Advertisement

ಸುಲಭವಾಗಿ, ಕಡಿಮೆ ದರದಲ್ಲಿ ಮರಳು ಸಿಗಲಿ

06:37 AM Jan 31, 2019 | Team Udayavani |

ಉಪ್ಪಿನಂಗಡಿ: ಬಡವರಿಗೆ, ಜನ ಸಾಮಾನ್ಯರಿಗೆ ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ಮರಳು ದೊರಕುವಂತಾಗಬೇಕು, ಈ ನಿಟ್ಟಿನಲ್ಲಿ ಜನಪರ ಹಾಗೂ ಅಭಿವೃದ್ಧಿಪರವಾದ ಮರಳು ನೀತಿ ಜಾರಿಯಾಗಬೇಕು ಎಂದು ಹಕ್ಕೊತ್ತಾಯ ಮಂಡನೆ ಮಾಡಲಾಯಿತು.

Advertisement

ಗಾಂಧಿ ಪುಣ್ಯತಿಥಿ ದಿನವಾದ ಜ. 30ರಂದು ಉಪ್ಪಿನಂಗಡಿಯಲ್ಲಿ ಮರಳು ಸತ್ಯಾಗ್ರಹ ಸಮಿತಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಮರಳು ಸತ್ಯಾಗ್ರಹ ಪ್ರತಿಭಟನೆ ನಡೆಯಿತು.

ಉಪ್ಪಿನಂಗಡಿ ಮರಳು ಹೋರಾಟ ಸಮಿತಿ ಆಶ್ರಯದಲ್ಲಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ಜಮಾಯಿಸಿದ ಪ್ರತಿಭಟನಕಾರರು, ನದಿ ದಡಕ್ಕೆ ತೆರಳಿ ಚೀಲಗಳಲ್ಲಿ ಮರಳು ತುಂಬಿಸಿಕೊಂಡು ಪ್ರತಿಭಟನೆಗೆ ಕುಳಿತರು. ಮರಳು ಹಕ್ಕನ್ನು ಜನರಿಗೆ ನೀಡಬೇಕು. ಅಧಿಕಾರವನ್ನು ಗ್ರಾಮ ಪಂಚಾಯತ್‌ಗೆ ನೀಡಬೇಕು ಎಂದು ಹಕ್ಕೊತ್ತಾಯ ಮಂಡಿಸಿದರು.

ಪೇಟೆಯಲ್ಲಿ ಮೆರವಣಿಗೆ
ನದಿಯಿಂದ ಮರಳು ಚೀಲ ಹೇರಿಕೊಂಡು ಪೇಟೆಯಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ಗ್ರಾ.ಪಂ. ಮುಂದೆ ಮರಳು ಸುರಿದರು. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ರಘುನಾಥ ರೈ ಮಹಾತ್ಮಾ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು.

ಸತ್ಯಾಗ್ರಹ ಸಮಿತಿ ಅಧ್ಯಕ್ಷ ವಿಲ್ಫ್ರೆಡ್‌ ಡಿ’ಸೋಜಾ ಮಾತನಾಡಿ, ಸಮರ್ಪಕ ಮರಳು ನೀತಿ ಇಲ್ಲದೆ ಮರಳು ಸಿಗದಂತಾಗಿದೆ. ಕೆಲವರು ಮರಳನ್ನು ಲಾಭದ ವಸ್ತುವಾಗಿ ಮಾಡಿಕೊಂಡಿದ್ದಾರೆ. ಮರಳು ಗಣಿಗಾರಿಕೆ ಮಾಫಿಯಾ ಆಗಿ ಬದಲಾಗಿದ್ದು, ನಗರದಲ್ಲಿ ಕಾಂಕ್ರೀಟ್ ಕಾಡುಗಳನ್ನು ಬೆಳೆಸಲು ನಮ್ಮ ಊರಿನ ಮರಳು ಸಾಗಿಸುತ್ತಿದ್ದಾರೆ. ಆಶ್ರಯ ಸಹಿತ ವಸತಿ ಯೋಜನೆಗಳಿಗೂ ದುಪ್ಪಟ್ಟು ಹಣ ನೀಡಿ ಮರಳು ಕೊಳ್ಳಬೇಕಾದ ಸ್ಥಿತಿ ಒದಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಸಂಘಟಿತ ಹೋರಾಟ ಅಗತ್ಯ
ಸಮಿತಿ ಕಾರ್ಯದರ್ಶಿ ಬಿ.ಎಂ. ಭಟ್ ಮಾತನಾಡಿ, ನೀರನ್ನೂ ದುಡ್ಡು ಕೊಟ್ಟು ಕೊಳ್ಳಬೇಕಾಗಿದೆ. ನಮ್ಮ ಹಕ್ಕಿಗಾಗಿ ಸಂಘಟಿತ ಹೋರಾಟ ಮಾಡಬೇಕಾಗಿದೆ ಎಂದರು.

ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಕೆ. ಅಬ್ದುಲ್‌ ರಹಿಮಾನ್‌, ಬಂದಾರು ಗ್ರಾ.ಪಂ. ಅಧ್ಯಕ್ಷ ಉದಯಕುಮಾರ್‌, ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಸುರೇಶ್‌ ಅತ್ರಮಜಲು ಮಾತನಾಡಿದರು.

ಪ್ರತಿಭಟನೆಯಲ್ಲಿ ನೇತ್ರಾವತಿ ನದಿ ತಿರುವು ವಿರೋಧಿ ಹೋರಾಟ ಸಮಿತಿ ಸಂಚಾಲಕ ಡಾ| ನಿರಂಜನ ರೈ, ಪುತ್ತೂರು ತಾಲೂಕು ರೈತ ಸಂಘ, ಹಸಿರು ಸೇನೆ ಘಟಕದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಹೊಳ್ಳ, ಪುತ್ತೂರು ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್‌ ಕೌಶಲ್‌ ಶೆಟ್ಟಿ, ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು, ಉಪ್ಪಿನಂಗಡಿ-ವಿಟ್ಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಯುವ ಕಾಂಗ್ರೆಸ್‌ ಅಧ್ಯಕ್ಷ ಯು.ಟಿ. ತೌಸೀಫ್, ಉಪ್ಪಿನಂಗಡಿ ತಾ.ಪಂ. ಮಾಜಿ ಸದಸ್ಯ ಎನ್‌. ಉಮೇಶ್‌ ಶೆಣೈ, ಉಪ್ಪಿನಂಗಡಿ ಸಿ.ಎ. ಬ್ಯಾಂಕ್‌ ನಿರ್ದೇಶಕ ರಾಮಚಂದ್ರ ಮಣಿಯಾಣಿ, 34-ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ರತಿ ನಾಯ್ಕ, ಸದಸ್ಯರಾದ ಶೇಖಬ್ಬ, ಬಾಬು ನಾಯ್ಕ, ತಣ್ಣೀರುಪಂಥ ಗ್ರಾ.ಪಂ. ಅಧ್ಯಕ್ಷ ಜಯವಿಕ್ರಂ, ಇಳಂತಿಲ ಗ್ರಾ.ಪಂ. ಅಧ್ಯಕ್ಷ ಯೂಸುಫ್ ಪೆದಮಲೆ, ಹಿರೇಬಂಡಾಡಿ ಗ್ರಾ.ಪಂ. ಉಪಾಧ್ಯಕ್ಷೆ ಪುಷ್ಪಾ, ಸದಸ್ಯರಾದ ಮುದ್ದ, ಸತ್ಯಾನಂದ ಶೆಟ್ಟಿ, ನಿತಿನ್‌, ವೆಂಕಮ್ಮ, ಚಂದ್ರಾವತಿ, ವಿಶ್ವನಾಥ, ಕೋಡಿಂಬಾಡಿ ಗ್ರಾ.ಪಂ. ಸದಸ್ಯ ಜಯಪ್ರಕಾಶ್‌ ರೈ ಕೋಡಿಂಬಾಡಿ, ಬಜತ್ತೂರು ಗ್ರಾ.ಪಂ. ಸದಸ್ಯರಾದ ನಝೀರ್‌ ಬೆದ್ರೋಡಿ, ಪ್ರಸಿಲ್ಲಾ ಡಿ’ಸೋಜಾ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯರಾದ ಡಾ| ರಾಜಾರಾಮ್‌, ಕೃಷ್ಣ ರಾವ್‌ ಅರ್ತಿಲ, ಪ್ರಕಾಶ್‌ ರೈ ಬೆಳ್ಳಿಪ್ಪಾಡಿ, ನೇತ್ರಾವತಿ ಅಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಅಬ್ದುಲ್‌ ಲತೀಫ್, ಪದಾಧಿಕಾರಿಗಳಾದ ಫಾರೂಕ್‌ ಝಿಂದಗಿ, ಖಲಂದರ್‌ ಶಾಫಿ, ಅಬ್ಟಾಸ್‌ ಕುದ್ಲೂರು, ಕಾರ್ಮಿಕ ಮುಖಂಡರಾದ ಮಂಜುನಾಥ ಬೆಳ್ತಂಗಡಿ, ನೆಬಿಸಾ ಬೆಳ್ತಂಗಡಿ, ಮರಳು ಹೋರಾಟ ಸಮಿತಿ ಪದಾಧಿಕಾರಿಗಳಾದ ಅಶ್ರಫ್ ಬಸ್ತಿಕ್ಕಾರ್‌, ರೂಪೇಶ್‌ ರೈ, ಜತೀಂದ್ರ ಶೆಟ್ಟಿ, ಯು.ಕೆ. ಇಬ್ರಾಹಿಂ, ಎಂ.ಬಿ. ವಿಶ್ವನಾಥ ರೈ, ಇಸಾಕ್‌ ಸಾಲ್ಮರ, ಸನಮ್‌, ಮಾಣಿಕ್ಯರಾಜ್‌ ಪಡಿವಾಳ್‌, ನಝೀರ್‌ ಮಠ, ಉಮಾನಾಥ ಶೆಟ್ಟಿ, ಉಲ್ಲಾಸ್‌ ಕೋಟ್ಯಾನ್‌, ಜಯಪ್ರಕಾಶ್‌ ಬದಿನಾರ್‌, ಕೈಲಾರ್‌ ರಾಜಗೋಪಾಲ್‌, ಇಬ್ರಾಹಿಂ ಮೋನು ಪಿಲಿಗೂಡು ಉಪಸ್ಥಿತರಿದ್ದರು.

