Advertisement

ಉಪ್ಪುಂದ ಕೊಡಿ ಹಬ್ಬ: ಧ್ವಜಾರೋಹಣ- ನ. 28: ಶ್ರೀ ಮನ್ಮಹಾ ರಥೋತ್ಸವ

03:20 PM Nov 24, 2023 | Team Udayavani |

ಉಪ್ಪುಂದ: ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಜಾತ್ರೆ, ಕೊಡಿ ಹಬ್ಬದ ಅಂಗವಾಗಿ ಧ್ವಜಾರೋಹಣದ ಮೂಲಕ ಧಾರ್ಮಿಕ ವಿಧಿವಿಧಾನಗಳಿಗೆ ಗುರುವಾರ ಚಾಲನೆ ನೀಡಲಾಯಿತು. ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ಮಹಾಸಂಕಲ್ಪ ಪುಣ್ಯಾಹ ನಾಂದಿ, ಧ್ವಜವಾಹನ ಆದಿವಾಸ, ಅಸ್ತ್ರ ಹೋಮದೊಂದಿಗೆ ಇತರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಮರವನ್ನು ಧ್ವಜಸ್ತಂಭಕ್ಕೆ ನಿಲ್ಲಿಸಿ ಸಿಂಹದ ಪಟವನ್ನು ಏರಿಸುವುದರೊಂದಿಗೆ ಹಾಗೂ ಧ್ವಜಬಲಿ ಮಾಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

Advertisement

ಕೊಲ್ಲೂರಿನ ವೇ| ಮೂ| ಮಂಜುನಾಥ ಅಡಿಗ ಮಾರ್ಗದರ್ಶನದಲ್ಲಿ ಗೋಕರ್ಣದ ತಂತ್ರಿ ಗಣಪತಿ ಭಟ್‌ ಹೀರೆ ನೇತೃತ್ವದಲ್ಲಿ ಧಾರ್ಮಿಕ ವಿಧಿಗಳು ನೆರವೇರಿತು. ಪ್ರಧಾನ ಅರ್ಚಕ ವೇ| ಮೂ| ಪ್ರಕಾಶ ಉಡುಪ, ಶಂಕರನಾರಾಯಣ ಪುರಾಣಿಕ ಪೂಜಾ ಕಾರ್ಯಕ್ಕೆ ಸಹಕರಿಸಿದರು. ದೇವಸ್ಥಾನದ ಆಡಳಿತಾ ಧಿಕಾರಿ, ಬೈಂದೂರು ತಹಶೀಲ್ದಾರ್‌ ಪ್ರದೀಪ್‌ ಆರ್‌., ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಭೀಮಪ್ಪ ಎಚ್‌. ಬಿಲ್ದಾರ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಜಯರಾಮ ಶೆಟ್ಟಿ ಬಿಜೂರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ.ಎಸ್‌. ಸುರೇಶ್‌ ಶೆಟ್ಟಿ, ದೇವಸ್ಥಾನದ ಅರ್ಚಕ ಯು. ಸಂದೇಶ ಭಟ್‌, ಸಿಬಂದಿಯಾದ ಸುರೇಶ ಭಟ್‌, ಗಣೇಶ ದೇವಾಡಿಗ ಮತ್ತಿತರರು ಹಾಗೂ ಭಕ್ತರು ಉಪಸ್ಥಿತರಿದ್ದರು.

ಸಂಜೆ ಕಟ್ಟೆ ಸವಾರಿ
ರಥೋತ್ಸವದ ಪರ್ವ ದಿನಗಳಲ್ಲಿ ರಾತ್ರಿ ಅಮ್ಮನವರ ಪಲ್ಲಕ್ಕಿ ಮೆರವಣಿಗೆ ಸಾಂಪ್ರದಾಯಿಕ ದೊಂದಿ, ಹಿಲಾಲು ದೀಪದಿಂದ ಉತ್ಸವ ಸವಾರಿ ಉಪ್ಪುಂದ, ಬಿಜೂರು ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಗಲಿದೆ. ಹತ್ತಾರು ಕಿ.ಮೀ. ಕಾಲ್ನಡಿಗೆಯ ಹಾದಿಯಲ್ಲಿ ಜನರು ರಂಗೋಲಿ ಬಿಡಿಸಿ, ದೀಪಗಳನ್ನು ಬೆಳಗಿಸಿ ಆರತಿ ನೀಡಿ ತಮ್ಮ ಭಕ್ತಿಯ ನಮನಗಳನ್ನು ಅರ್ಪಿಸುತ್ತಾರೆ.

