Advertisement

ಅಲ್ಪಾವಧಿಯಲ್ಲಿ ಉತ್ಕೃಷ್ಟ ಸಾಧನೆ ಮೆರೆದ ಉಪ್ಪಳಿಗೆ ಸರಕಾರಿ ಪ್ರೌಢಶಾಲೆ

11:59 AM Mar 01, 2018 | |

ನಿಡ್ಪಳ್ಳಿ : ಸತತ ಮೂರು ಬಾರಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ಫ‌ಲಿತಾಂಶ ಪಡೆದ ಉಪ್ಪಳಿಗೆ ಸರಕಾರಿ ಪ್ರೌಢಶಾಲೆ
ಪುತ್ತೂರು ತಾಲೂಕಿನ ಅಗ್ರ ಶಾಲೆಗಳಲ್ಲಿ ಒಂದೆನಿಸಿದೆ.

Advertisement

ಇರ್ದೆ ಗ್ರಾಮದ ಉಪ್ಪಳಿಗೆಯಲ್ಲಿ ಪ್ರೌಢಶಾಲೆ ಆಗಲೇಬೇಕೆಂಬ ಊರವರ ಬೇಡಿಕೆ ಅನುಸಾರ 2008ರಲ್ಲಿ ಈ ಪ್ರೌಢ ಶಾಲೆ ಮಂಜೂರಾಯಿತು. ಕೇವಲ 17 ಮಕ್ಕಳೊಂದಿಗೆ ಆರಂಭಗೊಂಡ ಪ್ರೌಢಶಾಲೆಯಲ್ಲಿ ಸದ್ಯ 107 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕಲಿಕೆಯಲ್ಲಿ ಹಿಂದುಳಿದ ಹಾಗೂ ಗ್ರಾಮೀಣ ವಿದ್ಯಾರ್ಥಿಗಳೇ ಇಲ್ಲಿ ಹಾಜರಾಗುತ್ತಿದ್ದು, ಶಿಕ್ಷಕರ ಶ್ರಮದಿಂದಾಗಿ ಗರಿಷ್ಠ ಫ‌ಲಿತಾಂಶ ಪ್ರಾಪ್ತವಾಗುತ್ತಿದೆ.

ರಾತ್ರಿ ತರಗತಿ
ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶ ಬರುವಂತಾಗಲು ರಾತ್ರಿ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಹಿಂದಿನ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್‌. ಶಶಿಧರ್‌ ಜಾರಿಗೊಳಿಸಿದ ಮಿಷನ್‌ 95+ ಯೋಜನೆ ಫ‌ಲವಾಗಿ ಸತತ ಮೂರು ವರ್ಷಗಳಲ್ಲಿ ಶೇ. 100 ಫ‌ಲಿತಾಂಶ ಬಂತು. ಈ ಸಾಧನೆಯನ್ನು ಸಂಸದರು, ಶಾಸಕರು ಪ್ರಶಂಸಿಸಿದ್ದು, ಜಿ.ಪಂ., ಕನ್ನಡ ಸಾಹಿತ್ಯ ಪರಿಷತ್‌ ಅಭಿನಂದನ ಪತ್ರ ನೀಡಿವೆ. ಮುಖ್ಯ ಗುರು ಕೆ. ನಾರಾಯಣ ಹಾಗೂ ಸಹ ಶಿಕ್ಷಕರು ಶಾಲೆಯ ಎಲ್ಲ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಅಲ್ಲಿ ಅವರಿಗೆ ಓದಲು, ಬರೆಯಲು ಇರುವ ತೊಂದರೆಗಳನ್ನು ಮನಗಂಡು ದಾನಿಗಳ ಮೂಲಕ ಸೋಲಾರ್‌ ದೀಪ, ಮೇಜು, ಕುರ್ಚಿ ಮುಂತಾದವುಗಳನ್ನು ಕೊಡಿಸಿದ್ದಾರೆ.

ಶಾಲೆಗೆ 15 ಲಕ್ಷ ರೂ. ವೆಚ್ಚದಲ್ಲಿ ‘ಉತ್ತುಂಗ’ ಹೆಸರಿನ ಸಭಾಭವನ ನಿರ್ಮಿಸಿದ್ದು, ವಿಶಿಷ್ಟವಾಗಿದೆ. ನೇಸರ ನಾಟಕ ತಂಡ ಸಕ್ರಿಯವಾಗಿದೆ. ಇಕೋ ಕ್ಲಬ್‌ನ ಚಟುವಟಿಕೆ ಪರಿಗಣಿಸಿ, ಕರ್ನಾಟಕ ರಾಜ್ಯ ಮಾಲಿನ್ಯ ಮಂಡಳಿ, ಜಿಲ್ಲಾಡಳಿತ ಮತ್ತು ವಿಜ್ಞಾನ ಪರಿಷತ್‌ನಿಂದ ಪರಿಸರ ಮಿತ್ರ ಜಿಲ್ಲಾ ಹಸಿರು ಶಾಲೆ ಪ್ರಶಸ್ತಿ ಲಭಿಸಿದೆ. ವಿಜ್ಞಾನ ಶಿಕ್ಷಕಿ ಸವಿತಾ ಅವರ ಮುಂದಾಳತ್ವದಲ್ಲಿ ಮಕ್ಕಳ ನಾಟಕ ತಂಡ ವಿಜ್ಞಾನ ಮೇಳದ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ತಾಲೂಕಿನಲ್ಲಿ ಪ್ರಥಮ ಹಾಗೂ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದೆ.

