Advertisement

Uppunda: ಅಧಿಕ ತೇವಾಂಶದಿಂದಾಗಿ ನೆಲಗಡಲೆ ಕೃಷಿಗೆ ಹಿನ್ನಡೆ

02:29 PM Dec 11, 2024 | Team Udayavani |

ಉಪ್ಪುಂದ: ಫೈಂಜಾಲ್‌ ಚಂಡಮಾರುತ ಮತ್ತು ಬಳಿಕ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಯಿಂದ ನೆಲಗಡಲೆ ಕೃಷಿಗೆ ಭಾರಿ ಹಿನ್ನಡೆಯಾಗಿದೆ. ಬೈಂದೂರು ತಾಲೂಕಿನ ಕೆಲವೆಡೆ ನೆಲಗಡಲೆ ಬಿತ್ತಿದ ಎರಡೇ ದಿನದಿಂದ ಮಳೆ ಶುರುವಾಗಿದೆ. ಈಗ ಬಿತ್ತಿದ ಬೀಜವೂ ಹೋಯಿತು, ಹೊಸದಾಗಿ ಬಿತ್ತುವ ಹಾಗೆಯೂ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

Advertisement

ಬೈಂದೂರು ವ್ಯಾಪ್ತಿಯಲ್ಲಿ 1100 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಉದ್ದು, ಹೆಸರು, ಕಲ್ಲಂಗಡಿ ಜತೆಗೆ ಹೆಚ್ಚಿನ ರೈತರು ನೆಲಗಡಲೆ ಬೆಳೆಯನ್ನು ನೆಚ್ಚಿಕೊಂಡಿದ್ದಾರೆ. ಕೆಲವು ದಿನಗಳಿಂದ ತಂಪ್ಪಿನ ವಾತಾವರಣ ರೈತರ ಚಿಂತೆಗೆ ಕಾರಣವಾಗಿದೆ. ಸಮರ್ಪಕವಾಗಿ ಬಿಸಿಲು ಬಾರದಿದ್ದರೆ ಬೀಜ ಬಿತ್ತನೆ ಮಾಡಲು ಸಮಸ್ಯೆಯಾಗುತ್ತದೆ.

ಮಳೆ ತಂದ ಆತಂಕ
ಬಿಜೂರು, ನಂದನವನ, ಹೇರಂಜಾಲು ಪ್ರದೇಶದಲ್ಲಿ ಕೆಲವು ರೈತರು ಬೀಜ ಬಿತ್ತನೆ ಮಾಡಿದ 2 ದಿನಗಳಲ್ಲಿ ಮಳೆ ಬಂದಿದ್ದು ರೈತರಲ್ಲಿ ಆತಂಕ ಮನಮಾಡಿದೆ. ಬೀಜ ಹಾಕಿದ ಬಳಿಕ ಮಳೆ ಬಂದರೆ ಗದ್ದೆಯಲ್ಲಿ ನೀರು ನಿಂತುಕೊಂಡು ಸಮಸ್ಯೆ ಸೃಷ್ಟಿಸುತ್ತದೆ. ಕೀಟ ಬಾಧೆಯು ಹೆಚ್ಚುತ್ತದೆ. ಹುಟ್ಟಿದ ಗಿಡಗಳು ಬೆಳೆದರೂ ಬಿಸಿಗೆ ಬೆಂದು ಹೋಗುವ ಸಾಧ್ಯತೆಯು ಹೆಚ್ಚು. ಮಳೆಯ ವಾತಾವರಣದಿಂದಾಗಿ ರೈತರು ಹಿಂದೇಟು ಹಾಕುವಂತಾಗಿದೆ.

ಹದ ಕಳೆದುಕೊಳ್ಳುವ ಮಣ್ಣು
ರೈತರು ಕೊಟ್ಟಿಗೆ ಗೊಬ್ಬರ, ಸುಣ್ಣ, ಉಪ್ಪನ್ನು ಹಾಕಿ ಟ್ರಾಕ್ಟರ್‌ ಮೂಲಕ 3ರಿಂದ 4 ಬಾರಿ ಹದ ಮಾಡಲಾಗಿದೆ. ಕರಾವಳಿ ತೀರ ಪ್ರದೇಶದ ಕೃಷಿ ಭೂಮಿಯು ಮರಳು(ಹೊಯಿಗೆ) ಮಿಶ್ರತ ಮಣ್ಣು ಆಗಿರುವುದರಿಂದ ಮಳೆಯ ನೀರು ಗದ್ದೆಯಿಂದ ಗದ್ದೆಗೆ ಅಥವಾ ತೋಡಿಗೆ ಹರಿದು ಹೋಗುವುದರಿಂದ ಗೊಬ್ಬರವು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಬಿಜೂರು, ನಾಯ್ಕನಕಟ್ಟೆ, ನಾಗೂರು, ಉಪ್ರಳ್ಳಿ, ಕಿರಿಮಂಜೇಶ್ವರ, ನಾವುಂದ ಭಾಗದ ಗದ್ದೆಗಳು ಥಂಡಿ ಆಗುವುದರಿಂದ (ಮಣ್ಣಿನ ತೇವಾಂಶ ಹೆಚ್ಚಾಗುವುದು) ನೆಲಗಡಲೆ ಬಿತ್ತನೆ ಮಾಡಿದರೆ ಅದು ಮೊಳಕೆ ಒಡೆಯದೆ ಮಣ್ಣಿನೊಳಗೆ ಕೊಳೆತು ಹೋಗುತ್ತದೆ.

ತುಂಬ ಖರ್ಚಾಗಿದೆೆ
ಈ ಬಾರಿ 4 ಎಕ್ರೆಗೆ ನೆಲಗಡಲೆ ಬೀಜ ಬಿತ್ತನೆ ಮಾಡಲಾಗಿದೆ. ಎರಡೇ ದಿನದಲ್ಲಿ ಮಳೆಯಾಗಿದೆ. ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿದ್ದು ಆತಂಕ ಎದುರಾಗಿದೆ. ಎಕ್ರೆಗೆ 50ರಿಂದ 60 ಸಾವಿರ ಖರ್ಚು ಮಾಡಿದ್ದೇನೆ.
-ವಸಂತಿ ಗಾಣಿಗ ಹೇರಂಜಾಲು, ರೈತರು

Advertisement

ಬೀಜ ಒದಗಿಸಲು ಸಿದ್ಧ
120 ದಿನದಲ್ಲಿ ಬೆಳೆಯುವ ಹೈಬ್ರಿಡ್‌ ನೆಲಗಡಲೆ ಬೀಜ ಸಾಕಷ್ಟು ದಾಸ್ತಾನು ಇದೆ. ಇನ್ನು 90 ದಿನದ ಬೆಳೆಯ (ಹುಬ್ಬಳ್ಳಿ) ಬೀಜ ಬೇಕಾದ ರೈತರು ಬೇಡಿಕೆಯನ್ನು ಕೃಷಿ ಇಲಾಖೆಗೆ ಮೊದಲೇ ನೀಡಿದರೆ ತರಲು ಸೂಕ್ತ ಗಮನಹರಿಸುತ್ತೇವೆ.
-ಗಾಯತ್ರಿದೇವಿ, ಕೃಷಿ ಅಧಿಕಾರಿ, ಬೈಂದೂರು

-ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next