Advertisement

UI Movie Review: ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!

10:01 AM Dec 21, 2024 | Team Udayavani |

ಹೊಸದೇನೋ ಹೇಳಬೇಕು, ಅದನ್ನು ಬೇರೆ ತರಹ ಹೇಳಬೇಕು ಮತ್ತು ಅದು ಪ್ರೇಕ್ಷಕರಿಗೆ ನೇರಾನೇರ ಅರ್ಥವಾಗಬಾರದು, ಒಂದು ವೇಳೆ ಅರ್ಥವಾದರೂ ಸಣ್ಣ ಹುಳವೊಂದು ಮೆದುಳಿನುದ್ದಕ್ಕೂ ಸಂಚರಿಸುತ್ತಲೇ ಇರಬೇಕು… – ಉಪೇಂದ್ರ ಅವರು ತಮ್ಮ ನಿರ್ದೇಶನದ ಚಿತ್ರದ ಸ್ಕ್ರಿಪ್ಟ್ಗೆ ಓಂಕಾರ ಬರೆಯುವಾಗ ಮೊದಲು ಗಮನಿಸುವ ಹಾಗೂ ಪಾಲಿಸುವ ಅಂಶವಿದು. ಅದನ್ನು ಈ ಹಿಂದಿನ ಚಿತ್ರಗಳಲ್ಲಿ ಸಾಬೀತು ಮಾಡಿದ್ದ ಉಪ್ಪಿ “ಯು-ಐ’ನಲ್ಲೂ ತಮ್ಮ ಆ ಬ್ರಾಂಡ್‌ ಅನ್ನು ಮುಂದುವರೆಸಿದ್ದಾರೆ. ಇಲ್ಲಿ ಕಥೆ ಇದೆ. ಅದು ಹಲವು ಬಗೆಯಲ್ಲಿ, ಹಲವು ರೂಪಕಗಳಾಗಿ ಗೋಚರಿಸುತ್ತದೆ.

Advertisement

ಜನರನ್ನು ಎಚ್ಚರಿಸುವ, ಚಿಂತಿಸುವ, ಕಾಡುವಂತೆ ಮಾಡುವ ಉದ್ದೇಶ ಉಪ್ಪಿ ಅವರದ್ದು. ಅದಕ್ಕೆ ಅವರು ಇಲ್ಲಿ ನಾನಾ ಮಾರ್ಗಗಳನ್ನು ಹುಡುಕಿದ್ದಾರೆ, ಹಲವು ಅಂಶಗಳನ್ನು ತಂದಿದ್ದಾರೆ. ಹಾಗೆ ನೋಡಿದರೆ ಈ ಚಿತ್ರದಲ್ಲಿ ತುಂಬಾ ಹುಳ ಬಿಟ್ಟುಕೊಳ್ಳುವಂತೆ ಉಪ್ಪಿ ಮಾಡಿಲ್ಲ. ಆದರೆ, ತಮ್ಮ ಮೂಲ ಬ್ರಾಂಡ್‌ ಆದ ಒಂದಷ್ಟು ಸ್ಲೋಗನ್‌ಗಳನ್ನು ಇಲ್ಲೂ ಅವರು ಬಿಟ್ಟಿಲ್ಲ. “ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ಹೋಗಿ’, “ನೀವು ದಡ್ಡರಾಗಿದ್ದರೆ ಪೂರ್ತಿ ಸಿನಿಮಾ ನೋಡಿ..’, “ಇವ್ನು ಓಡೋ ಸ್ಪೀಡ್‌ ನೋಡಿದ್ರೆ ಮುಂದೆ ಒಸಮಾ ಬಿನ್‌ ಲಾಡೆನ್‌, ದಾವೂದ್‌ ಇಬ್ರಾಹಿಂ ಆಗ್ತಾನೆ…’, “ಕಾಮದಿಂದಲೇ ಮಕ್ಕಳನ್ನು ಹುಟ್ಟಿಸಿ, ಈಗ ಮಗನಿಗೆ ಕಾಮ ಕೆಟ್ಟದು ಅಂತೀಯಾ..’ ಇಂತಹ ಡೈಲಾಗ್‌, ಸ್ಲೋಗನ್‌ಗಳು ಇದು ಉಪ್ಪಿ ನಿರ್ದೇಶನದ ಸಿನಿಮಾ ಎನ್ನುವುದನ್ನು ಪದೇ ಪದೇ ನೆನಪಿಸುತ್ತವೆ.

ಎರಡು ಪಾತ್ರಗಳು ಇಡೀ ಸಿನಿಮಾದ ಕಥೆಯನ್ನು ಮುಂದುವರೆಸಿಕೊಂಡು ಹೋಗುತ್ತದೆ. ಈ ಎರಡೂ ಪಾತ್ರಗಳ ಚಿಂತನೆ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳ ಕೈಗನ್ನಡಿ. ನೀವು ಅದನ್ನು ಧರ್ಮ-ಅಧರ್ಮ ಎನ್ನಬಹುದು. ಇಲ್ಲಿ ಉಪೇಂದ್ರ ಜಾತಿ, ಧರ್ಮ, ಸಂಘರ್ಷ, ಆಧುನೀಕತೆ, ಪ್ರಕೃತಿ, ಬುದ್ಧ, ಬಸವ ತತ್ವ, ಕಲ್ಕಿ, ಸತ್ಯಯುಗ, ಅಸಮಾನತೆ, ಸೋಶಿಯಲ್‌ ಮೀಡಿಯಾ… ಹೀಗೆ ಅನೇಕ ಅಂಶಗಳನ್ನು ತಮ್ಮ ಅಸ್ತ್ರವಾಗಿ ಬಳಸುತ್ತಾ ಆ ಮೂಲಕ ಹೊಸದೇನನ್ನೋ ಪ್ರೇಕ್ಷಕನ ಮಡಿಲಿಗೆ ಹಾಕುವ ಪ್ರಯತ್ನ ಮಾಡಿದ್ದಾರೆ.

ಈ ಬಾರಿ “ಯು-ಐ’ನಲ್ಲಿ ಉಪೇಂದ್ರ ರೆಗ್ಯುಲರ್‌ ಕಮರ್ಷಿಯಲ್‌ ಸಿನಿಮಾಗಳಾಚೆಗೆ ಪ್ರೇಕ್ಷಕರಿಗೆ ಮನರಂಜನೆ ನೀಡಬೇಕು ಎಂಬ ನಿರ್ಧಾರಕ್ಕೆ ಬಂದಂತಿದೆ. ಹಾಗಾಗಿ, “ಕಮರ್ಷಿಯಲ್‌ ಮನರಂಜನೆ’ಗಿಂತ ಬೋಧನೆ, ಆಳ-ಅರಿವು, “ಫೋಕಸ್‌’ ಮೂಲಕ ಪ್ರೇಕ್ಷನನಿಗೆ ಖುಷಿ ನೀಡಲು ಪ್ರಯತ್ನಿಸಿದ್ದಾರೆ. ಜೊತೆಗೆ ಅವರ ಪ್ರಜಾಕೀಯದ ಕೆಲವು ಚಿಂತನೆಗಳು ಕೂಡಾ ದೃಶ್ಯರೂಪ ಪಡೆದಿವೆ. ಈ ಬಾರಿ ಉಪೇಂದ್ರ ತಮ್ಮ ಕಲ್ಪನೆಯ “ಯು-ಐ’ ಜಗತ್ತನ್ನು ಸೃಷ್ಟಿಸಲು ಗ್ರಾಫಿಕ್ಸ್‌ ಮೊರೆ ಜಾಸ್ತಿಯೇ ಹೋಗಿದ್ದಾರೆ. ಹಾಗಾಗಿ, ಇಲ್ಲಿ ನಾವು-ನೀವು ನೋಡದ ಒಂದು ಕಲ್ಪನಾ ಜಗತ್ತು ತೆರೆದುಕೊಳ್ಳುತ್ತದೆ.

ಇನ್ನು, ಉಪ್ಪಿ ಇಲ್ಲಿಗೆ ಮೌನಕ್ಕೆ ಜಾಗವೇ ಕೊಟ್ಟಿಲ್ಲ. ಹಲವು ವಿಚಾರಗಳನ್ನು ಸೂಚ್ಯವಾಗಿ ಹೇಳುತ್ತಲೇ ಸಿನಿಮಾ “ಸದ್ದು’ ಮಾಡುತ್ತದೆ. ಇಡೀ ಸಿನಿಮಾವನ್ನು ಆವರಿಸಿಕೊಂಡಿರುವುದು ಉಪೇಂದ್ರ. ಚಿತ್ರದಲ್ಲಿ ಎರಡು ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಒಂದು ಸಾಫ್ಟ್, ಇನ್ನೊಂದು ರಗಡ್‌. ಈ ಎರಡೂ ಪಾತ್ರಗಳಿಗೆ ತಕ್ಕಂತೆ ಉಪೇಂದ್ರ ಅವರ ಮ್ಯಾನರೀಸಂ, ಡೈಲಾಗ್‌ ಶೈಲಿ ಬದಲಾಗಿದೆ.

Advertisement

ಇದರ ಜೊತೆಗೆ ಕೊನೆಯಲ್ಲಿ ಮತ್ತೂಂದು ಪಾತ್ರದ ಮೂಲಕ ದರ್ಶನ ನೀಡುತ್ತಾರೆ. ಮೊದಲೇ ಹೇಳಿದಂತೆ ಇಡೀ ಸಿನಿಮಾದಲ್ಲಿ ಉಪ್ಪಿಯೇ ಹೈಲೈಟ್‌. ಹಾಗಾಗಿ, ರವಿಶಂಕರ್‌, ಸಾಧುಕೋಕಿಲ ರೀಷ್ಮಾ, ಗುರುಪ್ರಸಾದ್‌ ಪಾತ್ರಗಳು ಆಗಾಗ ಬಂದು ಹೋಗುತ್ತವೆಯಷ್ಟೇ. ಚಿತ್ರ ತಾಂತ್ರಿಕವಾಗಿಯೂ ಶ್ರೀಮಂತವಾಗಿದೆ. ಅಂದಹಾಗೆ, ಚಿತ್ರದಲ್ಲೊಂದು ಡೈಲಾಗ್‌ ಇದೆ: “ಫೋಕಸ್‌ ಸಿಗೋವರೆಗೆ ಸಿನ್ಮಾ ನೋಡ್ತಾನೆ ಇರಿ.’ ಸಿನಿಮಾ ಅರ್ಥವಾಗದವರಿಗೆ ಇದು ಅನ್ವಯಿಸುತ್ತದೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next