Advertisement

ವಿಶ್ವದ ಅತಿ ದೊಡ್ಡ ಬೀಜ ಸಂಗ್ರಹ ಕೋಠಿ ; ನಾರ್ವೆಯಲ್ಲಿ ಪರ್ವತದಲ್ಲಿ ಬೃಹತ್‌ ಉಗ್ರಾಣ

11:18 AM Feb 27, 2020 | Hari Prasad |

ಓಸ್ಲಾ: ಯುದ್ಧ ಭೀತಿ, ಸುನಾಮಿ, ಭೂಕಂಪ ಮತ್ತಿತರ ದುರಂತಗಳು ಸಂಭವಿಸುವ ಸಾಧ್ಯತೆಯಿದ್ದರೆ ತೈಲ, ಕಲ್ಲಿದ್ದಲು, ಆಹಾರ ಧಾನ್ಯ ಸಂಗ್ರಹಿಸುವುದು ಸಾಮಾನ್ಯವಾಗಿದೆ. ಆದರೆ, ನಾರ್ವೆಯಲ್ಲಿ ಮುಂದಿನ ಪೀಳಿಗೆಗೆ ಕೃಷಿಯಲ್ಲಿ ಜೀವವೈವಿಧ್ಯತೆ ಉಳಿಸಿಕೊಡಲು ಅಸಂಖ್ಯ ಪ್ರಮಾಣದ ಬಿತ್ತನೆ ಬೀಜಗಳ ಸಂಗ್ರಹಕ್ಕಾಗಿ ಬೃಹತ್‌ ಕೋಠಿ (ಉಗ್ರಾಣ) ನಿರ್ಮಿಸಲಾಗುತ್ತಿದೆ.

Advertisement

ವಿಶೇಷ ಎಂದರೆ, ಎಂಥ ಅವಘಡಗಳು ಸಂಭವಿಸಿದರೂ ಯಾವುದೇ ಹಾನಿ ಯಾಗದಂತೆ ವಿಶಿಷ್ಟವಾಗಿ ಭೂಗತವಾಗಿ ಕೋಠಿಯನ್ನು ಸೃಷ್ಟಿಸಲಾಗಿದೆ. ಇದು ವಿಶ್ವದಲ್ಲೇ ಅತಿ ದೊಡ್ಡ ಬೀಜ ಸಂಗ್ರಹ ಕೋಠಿಯಾಗಿದೆ. ಈ ಕೋಠಿಯಲ್ಲಿ 9.30 ಲಕ್ಷ ಬಿತ್ತನೆ ಬೀಜಗಳನ್ನು ಸಂಗ್ರಹಿಸಬಹುದಾಗಿದೆ. ಇದಕ್ಕಾಗಿ ಮಂಗಳವಾರ ವಿವಿಧ ದೇಶಗಳಿಂದ 60 ಸಾವಿರ ಬಿತ್ತನೆ ಬೀಜಗಳ ಮಾದರಿಗಳನ್ನು ಸ್ವೀಕರಿಸಲಾಗಿದೆ.

ಪರ್ವತದಡಿ ಇದೆ ಈ ಉಗ್ರಾಣ: ನಾರ್ವೆಯ ಸ್ವಾಲ್‌ಬರ್ಡ್‌ ನಡುಗಡ್ಡೆ (ದ್ವೀಪರಾಶಿ) ಪರ್ವತದಡಿ ಭೂಗತವಾಗಿ ಈ ಕೋಠಿಯನ್ನು ನಿರ್ಮಿಸಲಾಗಿದೆ. ಇದು ಉತ್ತರ ಧ್ರುವದಿಂದ ಸಾವಿರ ಕಿ.ಮೀ. ದೂರದಲ್ಲಿದೆ.

ಈ ಬೃಹತ್‌ ಉಗ್ರಾಣವನ್ನು ತಲುಪಲು ಸುರಂಗಗಳ ಮೂಲಕ ಹಾದು ಹೋಗಬೇಕಿದೆ. ಈ ಮೂಲಕವೇ ಬಿತ್ತನೆ ಬೀಜಗಳನ್ನು ಸಾಗಿಸಬೇಕಾಗಿದೆ. ಅಲ್ಲಿ ದೊಡ್ಡ ಪ್ರಮಾಣದ ಸುರಕ್ಷಿತ ಬಾಕ್ಸ್‌ಗಳಲ್ಲಿ ಬಿತ್ತನೆ ಬೀಜಗಳನ್ನು ಇಡಲಾಗು ತ್ತಿದೆ. ಈ ಬಾಕ್ಸ್‌ಗಳು ಟೊಮೆಟೋ, ತಂಪು ಪಾನೀಯಗಳನ್ನು ಸಾಗಿಸುವ ಟ್ರೇನಂತೆ ಇವೆ.

