Advertisement

ರುಚಿಗೆ ತಕ್ಕಷ್ಟು “ಉಪ್ಪು ಹುಳಿ ಖಾರ’

07:00 PM Nov 24, 2017 | Team Udayavani |

ಮೂರು ಜನ, ಒಂದು ರಾಬರಿ, 12 ಕೋಟಿ ರೊಕ್ಕ…! ಇಷ್ಟು ಹೇಳಿದ ಮೇಲೆ ಇದೊಂದು ಬ್ಯಾಂಕ್‌ ರಾಬರಿ ಕುರಿತ ಸಿನಿಮಾ ಅಂತ ಮುಲಾಜಿಲ್ಲದೆ ಅಂದುಕೊಳ್ಳಬಹುದು. ಹಾಗಂತ, ಇಲ್ಲಿ ಅದೇ ಹೈಲೈಟ್‌ ಆಗಿರುತ್ತೆ ಅಂದುಕೊಂಡರೆ ಆ ಊಹೆ ತಪ್ಪು. ಇಲ್ಲೊಂದು ಕೆಟ್ಟ ವ್ಯವಸ್ಥೆ ಇದೆ. ಕನಸು ಕಂಡವರ ಗೋಳಿದೆ. ಬದುಕಿನಲ್ಲಿ ಏನೋ ಆಗಬೇಕು ಅಂದುಕೊಂಡವರ ನರಳಾಟವಿದೆ.

Advertisement

“ಅರ್ಥ’ ವ್ಯವಸ್ಥೆಯ ಒಳನೋಟವಿದೆ. ಇವೆಲ್ಲದರ ಜತೆಗೆ ಮುದ್ದಾದ ಮೂರು ಲವ್‌ ಸ್ಟೋರಿಗಳಿವೆ. ಆ ನಡುವೆ ಕೋಪವಿದೆ, ಗೊತ್ತಿದ್ದೂ ಮಾಡುವ ಅಪರಾಧವೂ ಇದೆ. ಮೂವರು ಹುಡುಗರು ಬ್ಯಾಂಕ್‌ ರಾಬರಿ ಮಾಡಿ 12 ಕೋಟಿ ಕದಿಯುತ್ತಾರೆ. ಅವರೇಕೆ ಕದಿಯುತ್ತಾರೆ ಎಂಬುದೇ ರೋಚಕ. ಇವೆಲ್ಲವನ್ನೂ ತಿಳಿದುಕೊಳ್ಳುವ ಕುತೂಹಲವಿದ್ದರೆ “ಉಪ್ಪು ಹುಳಿ ಖಾರ’ದ ರುಚಿ ಸವಿಯಬಹುದು.

ಒಂದು ರುಚಿಕಟ್ಟಾದ ಅಡುಗೆಗೆ ಉಪ್ಪು ಹುಳಿ ಖಾರ ಎಷ್ಟು ಮುಖ್ಯವೋ, ಹಾಗೇ ಒಂದೊಳ್ಳೆಯ ಚಿತ್ರಕ್ಕೂ ಕಥೆ, ಚಿತ್ರಕಥೆ, ನಿರೂಪಣೆ ಅಷ್ಟೇ ಮುಖ್ಯ. ಇಮ್ರಾನ್‌ ಸರ್ದಾರಿಯ, ಈ ಬಾರಿ ಅದನ್ನು ಗಂಭೀರವಾಗಿ ಪರಿಗಣಿಸಿ, ಒಂದು ಚೌಕಟ್ಟಿನಲ್ಲಿ ಎಷ್ಟು ಹೇಳಬೇಕು, ಏನನ್ನು ತೋರಿಸಬೇಕು, ಹೇಗೆ ತೋರಿಸಬೇಕು ಎಂಬುದನ್ನು ಚಾಚು ತಪ್ಪದೆ ಪಾಲಿಸಿದ್ದಾರೆ.

