Advertisement
“ಯು-ಐ’ ಚಿಹ್ನೆಯನ್ನಿಟ್ಟುಕೊಂಡು ಉಪ್ಪಿ ಏಳು ವರ್ಷಗಳ ಬಳಿಕ ನಿರ್ದೇಶನ ಮಾಡುತ್ತಿರುವ ಚಿತ್ರದ ಮುಹೂರ್ತ ಶುಕ್ರವಾರ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಿತು. ಉಪ್ಪಿ ಸಿನಿಮಾಕ್ಕೆ ಹಾರೈಸಲು ಶಿವರಾಜ್‌ಕುಮಾರ್, ಸುದೀಪ್, ವಿಜಯ್, ಡಾಲಿ ಧನಂಜಯ್ ಸೇರಿದಂತೆ ಚಿತ್ರರಂಗದ ಅನೇಕರು ಆಗಮಿಸಿದ್ದರಿಂದ ದೇವಸ್ಥಾನದ ಮುಂದೆ ಜಾತ್ರೆ ಸಂಭ್ರಮವೇ ