Advertisement

ಮೇಲ್ಮನೆ ಚುನಾವಣೆ: ಬಿಜೆಪಿಯ 3 ಸ್ಥಾನಗಳಿಗೆ 40 ಮಂದಿ ಆಕಾಂಕ್ಷಿಗಳು

01:22 AM May 23, 2024 | Team Udayavani |

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಘಟಾನುಘಟಿಗಳು ಸಹಿತ ಬರೋಬ್ಬರಿ 40 ಜನರು ಆಕಾಂಕ್ಷಿಗಳಾಗಿದ್ದು, ಆದ್ದರಿಂದ ಸಂಭಾವ್ಯರ ಪಟ್ಟಿಯನ್ನು ವರಿಷ್ಠರಿಗೆ ಕಳುಹಿಸು ವುದು ರಾಜ್ಯ ನಾಯಕರಿಗೆ ತಲೆನೋವು ಸೃಷ್ಟಿಸಿದೆ. ನಾಲ್ಕೈದು ದಿನ ಬಿಟ್ಟು ಮತ್ತೂಂದು ಸುತ್ತಿನ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಕುತೂಹಲಕಾರಿ ಸಂಗತಿ ಎಂದರೆ ಸಿ.ಟಿ.ರವಿ, ನಳಿನ್‌ ಕುಮಾರ್‌ ಕಟೀಲು, ಮುರುಗೇಶ್‌ ನಿರಾಣಿ ಜತೆಗೆ ಈಗ ಪ್ರತಾಪಸಿಂಹ ಹೆಸರೂ ಸೇರ್ಪಡೆಯಾಗಿದೆ.

Advertisement

ಬಿ.ಎಸ್‌.ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್‌.ಅಶೋಕ್‌, ರಾಜ್ಯ ಸಂಘಟನ ಪ್ರಧಾನ ಕಾರ್ಯದರ್ಶಿ ರಾಜೇಶ್‌, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪ್ರಮುಖರಾದ ಪ್ರಹ್ಲಾದ್‌ ಜೋಷಿ, ಗೋವಿಂದ ಕಾರಜೋಳ, ಡಾ| ಸಿ.ಎನ್‌.ಅಶ್ವತ್ಥನಾರಾಯಣ, ಸಿ.ಟಿ.ರವಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಭಾವ್ಯರ ಹೆಸರುಗಳ ಬಗ್ಗೆ ಚರ್ಚೆ ನಡೆದಿದ್ದು, ಯಾವುದೇ ನಿರ್ಣಯ ಕೈಗೊಂ ಡಿಲ್ಲ. ರಾಜ್ಯದಿಂದ ಸಂಭಾವ್ಯರ ಪಟ್ಟಿಯನ್ನು ದಿಲ್ಲಿಗೆ ಕಳುಹಿಸಿಕೊಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿದೆ.

ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರೊಬ್ಬರ ಪ್ರಕಾರ, 1:5ರ ಪ್ರಕಾರ ಮೊದಲೊಂದು ತಾತ್ಕಾಲಿಕ ಪಟ್ಟಿ ಸಿದ್ಧಪಡಿಸುವುದಕ್ಕೆ ಇಂದಿನ ಸಭೆಯಲ್ಲಿ ನಿರ್ಧರಿಸಲಾಗಿದೆ. ಇನ್ನು ನಾಲ್ಕೈದು ದಿನ ಬಿಟ್ಟು ಮತ್ತೆ ಸಭೆ ಸೇರಿ ಚರ್ಚೆ ನಡೆಸಿ, 12 ಸಂಭಾವ್ಯರ ಹೆಸರನ್ನು ದಿಲ್ಲಿಗೆ ಕಳುಹಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಸಭೆ ಬಂದಿದೆ. ಹೀಗಾಗಿ ಪ್ರಕ್ರಿಯೆ ನಿರ್ಣಾಯಕ ಘಟ್ಟಕ್ಕೆ ಬರಲು ಇನ್ನೂ ಕೆಲವು ದಿನ ಬೇಕು.

ಬಿಜೆಪಿ ಮೂಲಗಳ ಪ್ರಕಾರ ದಿಲ್ಲಿ ವರಿಷ್ಠರು ಲೋಕಸಭಾ ಚುನಾವಣೆಯಲ್ಲಿ ನಿರತರಾಗಿದ್ದಾರೆ. ಮುಂದೆ ಎದುರಾಗುವ ರಾಜಕೀಯ ಬೆಳವಣಿಗೆಗಳ ಬಗ್ಗೆ ವರಿಷ್ಠರು ತಲ್ಲೀನರಾಗಿದ್ದಾರೆ. ಹೀಗಾಗಿ ಕರ್ನಾಟಕದ ಬಗ್ಗೆ ಸುದೀರ್ಘ‌ ಚರ್ಚೆ ನಡೆಸುವ ವ್ಯವಧಾನವಿಲ್ಲ. ಆಕಾಂಕ್ಷಿಗಳ ಪಟ್ಟಿಯಲ್ಲಿರುವವರು ತಮ್ಮ ಪ್ರಭಾವ ಬಳಸಿ ಹೆಸರು ಅಂತಿಮಗೊಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

