Advertisement

ಸಮುದಾಯ ಆರೋಗ್ಯ ಕೇಂದ್ರವಾಗಿ ಪಾಣಾಜೆ ಕೇಂದ್ರ ಮೇಲ್ದರ್ಜೆಗೆ

03:21 PM Mar 17, 2023 | Team Udayavani |
ಪುತ್ತೂರು: ಕೇರಳ-ಕರ್ನಾಟಕ ಗಡಿಭಾಗದಲ್ಲಿರುವ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದೆ. ರೋಗಿಗಳ ತಪಾಸಣೆ, ನಿಗದಿತ ಚಿಕಿತ್ಸೆಗಷ್ಟೇ ಸೀಮಿತವಾಗಿದ್ದ ಪಾಣಾಜೆ ಆರೋಗ್ಯ ಕೇಂದ್ರ ಭವಿಷ್ಯದಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಿ ಒಳ ಮತ್ತು ಹೊರರೋಗಿ ವಿಭಾಗದಲ್ಲಿ ದಿನದ 24 ತಾಸು ಚಿಕಿತ್ಸೆ ಸೌಲಭ್ಯ ಹೊಂದಲಿದೆ. 28 ಸಾವಿರ ಜನಸಂಖ್ಯೆ ವ್ಯಾಪ್ತಿ ಪಾಣಾಜೆ, ನಿಡ್ಪಳ್ಳಿ, ಬೆಟ್ಟಂಪಾಡಿ, ಇರ್ದೆ, ಬಲ್ನಾಡು, ಸಾಜ, ಕೊಡಿಪ್ಪಾಡಿ, ಕಬಕ ಉಪಕೇಂದ್ರಗಳು ಪಾಣಾಜೆ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಸೇರಿದೆ.
ಪ್ರಸ್ತುತ ಆರೋಗ್ಯ ಕೇಂದ್ರದಲ್ಲಿ ಓರ್ವ ವೈದ್ಯರಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರವಾಗಿ ಪರಿವರ್ತನೆ ಆದ ಬಳಿಕ ಬೇರೆ ಬೇರೆ ವಿಭಾಗದಲ್ಲಿ ವೈದ್ಯರು ಲಭ್ಯವಾಗಲಿದ್ದಾರೆ. ಒಟ್ಟು 28 ಸಾವಿರ ಜನಸಂಖ್ಯೆಯ ವ್ಯಾಪ್ತಿ ಇರುವ ಪಾಣಾಜೆ ಆರೋಗ್ಯ ಕೇಂದ್ರದಲ್ಲಿ 30 ಬೆಡ್‌ಗಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸದ್ಯದಲ್ಲೇ ಕಾಮಗಾರಿ ನಡೆಯಲಿದೆ. ಅನುದಾನ ಮಂಜೂರು ಪಾಣಾಜೆ ಆರೋಗ್ಯ ಕೇಂದ್ರವು 5 ಎಕ್ರೆ ಜಾಗ ಹೊಂದಿದೆ.
ಸಮುದಾಯ ಆರೋಗ್ಯ ಕೇಂದ್ರದ ಮೂಲ ಸೌಕರ್ಯ ಜೋಡಣೆಗೆ 12.40 ಕೋಟಿ ರೂ. ಅನುದಾನ ಮಂಜೂರಾಗಿದೆ. ಹೊಸ ಕಟ್ಟಡ ನಿರ್ಮಿಸಿ, ಈಗ ಇರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಅದೇ ರೀತಿ ಉಳಿಸಲಾಗುತ್ತದೆ. ನೆಲ ಅಂತಸ್ತು ಹಾಗೂ ಮೊದಲ ಅಂತಸ್ತಿನ ಹೊಸ ಕಟ್ಟಡ ನಿರ್ಮಾಣ, ಕೋಲ್ಡ್‌ ಸ್ಟೋರೇಜ್‌ ಮೋರ್ಚರಿ (ಶೀತಲೀಕರಣ ಶವಾಗಾರ), ಮೆಡಿಕಲ್‌ ಎಕ್ವಿಪ್‌ಮೆಂಟ್ಸ್‌ (ವೈದ್ಯಕೀಯ ಸಲಕರಣೆಗಳು), ಫರ್ನಿಚರ್ಸ್‌, ಮಾಡ್ನೂಲರ್‌ ಓಟಿ (ಆಧುನಿಕ ಶಸ್ತ್ರಚಿಕಿತ್ಸಾ ಕೊಠಡಿ) ಮೊದಲಾದ ಆಧುನಿಕ ವ್ಯವಸ್ಥೆಗಳು ಇರಲಿವೆ.