ಅಬ್ದುಲ್‌ ರಹಿಮಾನ್‌ ಯುನಿಕ್‌ ವಂದಿಸಿದರು. ಲೋಕೇಶ್‌ ಬೆತ್ತೋಡಿ ಕಾರ್ಯಕ್ರಮ ನಿರೂಪಿಸಿದರು. ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಪುತ್ತೂರು ತಹಸೀಲ್ದಾರ್‌ ಡಾ| ಪ್ರದೀಪ್‌ ಕುಮಾರ್‌ ಅವರಿಗೆ ಸಲ್ಲಿಸಲಾಯಿತು.

ಪ್ರಮುಖ ಹಕ್ಕೊತ್ತಾಯಗಳು
 • ಕರಾವಳಿಯಲ್ಲಿ ಅವೈಜ್ಞಾನಿಕ ಮರಳು ಲೂಟಿ ತಡೆಯಬೇಕು. ಸಿಆರ್‌ಝಢ್ಯೇತರ (ಗ್ರಾಮೀಣ) ಪ್ರದೇಶದಲ್ಲಿ ಯಂತ್ರಗಳ ಮೂಲಕ ಮರಳುಗಾರಿಕೆ ನಿಷೇಧಿಸಬೇಕು.

•ಗಣಿ ಮತ್ತು ಭೂವಿಜ್ಞಾನ ಇಲಾಖೆ ಗ್ರಾ.ಪಂ.ಗಳ ಸಹಯೋಗದಲ್ಲಿ ಮರಳು ದಿಣ್ಣೆಗಳ ಲಭ್ಯತೆಯನ್ನು ಗುರುತಿಸಬೇಕು. ದಿಣ್ಣೆಗಳನ್ನು ವರ್ಗೀಕರಿಸಿ ಗುತ್ತಿಗೆ ನೀಡಬೇಕು.

•ಸರಕಾರದ ವಸತಿ ಯೋಜನೆ, ಶೌಚಾಲಯಗಳ ಫ‌ಲಾನುಭವಿಗಳಿಗೆ, ಗ್ರಾ.ಪಂ. ರಸ್ತೆಗಳು, ಮನೆ ದುರಸ್ತಿ ಕಾಮಗಾರಿಗಳಿಗೆ ಶುಲ್ಕ ಪಡೆದು ಮರಳನ್ನು ಪೂರೈಸಬೇಕು.

•ಗ್ರಾ.ಪಂ. ಅನುಮತಿಯಿಂದ ಪಿಕ್‌ಅಪ್‌ ಹಾಗೂ ಇತರ ಸಣ್ಣ ವಾಹನಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ಮರಳು ಸಾಗಿಸುವ ಅವಕಾಶ ಕೊಡಬೇಕು. ಕಂಪು ಕಲ್ಲಿನ ನಿರ್ಬಂಧವನ್ನೂ ಸಡಿಲಿಸಬೇಕು. ಪರವಾನಿಗೆ ಅಧಿಕಾರ ಗ್ರಾ.ಪಂ.ಗೇ ಇರಬೇಕು.

• ಮರಳು ಸಾಗಾಟ, ಕೆಂಪು ಕಲ್ಲು ಗಣಿಗಾರಿಕೆ ಮತ್ತು ಸಾಗಾಟದಿಂದ ಗ್ರಾಮೀಣ ರಸ್ತೆಗಳಿಗೆ, ಪರಿಸರ ಮತ್ತು ಜಲಮೂಲಗಳಿಗೆ ಹಾನಿಯಾಗದಂತೆ ನಿಯಂತ್ರಿಸುವ ಸೂಕ್ತ ನೀತಿಯನ್ನು ರೂಪಿಸಿ, ಅನುಷ್ಠಾನಗೊಳಿಸುವ ಅಧಿಕಾರ ಗ್ರಾ.ಪಂ.ಗೆ ನೀಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next