀಲೇಶ್ ಅವರ ಹೊಂದಾಣಿಕೆ ಪತ್ರಿಕಾ ಗೋಷ್ಠಿಯಲ್ಲೂ ಎದ್ದು ಕಾಣಿಸುತ್ತಿತ್ತು. ಒಂದೇ ರೀತಿಯ ಧಿರಿಸು ಹಾಕಿದ್ದ ಇಬ್ಬರೂ, ತಾವಿಬ್ಬರೂ ಒಂದೇ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡಿದರು.
ನಮ್ಮಿಬ್ಬರ ನಡುವೆ ವಯಸ್ಸಿನ ಅಂತರವಿಲ್ಲ. ನಾವಿಬ್ಬರು ಜತೆಯಾಗಿ ಸೇರಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ. ಬಿಜೆಪಿಯ ಒಡೆದು ಆಳುವ ನೀತಿಯನ್ನು ನಾವು ಕೊನೆಗಾಣಿಸುತ್ತೇವೆ ಎಂಬುದು ಅಖೀಲೇಶ್ ಯಾದವ್ ಅವರ ಮಾತಾಗಿತ್ತು.
“”ನಮ್ಮದು ಹೃದಯಗಳು ಬೆಸೆದ ಸಂಬಂಧ, ನಾವು ಗೆದ್ದೇ ಗೆಲ್ಲುತ್ತೇವೆ” ಎಂದು ವಿಶ್ವಾಸದಲ್ಲೇ ಹೇಳಿದವರು ರಾಹುಲ್ ಗಾಂಧಿ. ಸುಮಾರು ಒಂದು ಗಂಟೆಗಳ ಕಾಲ ಪತ್ರಿಕಾಗೋಷ್ಠಿ ನಡೆಸಿದ ಇವರಿಬ್ಬರು, ಕೈ ಮತ್ತು ಸೈಕಲ್ ಒಟ್ಟಿಗೆ ಸೇರಿವೆ ಎಂದರು. ಈ ಮೈತ್ರಿ ಜನರ ಆಯ್ಕೆ, ಉತ್ತರ ಪ್ರದೇಶದ ಮಂದಿಗೆ ಇಷ್ಟವಾಗುತ್ತದೆ ಎಂದೂ ಹೇಳಿಕೊಂಡರು. ಆದರೆ ರಾಹುಲ್ ಗಾಂಧಿ ಅವರನ್ನು ರಾಮಮಂದಿರದ ಬಗ್ಗೆ ಪ್ರಶ್ನಿಸಿದಾಗ, ಇದು ನ್ಯಾಯಾಂಗಕ್ಕೆ ಸಂಬಂಧ ಪಟ್ಟ ವಿಚಾರ ಎಂದಷ್ಟೇ ಪ್ರತಿಕ್ರಿಯಿಸಿದರು.
ಪ್ರಿಯಾಂಕಾ ಗಾಂಧಿ ಅವರ ರಾಜಕಾಧಿರಣದ ಬಗ್ಗೆ ಮಾತನಾಡಿದ ರಾಹುಲ್, ಅವರು ಕಾಂಗ್ರೆಸ್‌ನ ಆಸ್ತಿ. ಪಕ್ಷದ ಪ್ರಮುಖ ನಿರ್ಧಾರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಪಕ್ಷದಲ್ಲಿ ಅವರಿಗೆ ಪ್ರಮುಖ ಸ್ಥಾನ ಇದ್ದೇ ಇರುತ್ತದೆ ಎಂದು ಹೇಳಿದರು.
2019ರ ಲೋಕಸಭೆ ಚುನಾವಣೆಗೂ ಮೈತ್ರಿ ಮಾಡಿಕೊಳ್ಳುವ ಮನಸ್ಸಿದೆ ಎಂಬ ರಾಹುಲ್ ಹೇಳಿಕೆಗೆ ಅಖೀಲೇಶ್ ಕೂಡ ಅಷ್ಟೇ ಧನಾತ್ಮಕವಾಗಿ ಉತ್ತರಿಸಿದರು. ಇದಾದ ಬಳಿಕ ಇಬ್ಬರೂ ನಾಯಕರು ಲಕ್ನೋದ ಹಜ್ರತ್‌ಗಂಜ್‌ನಿಂದ ಘಂಟಾಘರ್ ವರೆಗೆ ರೋಡ್ ಶೋ ನಡೆಸಿದರು.