ಇದಕ್ಕಾಗಿ ಪ್ರತ್ಯೇಕವಾಗಿ ಬ್ಯಾಚ್‌ಗಳನ್ನು ಮಾಡಲಾಗಿದೆ. ಪ್ರತಿ ಬಾಕ್ಸ್‌ನ ಮೇಲೆ ಬೆಳೆಗಳ ವಿವರ ನಮೂದಿಸಲಾಗಿದೆ. ಜಗತ್ತಿನ ಅಪರೂಪದ ಬೆಳೆ ಧ್ಯಾನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಈ ಕೋಠಿಯನ್ನು ನಾರ್ವೆ ಸರಕಾರ ನಿರ್ಮಿಸಿದ್ದು, ಕೃಷ್ಟಿ ಟ್ರಸ್ಟ್‌ ಎಂಬ ಸಂಸ್ಥೆ ಇದನ್ನು ನಿರ್ವಹಣೆ ಮಾಡುತ್ತಿದೆ.

Advertisement

ಹೇಗಿದೆ ಭೂಗತ ಬೀಜ ಕೋಠಿ?
ನಾರ್ವೆಯ ಸ್ವಾಲ್‌ಬರ್ಡ್‌ ದ್ವೀಪದ ಪರ್ವತದಡಿ ಈ ಬೃಹತ್‌ ಬೀಜ ಕೋಠಿ ಇದೆ. ಪರ್ವತದೊಳಗೆ 150 ಮೀಟರ್‌ ಆಳದಲ್ಲಿ ಮೂರು ದೊಡ್ಡ ಕೊಠಡಿಯುಳ್ಳ ಉಗ್ರಾಣವನ್ನು ನಿರ್ಮಿಸಲಾಗಿದೆ. ಇದಕ್ಕೆ ಸುರಂಗದ ಮೂಲಕ ಸಂಪರ್ಕ ಕಲ್ಪಿಸಲಾಗಿದೆ.

ಮೊದಲು ಉಗ್ರಾಣ ದ್ವಾರ ಇದೆ. ಮುಂದೆ ದಾಟಿ ಹೋದರೆ ಹಾಲ್‌ ಇದೆ. ಇಲ್ಲಿಂದ ಸುರಂಗ ಮಾರ್ಗವಿದ್ದು, ಈ ಮೂಲಕವೇ ಉಗ್ರಾಣದ ಮುಖ್ಯ ಕೊಠಡಿಯನ್ನು ತಲುಪಬೇಕಿದೆ. ಇಲ್ಲಿ ಭಾರೀ ಉದ್ದವಾದ ಸೆಲ್ಫ್ಗಳನ್ನು ನಿರ್ಮಿಸಿದ್ದು, ಈ ಜಾಗದಲ್ಲಿ ಸುರಕ್ಷಿತ ಬಾಕ್ಸ್‌ಗಳಲ್ಲಿ ಬೀಜಗಳನ್ನು ತುಂಬಿ ಇಡಲಾಗಿದೆ.

ತಾಪಮಾನ ಬದಲಾವಣೆ, ಜೀವವೈವಿಧ್ಯದ ಅವನತಿ, ಯುದ್ಧ, ಅನಾವೃಷ್ಟಿ, ಅತಿವೃಷ್ಟಿ, ಮಾನವ ನಿರ್ಮಿತ ದುರಂತಗಳು ಸಂಭವಿಸಿದರೆ ವಿಶ್ವದಲ್ಲಿ ಆಹಾರ ಕೊರತೆ ಸೃಷ್ಟಿಯಾಗಿ ಸಾವು ನೋವುಗಳು ಸಂಭವಿಸುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಪೀಳಿಗೆಗೆ ಆಹಾರ ಒದಗಿಸುವ ಉದ್ದೇಶದಿಂದ ದೂರದೃಷ್ಟಿಯ ಬೃಹತ್‌ ಧಾನ್ಯಗಳ ಉಗ್ರಾಣ ನಿರ್ಮಿಸಲಾಗಿದೆ.
– ಸ್ಟೀಫ‌ನ್‌ ಸ್ಚಾಮಿಟ್ಜ್, ಕೃಷಿ ಟ್ರಸ್ಟ್‌ನ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next