Advertisement

ಉಪ್ಪಿನಂಗಡಿ: ಸಂಗಮದ ಸಂಭ್ರಮಕ್ಕೆ  ಸಹಸ್ರಾರು ಭಕ್ತರು ಸಾಕ್ಷಿ 

10:30 AM Aug 16, 2018 | |

ಉಪ್ಪಿನಂಗಡಿ: ಪಟ್ಟಣದ ಶ್ರೀ ಸಹಸ್ರಲಿಂಗೇಶ್ವರ ಹಾಗೂ ಮಹಾಕಾಳಿ ದೇಗುಲದ ಸನ್ನಿಧಿಯಲ್ಲಿ ಮಂಗಳವಾರ ರಾತ್ರಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಸಂಗಮವಾಗಿದೆ. ಐದು ವರ್ಷಗಳ ಬಳಿಕ ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಕಾದು ಕುಳಿತಿದ್ದರು.

Advertisement

ಮಂಗಳವಾರ ಬೆಳಗ್ಗೆ ಉಪ್ಪಿನಂಗಡಿಯಲ್ಲಿ 133.4 ಮಿ.ಮೀ. ಮಳೆ ದಾಖಲಾಗಿದೆ. ಘಟ್ಟ ಪ್ರದೇಶ ಹಾಗೂ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾದ ಕಾರಣ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ತುಂಬಿ ಹರಿದವು. ಬೆಳಗ್ಗೆ 9 ಗಂಟೆ ಸುಮಾರಿಗೆ ನದಿಗಿಳಿಯುವ 40 ಮೆಟ್ಟಿಲುಗಳ ಪೈಕಿ ಒಂದು ಮಾತ್ರ ಕಾಣಿಸುತ್ತಿತ್ತು. ಆ ಬಳಿಕ ನೀರು ಏರುತ್ತಾ ಬಂತು. ದೇವಾಲಯದ ಹಿಂಭಾಗದಲ್ಲಿ ಕುಮಾರಧಾರಾ ಹಾಗೂ ಎಡ ಭಾಗದಿಂದ ನೇತ್ರಾವತಿ  ನೀರು ದೇವಸ್ಥಾನದ ಅಂಗಣವನ್ನು ಪ್ರವೇಶಿಸಿತು. ಸಹಸ್ರಲಿಂಗೇಶ್ವರ ದೇವಸ್ಥಾನದ ಎಡಕ್ಕಿರುವ ಶ್ರೀ ಮಹಾಕಾಳಿ ಅಮ್ಮನವರ ದೇವಾಲಯ ಸಂಪೂರ್ಣ ಜಲಾವೃತವಾಯಿತು. ದೇವಾಲಯದ ಒಳಗೂ ನೀರು ಬಂತು. ಮಧ್ಯಾಹ್ನದ ಪೂಜೆ ಹೊತ್ತಿಗೆ ಸಹಸ್ರಲಿಂಗೇಶ್ವರ ದೇವಸ್ಥಾನದ ಪ್ರವೇಶ ದ್ವಾರದ ಬಳಿಗೆ ಬಂತು. ನಾಗನಕಟ್ಟೆ, ದೈವದ ಗುಡಿಗಳು ಜಲಾವೃತವಾದವು. ಮಹಾಕಾಳಿ ಅಮ್ಮನವರ ಗುಡಿಯಲ್ಲಿ ಮೊಣಕಾಲು ಮಟ್ಟ ನೀರಿತ್ತು. ಸಂಜೆಯವರೆಗೂ ನೀರು ಯಥಾ ಸ್ಥಿತಿಯಲ್ಲಿ ಇತ್ತಾದರೂ ದೇವಸ್ಥಾನದ ಬಲಭಾಗದಲ್ಲಿ ಉಭಯ ನದಿಗಳ ಸಂಗಮ ಆಗಿರಲಿಲ್ಲ.

ನೀರಿನಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವ ವರ ಸಂಭ್ರಮ ಮೇರೆ ಮೀರಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಲ್ಲೆಯ ಪ್ರವಾಸಕ್ಕೆ ಬಂದಿದ್ದರಿಂದ ಉಪ್ಪಿನಂಗಡಿಯಲ್ಲಿ ಭದ್ರತೆಗೆ ಪೊಲೀಸ್‌ ಸಿಬಂದಿಯ ಕೊರತೆಯಿತ್ತು. ಆದರೂ ಉಪ್ಪಿನಂಗಡಿ ಠಾಣೆ ಪಿಎಸ್‌ಐ ನಂದಕುಮಾರ್‌ ನೇತೃತ್ವದಲ್ಲಿ ಸೂಕ್ತ ಭದ್ರತೆ ಒದಗಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next