ಈ ಕಟ್ಟಡದ ಸುತ್ತ ರಸ್ತೆ, ಸಿಸಿ ಕೆಮರಾ, ಫೈರ್‌ ಫೈಟಿಂಗ್‌ ವರ್ಕ್ಸ್, ಮೆಡಿಕಲ್‌ ಆಕ್ಸಿಜನ್‌ ಲೈನ್‌ ಮೊದಲಾದ ವ್ಯವಸ್ಥೆಗಳು ಲಭ್ಯವಾಗಲಿದೆ. ಮಾಡ್ನೂಲರ್‌ ಓಟಿ ಪುತ್ತೂರು ತಾಲೂಕಿಗೇ (ಸರಕಾರಿ ಆಸ್ಪತ್ರೆಗಳಲ್ಲಿ) ಪ್ರಥಮ ಬಾರಿಗೆ ಮಾಡ್ನೂಲರ್‌ ಓಟಿಯನ್ನು ಇಲ್ಲಿ ಅನುಷ್ಠಾನಿಸಲಾಗುತ್ತದೆ. ಆಪರೇಶನ್‌ ಥಿಯೇಟರ್‌ ಅನ್ನು ಆಧುನಿಕಗೊಳಿಸಿರುವುದೇ ಇಲ್ಲಿನ ಪ್ರಮುಖ ಸಂಗತಿ. ಮಾಡ್ನೂಲರ್‌ ಓಟಿಯಲ್ಲಿ ಶಸ್ತ್ರಚಿಕಿತ್ಸೆಗೆ ಬಳಸಲಾಗುವ ಯಂತ್ರಗಳು ಆಧುನಿಕಗೊಂಡಿದ್ದು, ರೋಗಿಗಳಿಗೆ ಸುಲಭವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅನುಕೂಲಕರವಾಗಲಿದೆ ಎಂದು ಆರೋಗ್ಯ ಕೇಂದ್ರದ ವೈದ್ಯರು ಮಾಹಿತಿ ನೀಡಿದ್ದಾರೆ.
24 ತಾಸು ಕಾರ್ಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರನ್ನು ಹೊರತುಪಡಿಸಿ 25 ಹುದ್ದೆಗಳು ಮಂಜೂರಾಗಲಿದೆ. ಪ್ರಸೂತಿ, ಮಕ್ಕಳ ತಜ್ಞರು, ಅರಿವಳಿಕೆ, ಆಡಳಿತ ವೈದ್ಯಾಧಿಕಾರಿ, ದಂತ ವೈದ್ಯರು ಹಾಗೂ ಆಯುಷ್‌ ಅಧಿಕಾರಿ ಕರ್ತವ್ಯ ನಿರ್ವಹಿಸಲಿದ್ದಾರೆ. 12 ಡಿ ಗ್ರೂಪ್‌ ನೌಕರರು, ಲ್ಯಾಬ್‌ ಟೆಕ್ನಿಷಿಯನ್‌, 6 ಸ್ಟಾಫ್‌ ನರ್ಸ್‌, 2 ಔಷಧ ವಿತರಕರು ಇರಲಿದ್ದಾರೆ. ದಿನದ 24 ತಾಸು ಕೂಡ ಆಸ್ಪತ್ರೆ ಕಾರ್ಯ ನಿರ್ವಹಿಸಲಿದೆ. ಎಂಡೋಸಲ್ಫಾನ್‌ ಕೇಂದ್ರ ನಿರ್ಮಾಣಕ್ಕೂ ಯೋಜನೆ ಸಿದ್ಧವಾಗಿದ್ದು,  ಫಿಸಿಯೋಥೆರಪಿಗೆ ಸಮುದಾಯ ಆರೋಗ್ಯ ಕೇಂದ್ರ ಪೂರಕವಾಗಿದೆ.
ದ.ಕ. ಜಿಲ್ಲೆಯಲ್ಲಿ ಮೂರು ಕೇಂದ್ರ ಮೇಲ್ದರ್ಜೆಗೇರಿಸಲಾಗಿದೆ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದೆ. ದಿನದ 24 ಗಂಟೆಯೂ ಜನರ ಸೇವೆಗೆ ಲಭ್ಯವಾಗಲಿದೆ. ಈಗಾಗಲೇ 12.4 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಕೆ.ಎಚ್‌.ಎಸ್‌.ಆರ್‌.ಡಿ. ಕಾಮಗಾರಿ ಅನುಷ್ಠಾನ ಮಾಡಲಿದೆ.
-ಸಂಜೀವ ಮಠಂದೂರು, ಶಾಸಕರು, ಪುತ್ತೂರು
ಅನುಕೂಲಕರ ಕೇರಳದಿಂದ ಕರ್ನಾಟಕಕ್ಕೆ ಪ್ರವೇಶಿಸುವ ಗಡಿಭಾಗ ಇದಾಗಿದ್ದು ಈನಿಟ್ಟಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಅನುಕೂಲಕರವಾಗಲಿದೆ. ಜನರಿಗೆ ಯಾವುದೇ ಸಂದರ್ಭದಲ್ಲಾದರೂ ಚಿಕಿತ್ಸೆ ಪಡೆದುಕೊಳ್ಳಬಹುದು.
-ಡಾ| ದೀಪಕ್‌ ರೈ, ತಾಲೂಕು ಆರೋಗ್ಯಾಧಿಕಾರಿ, ಪುತ್ತೂರು
~ಕಿರಣ್‌ ಪ್ರಸಾದ್‌ ಕುಂಡಡ್ಕ
Advertisement

Udayavani is now on Telegram. Click here to join our channel and stay updated with the latest news.

Next