ಆ ಕಾರಣಕ್ಕೆ “ಉಪ್ಪು ಹುಳಿ ಖಾರ’ದಲ್ಲಿ ಕಥೆಯಿಂದ ಹಿಡಿದು, ಮಾತು, ಪಾತ್ರ, ನಿರೂಪಣೆ ಶೈಲಿ ಎಲ್ಲವೂ ಹದವಾಗಿದೆ. ನೋಡುಗರಿಗೆ ಯಾವುದೂ ಹೆಚ್ಚು, ಕಮ್ಮಿ ಅನಿಸದಂತೆ ಮನರಂಜನೆ ಜತೆಗೆ ಒಂದಷ್ಟು ಗಂಭೀರ ವಿಷಯ ಉಣಬಡಿಸಿದ್ದಾರೆ. ಈ ಎಲ್ಲಾ ಕಾರಣಗಳಿಗೆ “ಉಪ್ಪು ಹುಳಿ ಖಾರ’ ರುಚಿಸುತ್ತಾ ಹೋಗುತ್ತದೆ. ಒಂದು ಬ್ಯಾಂಕ್‌ ರಾಬರಿ ಕಥೆಯನ್ನು ಹೀಗೂ ಹೇಳಿ, ತೋರಿಸಬಹುದು ಅನ್ನುವುದನ್ನು ನಿರ್ದೇಶಕರು ಚೆನ್ನಾಗಿ ಅರಿತಿದ್ದಾರೆ.

ಆ ಕಾರಣಕ್ಕೆ, ರಾಬರಿಯ ಹಿಂದಿನ ಉದ್ದೇಶವನ್ನು ಅರ್ಥಪೂರ್ಣ ಎನಿಸುವಷ್ಟರ ಮಟ್ಟಿಗೆ ತೋರಿಸಿದ್ದಾರೆ. ಕೆಲವೆಡೆ ಬರುವ ಒಂದೊಂದು ದೃಶ್ಯ ಕಿರಿಕಿರಿಯನ್ನುಂಟು ಮಾಡುತ್ತವೆ ಅನ್ನುವುದು ಬಿಟ್ಟರೆ, ಚಿತ್ರ ಸಲೀಸಾಗಿ ನೋಡಿಸಿಕೊಂಡು ಹೋಗುತ್ತದೆ. ಸಾಂಬಾರಿನಲ್ಲಿ ಉಪ್ಪು ಹುಳಿ ಖಾರ ಒಮ್ಮೊಮ್ಮೆ ಹೆಚ್ಚು ಕಮ್ಮಿಯಾದಂತೆ, ಇಲ್ಲೂ ಸಣ್ಣ ಪುಟ್ಟ ಎಡವಟ್ಟುಗಳಿವೆ.

Advertisement

ನ್ಯಾಯಾಲಯದ ಒಳಗಿನ ವಾದ, ವಿವಾದ ಸುದ್ದಿ ಟಿವಿಗಳಲ್ಲಿ ನೇರಪ್ರಸಾರ ಆಗೋದು, ಕೋರ್ಟ್‌ ಹಾಲ್‌ನಲ್ಲಿ ಎಸಿಪಿಯೊಬ್ಬರು ಸಾಕ್ಷಿ ಹೇಳಲು ನ್ಯಾಯಾಧೀಶರ ಎದುರು ವಕೀಲರಂತೆ ಅತ್ತಿತ್ತ ಓಡಾಡುತ್ತ ಮಾತನಾಡುವ ದೃಶ್ಯಗಳು ನೈಜತೆಗೆ ದೂರವಾಗಿವೆ. ಉಳಿದಂತೆ ಕಾಣಸಿಗುವುದೆಲ್ಲವೂ ಅಚ್ಚುಕಟ್ಟು. ಇಲ್ಲಿ ಮೂವರು ನಾಯಕರು, ಅವರಿಗೆ ಮೂವರು ನಾಯಕಿಯರು. ಒಬ್ಬೊಬ್ಬರದು ಒಂದೊಂದು ಲವ್‌ಸ್ಟೋರಿ.