ಕೇಜ್ರಿವಾಲ್ ವಿರುದ್ಧ ಎಫ್ಐಆರ್: ಚುನಾವಣಾ ಪ್ರಚಾರ ಭಾಷಣದಲ್ಲಿ ಲಂಚ ಸ್ವೀಕಾರ ಮಾಡುವಂತೆ ಜನರಿಗೆ ಹೇಳಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೇಂದ್ರ ಚುನಾವಣಾ ಆಯೋಗ ಪೊಲೀಸರಿಗೆ ಸೂಚಿಸಿದೆ.
ಕೇಜ್ರಿವಾಲ್ ಅವರ ಹೇಳಿಕೆಯು ಕೀಳು ಮಟ್ಟದ ಹಾಸ್ಯದಂತಿದೆ. ಇಂಥ ಹೇಳಿಕೆ ನೀಡಬೇಡಿ ಎಂದಿದ್ದರೂ ಪದೇ ಪದೆ ಅದೇ ತಪ್ಪನ್ನು ಮಾಡುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಯೋಗ ಹೇಳಿದೆ.
ಆಪ್ ವಿರುದ್ಧ ಮೋದಿ ಆಕ್ರೋಶ: ಪಂಜಾಬ್ ವಿಧಾನಸಭೆ ಚುನಾವಣೆಗಾಗಿ ಫರೀದ್‌ಕೋಟ್ ಬಳಿಯ ಕೋಟ್ಕಾಪುರದಲ್ಲಿ ರ್ಯಾಲಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಆಮ್ ಆದ್ಮಿ ಪಕ್ಷವನ್ನೇ ತರಾಟೆಗೆ ತೆಗೆದುಕೊಂಡರು. ಹೊರಗಿನವರು ಬಂದು ಇಲ್ಲಿ ಆಡಳಿತ ನಡೆಸುವ ಕನಸು ಕಾಣುತ್ತಿದ್ದಾರೆ ಎಂದು ಕೇಜ್ರಿವಾಲ್ ಅವರನ್ನು ಟೀಕಿಸಿದರು. ಇವರನ್ನು ರಾಜ್ಯದಿಂದ ಹೊರಗೆ ಕಳುಹಿಸಿ ಎಂದು ಮತದಾರರಿಗೆ ಮನವಿ ಮಾಡಿದರು.
ನವದೆಹಲಿ/ಲಕ್ನೋ: ಉತ್ತರ ಪ್ರದೇಶದಲ್ಲಿ ಎಸ್ಪಿಯು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ವಿಧಾನಸಭಾ ಚುನಾವಣೆ ಎದುರಿಸುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಪಕ್ಷದ ನೇತಾರ ಮುಲಾಯಂ ಸಿಂಗ್ ಯಾದವ್, ಯಾವುದೇ ಕಾರಣಕ್ಕೂ ತಾವು ಎಸ್ಪಿ ಪರ ಪ್ರಚಾರ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ.
ಭಾನುವಾರ ಮಾತನಾಡಿದ ಅವರು, ಕಾಂಗ್ರೆಸ್ ಜೊತೆ ತಮ್ಮ ಪಕ್ಷವು ಮೈತ್ರಿ ಮಾಡಿಕೊಳ್ಳುವ ಅಗತ್ಯವಿರಲಿಲ್ಲ. ಇದನ್ನು ಸಂಪೂರ್ಣವಾಗಿ ವಿರೋಧಿಸುತ್ತೇನೆ. ಸಮಾಜವಾದಿ ಪಕ್ಷಕ್ಕೆ ಏಕಾಂಗಿಯಾಗಿ ಚುನಾವಣೆ ಎದುರಿಸುವ ಸಾಮರ್ಥ್ಯವಿದೆ. ಈ ಹಿಂದೆ ಏಕಾಂಗಿಯಾಗಿ ಹೋರಾಡಿ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಿದ್ದೇವೆ. ನಾವು ಯಾವಾಗಲೂ ಕಾಂಗ್ರೆಸ್ ಅನ್ನು ವಿರೋಧಿಸುತ್ತೇವೆ. ಇದೀಗ ಆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆ ಇರಲಿಲ್ಲ ಎಂದು ತಿಳಿಸಿದ್ದಾರೆ.