ಬಿಟ್ಟು ಹೋದವರ ಬಗ್ಗೆ ಆಕ್ಷೇಪ
ಬಿಜೆಪಿಗೆ ಬಂದು ವಿಧಾನ ಪರಿಷತ್‌ ಸ್ಥಾನ ಅನುಭವಿಸಿ ಪಕ್ಷ ಬಿಟ್ಟು ಹೋದವರ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದ್ದು, ಇನ್ನು ಮುಂದೆ ಅಂಥ ತಪ್ಪುಗಳು ಆಗದಂತೆ ನೋಡಿಕೊಳ್ಳಬೇಕು. ಪ್ರಾದೇಶಿಕ ನ್ಯಾಯ, ಜಾತಿ, ನಾಯಕತ್ವದ ಗುಣ, ಪಕ್ಷನಿಷ್ಠೆ, ಸೈದ್ಧಾಂತಿಕ ಬದ್ಧತೆ ಎಲ್ಲವನ್ನೂ ಪರಿಗಣಿಸಿ ಆಯ್ಕೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅದೇ ರೀತಿ ಪಕ್ಷ ಮೈಮರೆತಿದ್ದರಿಂದ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಆದ ಸೋಲಿನ ಬಗ್ಗೆಯೂ ಪ್ರಸ್ತಾವಿಸಲಾಗಿದ್ದು, ಪದವೀಧರ ಕ್ಷೇತ್ರದಲ್ಲಿ ಇಂಥ ಅವಾಂತರ ಆಗದಂತೆ ನೋಡಿಕೊಳ್ಳಿ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ. ಅದೇ ರೀತಿ ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೂ ಸಭೆಯಲ್ಲಿ ಆಗ್ರಹಿಸಲಾಗಿದೆ.

Advertisement

40 ಹೆಸರು
ಸಭೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, 40ಕ್ಕೂ ಹೆಚ್ಚು ಹೆಸರುಗಳು ಚರ್ಚೆ ಆಗಿವೆ. 3 ಸ್ಥಾನಗಳಿಗೆ 40ಕ್ಕೂ ಹೆಚ್ಚು ಹೆಸರು ಪ್ರಸ್ತಾವವಾಗಿದೆ. ಆಕಾಂಕ್ಷಿಗಳನ್ನು ಮಾತ್ರ ನಾವು ಚರ್ಚೆಗೆ ಪರಿಗಣಿಸಿಲ್ಲ. ಆಕಾಂಕ್ಷಿಗಳಲ್ಲದವರ ಹೆಸರೂ ಬಂದಿದೆ ಎಂದರು.

ರಾಜ್ಯದ ವಿವಿಧ ಭಾಗಗಳ ಸುಮಾರು 40ಕ್ಕೂ ಹೆಚ್ಚು ಹೆಸರುಗಳ ಕುರಿತು ಚರ್ಚಿಸಲಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷರು ಮತ್ತು ರಾಜ್ಯ ಸಂಘಟನ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಜಿ.ವಿ. ಅವರಿಗೆ ಕೇಂದ್ರದ ಅಧ್ಯಕ್ಷರು ಮತ್ತು ರಾಷ್ಟ್ರೀಯ ನಾಯಕರ ಜತೆ ಸಮಾಲೋಚಿಸಿ ಅಂತಿಮ ನಿರ್ಣಯ ಮಾಡುವ ಅಧಿಕಾರವನ್ನು ಕೋರ್‌ ಕಮಿಟಿ ನೀಡಿದೆ ಎಂದು ತಿಳಿಸಿದರು.

ಸಭೆಯಲ್ಲಿ ಚರ್ಚೆಯಾದ ವಿಚಾರಗಳು
-ಮೊದಲು ಒಂದು ತಾತ್ಕಾಲಿಕ ಪಟ್ಟಿಸಿದ್ಧಪಡಿಸುವುದಕ್ಕೆ ಸಭೆಯಲ್ಲಿ ನಿರ್ಧಾರ.
– ನಾಲ್ಕೈದು ದಿನ ಬಿಟ್ಟು ಮತ್ತೆ ಸಭೆ ಸೇರಿ ಚರ್ಚೆ.
– ಪ್ರಾದೇಶಿಕ ನ್ಯಾಯ, ಜಾತಿ, ನಾಯಕತ್ವ ಗುಣ, ಪಕ್ಷನಿಷ್ಠೆ, ಸೈದ್ಧಾಂತಿಕ ಬದ್ಧತೆ ಪರಿಗಣಿಸಿ ಆಯ್ಕೆ ಸೂಕ್ತ.
– ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹ.
– ಬಿಜೆಪಿಗೆ ಬಂದು ವಿಧಾನ ಪರಿಷತ್‌ ಸ್ಥಾನ ಅನು ಭವಿಸಿ ಪಕ್ಷ ಬಿಟ್ಟು ಹೋದವರ ಬಗ್ಗೆಯೂ ಚರ್ಚೆ.

Advertisement

Udayavani is now on Telegram. Click here to join our channel and stay updated with the latest news.

Next