ಮೊದಲು ಶುರುವಾಗುವ ಓಂ ಮತ್ತು ಮಾಲ ನಡುವಿನ ಲವ್‌ಸ್ಟೋರಿ ಅಷ್ಟಾಗಿ ರುಚಿಸುವುದಿಲ್ಲ. ಉಳಿದ ಇನ್ನಿಬ್ಬರ ಪ್ರೀತಿಯ ಕಥೆ, ವ್ಯಥೆ ಮಜಬೂತಾಗಿವೆ. ಅದಕ್ಕೆ ಕಾರಣ, ವೇಗದ ನಿರೂಪಣೆ ಮತ್ತು ಕಟ್ಟಿಕೊಟ್ಟಿರುವ ಪಾತ್ರಗಳಲ್ಲಿನ ಗಟ್ಟಿತನ. ಈ ಮೂವರ ಲವ್‌ಸ್ಟೋರಿ ಹೇಳುವುದರಲ್ಲೇ ಮೊದಲರ್ಧ ಮುಗಿದು ಹೋಗುತ್ತೆ. ಆ ಮಧ್ಯೆ ಒಂದೊಂದು ತಿರುವು ಕಾಣಿಸುತ್ತಾ ಹೋಗುತ್ತೆ.

“ಉಪ್ಪು ಹುಳಿ ಖಾರ’ದೊಳಗಿನ ಸಾರವನ್ನು ಚಪ್ಪರಿಸೋದೇ ದ್ವಿತಿಯಾರ್ಧದಲ್ಲಿ. ಆ ಸಾರದೊಳಗಿರುವ ಅಂಶ ಯಾವುದೆಂದು ತಿಳಿಯುವುದಕ್ಕೆ ಚಿತ್ರ ನೋಡಬೇಕು. ಎಲ್ಲೋ ಒಂದು ಕಡೆ ಚಿತ್ರ ತನ್ನ ವೇಗಮಿತಿ ಕಳೆದುಕೊಳ್ಳುತ್ತಿದೆ ಅಂದುಕೊಳ್ಳುತ್ತಿರುವಂತೆ, ಹೊಸತನದ ಹಾಡು ಕಾಣಿಸಿಕೊಂಡು ವೇಗ ಮಿತಿಯನ್ನು ಕಾಪಾಡಿಕೊಳ್ಳುತ್ತದೆ. ವಿನಾಕಾರಣ, ಇಲ್ಲಿ ಯಾವ ಅಂಶಗಳೂ ಇಲ್ಲ.

ಎಲ್ಲೂ ಸಹ ಅನಗತ್ಯ ದೃಶ್ಯಗಳೂ ಇಲ್ಲ. ಈಗಿನ ಟ್ರೆಂಡ್‌ ಟೇಸ್ಟ್‌ಗೆ ಏನೆಲ್ಲಾ ಇರಬೇಕೋ ಅದೆಲ್ಲವನ್ನೂ ಒಟ್ಟುಗೂಡಿಸಿ, ಉಪ್ಪು ಹುಳಿ ಖಾರವನ್ನು ಸರಿಯಾಗಿ ಬೆರೆಸಲಾಗಿದೆ. ಒಬ್ಬನಿಗೆ ಪೊಲೀಸ್‌ ಅಧಿಕಾರಿ ಆಗುವ ಆಸೆ, ಇನ್ನೊಬ್ಬನಿಗೆ ಡಾಕ್ಟರ್‌ ಆಗುವಾಸೆ, ಗೊತ್ತು ಗುರಿ ಇಲ್ಲದ ಮತ್ತೂಬ್ಬನಿಗೆ ನೆಲೆಕಂಡುಕೊಳ್ಳುವಾಸೆ. ಇವರೆಲ್ಲರಿಗೂ ಕಾಡೋದು ಭ್ರಷ್ಟ ವ್ಯವಸ್ಥೆ. ಅದಕ್ಕೆ ಮುಖ್ಯ ಕಾರಣ ದುಡ್ಡು.