ಹಿಂದಿ ಶಿಕ್ಷಕಿ ಎನ್‌.ವಿ. ಗೀತಾ ಕುಮಾರಿ ಸಂಯೋಜಿಸಿರುವ ‘ನಮನ’ ಗ್ರಾಹಕ ಕ್ಲಬ್‌ ಸತತ ಮೂರನೇ ಬಾರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಗ್ರಾಹಕ ಕ್ಲಬ್‌ ಪ್ರಶಸ್ತಿ ಪಡೆದಿದೆ. ತಾಲೂಕು ಮಟ್ಟದ ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಸತತ ಆರು ಬಾರಿ ಪ್ರಶಸ್ತಿ ಪಡೆದ ಈ ಶಾಲೆಯ ತಂಡ 2017-18ರಲ್ಲಿ ಜಿಲ್ಲಾ ಮಟ್ಟದಲ್ಲಿದ್ವಿತೀಯ ಸ್ಥಾನ ಗಳಿಸಿದ್ದಲ್ಲದೆ, ಮೈಸೂರು ವಿಭಾಗವನ್ನು ಪ್ರತಿನಿಧಿಸುವ ಮೂಲಕ ರಾಜ್ಯ ಮಟ್ಟದಲ್ಲಿಯೂ ಮಿಂಚಿದೆ.

Advertisement

ಚಿನ್ನದ ನಾಣ್ಯ ಉಡುಗೊರೆ
ಮಕ್ಕಳ ಕಲಿಕೆಗೆ ಉತ್ತೇಜನ ನೀಡುವ ಸಲುವಾಗಿ ಎಸೆಸೆಲ್ಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗೆ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೃಷ್ಣಪ್ರಸಾದ್‌ ಆಳ್ವ ಅವರು ಚಿನ್ನದ ನಾಣ್ಯ ನೀಡುವುದಾಗಿ ಘೋಷಿಸಿದ್ದಾರೆ. ಮುಖ್ಯ ಗುರು ನಾರಾಯಣ ಅವರ ಕ್ರಿಯಾಶೀಲತೆ ಗುರುತಿಸಿ ವಿದ್ಯಾಮಾತಾ ಪ್ರತಿಷ್ಠಾನವು ತಾ| ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ, ಸಮ್ಮಾನಿಸಿದೆ.

ಶಿಕ್ಷಕರಿಂದ ಸಾಧನೆ
ಶಿಕ್ಷಕರು ಬಹಳ ಅನ್ಯೋನ್ಯತೆಯಿಂದ, ಮುತುವರ್ಜಿ ವಹಿಸಿ ಕೆಲಸ ಮಾಡಿದರೆ ಅಭಿವೃದ್ಧಿ ಸಾಧಿಸಿ ತೋರಿಸಬಹುದು ಎಂಬುದಕ್ಕೆ ಉಪ್ಪಳಿಗೆ ಪ್ರೌಢಶಾಲೆ ಒಂದು ನಿದರ್ಶನ. ಶಾಲೆಯ ಬಗ್ಗೆ ಮುಖ್ಯಗುರುಗಳಿಗೆ ಇರುವ ಕಾಳಜಿ ಮತ್ತು ಸಹಶಿಕ್ಷಕರು, ಊರ – ಪರವೂರ ವಿದ್ಯಾಭಿಮಾನಿಗಳ ಸಹಕಾರದಿಂದ ಶಾಲೆ ಉನ್ನತ ಮಟ್ಟದ ಹೆಸರು ಪಡೆದಿದೆ. ಇನ್ನಷ್ಟು ಅಭಿವೃದ್ಧಿ ಮಾಡಬೇಕೆಂಬುದು ನಮ್ಮ ಬಯಕೆ.
ಕೃಷ್ಣ ಪ್ರಸಾದ್‌ ಆಳ್ವ
ಉಪಾಧ್ಯಕ್ಷರು, ಶಾಲಾಭಿವೃದ್ದಿ ಸಮಿತಿ,
ಉಪ್ಪಳಿಗೆ ಪ್ರೌಢಶಾಲೆ

ತಾತ್ಸಾರ ಭಾವ ನಿವಾರಣೆ
ಸರಕಾರಿ ಶಾಲೆಯೆಂಬ ತಾತ್ಸಾರ ಭಾವನೆಯನ್ನು ಹೋಗಲಾಡಿಸಲು ಊರವರ ಸಹಕಾರದಿಂದ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸಂಕಲ್ಪ ಮಾಡಿದ್ದೇವೆ. ಸಮುದಾಯದ ಸಹಭಾಗಿತ್ವ ಮುಖ್ಯವಾಗಿದ್ದು, ನನಗೆ ಬೆನ್ನೆಲುಬಾಗಿ ನಿಂತ ವಿದ್ಯಾಭಿಮಾನಿಗಳಿಗೆ, ಶಾಲಾಭಿವೃದ್ಧಿ ಸಮಿತಿಯ ಎಲ್ಲ ಸದಸ್ಯರಿಗೆ, ಹೆತ್ತವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ರ್ವವೂ ಶೇ. 100 ಫ‌ಲಿತಾಂಶದ ನಿರೀಕ್ಷೆಯಲ್ಲಿದ್ದೇವೆ.
ನಾರಾಯಣ. ಕೆ.
   ಮುಖ್ಯ ಗುರುಗಳು, ಉಪ್ಪಳಿಗೆ
  ಪ್ರೌಢಶಾಲೆ

ಗಂಗಾಧರ 

Advertisement

Udayavani is now on Telegram. Click here to join our channel and stay updated with the latest news.

Next