ಎಲ್ಲೆಲ್ಲ ದೇವರ ಸಂಚಾರ
ಮೊದಲ ದಿನ ಸಂಜೆ ಉಪ್ಪುಂದ ರಥಬೀದಿಯ ಪೂರ್ವ ಕಿ.ಪ್ರಾ. ಶಾಲೆ ಬಳಿಯ ಏರುಕಟ್ಟೆ, 2ನೇ ದಿನ ಹಳಗದ ಹಿತ್ತು ಕಟ್ಟೆ ಪುರಾಣಿಕರ ಕಟ್ಟೆ, ಬಿಜೂರು ಸರಾಫರ ಕಟ್ಟೆ ಸೇರುಗಾರರ ಕಟ್ಟೆ, ಬಿಜೂರು ಮಯ್ಯರ ಕಟ್ಟೆ, ಮೂರನೇ ದಿನ ಶೆಟ್ಟರ್‌ ಕೇರಿ ಮಾದಯ್ಯ ಶೆಟ್ಟರ ಕಟ್ಟೆ, ವೈದ್ಯರ ಕೇರಿ ಕಟ್ಟೆ ಮಾದಪ್ಪು ಮಯ್ಯರ ಕಟ್ಟೆ, ಕರಾವಳಿ ಕಾಯಿ ಭಂಡಶಾಲೆ ಕಟ್ಟೆ, 2ನೇ ದಿನ ಅಂಬಾಗಿಲು ತಿರ್ಕ ಶೆಟ್ಟರ ಕಟ್ಟೆ, ಕಟ್ಕೆರೆ ಶೆಟ್ಟರ ಕಟ್ಟೆ, ದೀಟಿ ಮಯ್ಯರ ಕಟ್ಟೆ, ಶೇಟ್‌ರ ಕಟ್ಟೆ, ಬೊಪ್ಪೆಹಕ್ಕು ಗಾಣಿಗರ ಕಟ್ಟೆ, ಐದನೇ ದಿನ ಓಲಗ ಮಂಟಪ ಕಟ್ಟೆ, ತೊಪ್ಪಲು ಕಟ್ಟೆ, ಚೋಟಿ ಗೋವಿಂದರ ಕಟ್ಟೆ, ಹೆಬ್ಟಾರಹಿತ್ತು ಕಾರಂತರ ಕಟ್ಟೆ, ಹಿತ್ತುಮನೆ ಪುಟ್ಟಯ್ಯ ದೇವಾಡಿಗರ ಕಟ್ಟೆ, ಪಠೇಲರ ಕಟ್ಟೆ, 6ನೇ ದಿನ ರಥೋತ್ಸವ ಅವರೋಹಣ, ಉತ್ಸವ ನಡಿಗೆಯ ಕೊನೆಯ ದಿನ ಬಿಜೂರು ಅರೆಕಲ್ಲು ಬ್ರಹ್ಮನ ಕಟ್ಟೆ ಹಾಗೂ ಅರೆಕಲ್ಲು ಮಹಾಲಿಂಗೇಶ್ವರ ದೇಗುಲದಿಂದ ಬೆಳಗ್ಗಿನ ಜಾವ ಬಿಜೂರು ಶ್ರೀ ದುರ್ಗಾಪರಮೇಶ್ವರೀ ದೇಗುಲ (ತಂಗಿ ಮನೆಗೆ) ಆಗಮಿಸುವುದು ವಾಡಿಕೆ. ಹೊಳ್ಳರ ಮನೆ ಬಳಿಯ ಬನ್ನೂರು ಶೆಟ್ಟರ ಕಟ್ಟೆ ಬಳಿಕ ಅಮ್ಮನವರ ನಗರೋತ್ಸವ ನಡೆಯಲಿದೆ. ಹಬ್ಬದ ಪರ್ಯಂತ ಊರಿನ ನಾಲ್ಕೂ ದಿಸೆಗಳಿಗೆ ದೇವಿಯು ಅಲಂಕೃತ ಪಲ್ಲಕಿಯಲ್ಲಿ
ವೈಭವದಿಂದ ದರ್ಶನ ನೀಡುವ, ವಿವಿಧ ಕಟ್ಟೆಗಳಲ್ಲಿ ಕುಳಿತು ಸಂಭ್ರಮಿಸುವ ಪದ್ಧತಿ ಇಂದಿಗೂ ನಡೆದುಕೊಂಡು ಬಂದಿದೆ.

ನ. 28: ಶ್ರೀ ಮನ್ಮಹಾರಥೋತ್ಸವ
ನ. 24ರಂದು ಗಜಾರೋಹಣೋತ್ಸವ, 25ರಂದು ಅಶ್ವಾರೋಹಣೋತ್ಸವ, 26ರಂದು ಮಯೂರ ವಾಹನೋತ್ಸವ, 27ರಂದು ರಂಗಪೂಜೆ, ಪುಷ್ಪಕ ಸಿಂಹರೋಹಣೋತ್ಸವ ನಡೆಯಲಿದೆ. 28ರಂದು ಶ್ರೀ ಮನ್ಮಹಾ ರಥೋತ್ಸವವು ವಿವಿಧ ಧಾರ್ಮಿಕ, ಸಂಜೆ
ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನೆರವೇರಲಿದೆ. 29ರಂದು ಚೂರ್ಣೋತ್ಸವ, ನ. 30ರಂದು ಧ್ವಜಾವರೋಹಣ, ನಗರೋತ್ಸವದೊಂದಿಗೆ ಕೊಡಿ ಹಬ್ಬವು ಸಂಪನ್ನಗೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next