ತಾವು ಗುರುತಿಸಿಕೊಳ್ಳಬೇಕಾದರೆ ಒಂದು ಕೆಟ್ಟ ಕೆಲಸ ಮಾಡಬೇಕು ಅಂತ ಆ ಮೂವರು ನಿರ್ಧರಿಸುತ್ತಾರೆ. ಕೊಲೆ ಮಾಡೋದಾ, ರೇಪ್‌ ಮಾಡೋದಾ ಅಥವಾ ರಾಬರಿ ಮಾಡೋದಾ ಎಂಬ ಗೊಂದಲ ಅವರೊಳಗೆ ಶುರುವಾಗುತ್ತೆ. ಕೊನೆಗೆ ಬ್ಯಾಂಕ್‌ ರಾಬರಿ ಮಾಡ್ತಾರೆ. ಎಸಿಪಿಯೊಬ್ಬರು ಆ ಮೂವರನ್ನು ಹಿಡಿದು ಜೈಲಿಗಟ್ಟುತ್ತಾರೆ. ಮುಂದೇನಾಗುತ್ತೆ ಎಂಬುದು ಸಸ್ಪೆನ್ಸ್‌.

ಎಸಿಪಿ ದೇವಿಯಾಗಿ ಮಾಲಾಶ್ರೀ ಇಲ್ಲಿ ಹೈಲೈಟ್‌. ಉತ್ತರ ಕರ್ನಾಟಕದ ಖಡಕ್‌ ಮಾತುಗಳು ಆ ಪಾತ್ರದ ತೂಕ ಹೆಚ್ಚಿಸಿವೆ. ಎಂದಿಗಿಂತ ಎನರ್ಜಿಯಲ್ಲೇ ಕಾಣಿಸಿಕೊಂಡಿದ್ದಾರೆ. ಧನು ಡ್ಯಾನ್ಸ್‌ನಲ್ಲಿ ಸೈ ಎನಿಸಿಕೊಳ್ಳುತ್ತಾರೆ. ಶಶಿ ಮತ್ತು ಶರತ್‌ಗಿಲ್ಲಿ ಭವಿಷ್ಯವಿದೆ. ವಿದೇಶಿ ಬೆಡಗಿ ಮಾಶ ಹೇಳಿದ್ದನ್ನಷ್ಟು ಮಾಡಿದ್ದೇ ಗ್ರೇಟ್‌.

ಅನುಶ್ರೀ ಮತ್ತು ಜಯಶ್ರೀ ನಟನೆಗಿಂತ ಅವರ ಮಾತೇ ಬಂಡವಾಳ. ಉಳಿದಂತೆ ಬರುವ ಪಾತ್ರಗಳ್ಯಾವೂ ಗುರುತಿಸಿಕೊಳ್ಳುವುದಿಲ್ಲ. ಶಶಾಂಕ್‌ ಶೇಷಗಿರಿ, ಜ್ಯುಡಾ ಸ್ಯಾಂಡಿ, ಪ್ರಜ್ವಲ್‌ ಪೈ, ಕಿಶೋರ್‌ ಏಕಸಾ ಅವರ ಸಂಗೀತದ ಹಾಡುಗಳು ತಕ್ಕಮಟ್ಟಿಗೆ ರುಚಿಸುತ್ತವೆ. ನಿರಂಜನ್‌ ಬಾಬು ಕ್ಯಾಮೆರಾ ಕೈಚಳಕದಲ್ಲಿ ಚಿತ್ರ ಕಲರ್‌ಫ‌ುಲ್‌ ಆಗಿದೆ.

ಚಿತ್ರ: ಉಪ್ಪು ಹುಳಿ ಖಾರ
ನಿರ್ಮಾಣ: ಎಂ.ರಮೇಶ್‌ ರೆಡ್ಡಿ
ನಿರ್ದೇಶನ: ಇಮ್ರಾನ್‌ ಸರ್ದಾರಿಯ
ತಾರಾಗಣ: ಮಾಲಾಶ್ರೀ, ಅನುಶ್ರೀ, ಜಯಶ್ರೀ, ಮಾಶ, ಶರತ್‌, ಶಶಿ, ಧನಂಜಯ ಇತರರು.

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next