Advertisement

Uppinangady: ತಲೆಗೆ ಕಲ್ಲಿನಿಂದ ಜಜ್ಜಿ ಕಾರ್ಮಿಕನ ಕೊ*ಲೆ

07:28 AM Dec 05, 2024 | Team Udayavani |

ಉಪ್ಪಿನಂಗಡಿ: ಇಲ್ಲಿನ ಬಸ್‌ ನಿಲ್ದಾಣದ ಬಳಿಯ ಗ್ರಾಮ ಪಂಚಾಯತ್‌ ಸ್ವಾಮ್ಯದ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಅಸ್ಸಾಂ ಮೂಲದ ಕಾರ್ಮಿಕನೋರ್ವನ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆಗೈದ ಘಟನೆ ಬುಧವಾರ ಬೆಳಕಿಗೆ ಬಂದಿದೆ.

Advertisement

ಕೆಲವು ಸಮಯಗಳ ಹಿಂದೆ ಸ್ಥಳೀಯ ಬಾರ್‌ ಆ್ಯಂಡ್‌ ರೆಸ್ಟೋರೆಂಟಿನಲ್ಲಿ ಕೆಲಸ ಮಾಡಿಕೊಂಡಿದ್ದ ಎನ್ನಲಾದ ಹಾಗೂ ಇತ್ತೀಚೆಗೆ ಕಟ್ಟಡ ನಿರ್ಮಾಣ ಕಾರ್ಯ ದಲ್ಲಿ ಕಾರ್ಮಿಕನಾಗಿ ತೊಡಗಿಕೊಂಡಿದ್ದ ಅಸ್ಸಾಂ ರಾಜ್ಯದ ಕರ್ಬಿ ಅಂಗ್ಲಾಂಗ್‌ ಜಿಲ್ಲೆಯ ಕ್ರಿಶ್ಚಿಯನ್‌ ಗ್ರಾಮದ ದೀಪಕ್‌ ಬೆಂಗರ (34) ಕೊಲೆಗೀಡಾದವ.

ದೇಹದಲ್ಲಿ ಟಿ-ಶರ್ಟ್‌ ಮಾತ್ರವಿತ್ತು
ಕಾರ್ಮಿಕರು ಬುಧವಾರ ಮುಂಜಾನೆ ಕಾಮಗಾರಿಯ ಸಲುವಾಗಿ ಕಟ್ಟಡವನ್ನು ಪ್ರವೇಶಿಸಿದಾಗ ಕಟ್ಟಡದ ಮೊದಲ ಮಹಡಿಯಲ್ಲಿ ಮಲಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ತಲೆಯ ಭಾಗವನ್ನು ಕಲ್ಲಿನಂತಹ ಭಾರವಾದ ವಸ್ತುವಿನ ಸಹಾಯದಿಂದ ಜಜ್ಜಿ ಕೊಲೆಗೈದಂತೆ ಕಂಡುಬಂದಿದೆ. ದೇಹದಲ್ಲಿ ಟೀ ಶರ್ಟ್‌ ಮಾತ್ರ ಇತ್ತು.

ಅಧಿಕಾರಿಗಳ ಭೇಟಿ
ಘಟನ ಸ್ಥಳಕ್ಕೆ ದ.ಕ. ಜಿಲ್ಲಾ ಪೊಲೀಸ್‌ ಅಧೀಕ್ಷಕ ಡಾ| ಯತೀಶ್‌ ಎನ್‌., ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ರಾಜೇಂದ್ರ, ವಿಧಿವಿಜ್ಞಾನ ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಂಚಾಯತ್‌ ಕಾರ್ಯದರ್ಶಿಯವರು ನೀಡಿದ ದೂರಿನ ಆಧಾರದಲ್ಲಿ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಮೊಬೈಲ್‌ ಸಿಮ್‌ ತೆಗೆದಿರಿಸಿದ್ದರು
ಸನಿಹದಲ್ಲೇ ಸಿಮ್‌ ತೆಗೆದಿರಿಸಲಾದ ಹಾಗೂ ಬ್ಯಾಟರಿ ಬೇರ್ಪಡಿಸಲಾಗಿದ್ದ ಮೊಬೈಲ್‌ ಫೋನ್‌ ಪತ್ತೆಯಾಗಿದೆ. ಸಿಮ್‌ ತೆಗೆದಿರುವುದರಿಂದ ಮೃತನ ಒಡನಾಟ ಇರಿಸಿಕೊಂಡವರೇ ಹತ್ಯೆ ಮಾಡಿರುವ ಸಾಧ್ಯತೆ ಇದೆ. ಮೃತದೇಹದ ಬಳಿ ಇದ್ದ ಚುನಾವಣ ಗುರುತು ಪತ್ರದ ಆಧಾರದಲ್ಲಿ ಹೆಸರು ವಿಳಾಸವನ್ನು ಪತ್ತೆ ಹಚ್ಚಲು ಸಾಧ್ಯವಾಯಿತು.

Advertisement

ಕೃತ್ಯಕ್ಕೆ ಅಮಲು ಪದಾರ್ಥ ಸೇವನೆ ಕಾರಣ?
ಪಂಚಾಯತ್‌ ಆಡಳಿತದ ಕನಸಿನ ಕೂಸಾಗಿರುವ ಹೈಟೆಕ್‌ ಗ್ರಂಥಾಲಯದ ಬಗ್ಗೆ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ವಲಸೆ ಕಾರ್ಮಿಕರು ಠಿಕಾಣಿ ಹೂಡಿ ರಾತ್ರಿ ವೇಳೆ ಮದ್ಯ ಸೇವಿಸಿ ಸಂಘರ್ಷ ಮಾಡುತ್ತಿರುವುದು ಇಲ್ಲಿ ಸರ್ವೆ ಸಾಮಾನ್ಯವಾಗಿತ್ತು. ಮಾದಕ ದ್ರವ್ಯದ ಅಮಲಿನಲ್ಲಿ ಜತೆಗಿದ್ದವರೇ ಕಲ್ಲಿನಿಂದ ತಲೆಯನ್ನು ಜಜ್ಜಿ ಕೊಲೆಗೈದಿರಬಹುದೆಂದು ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next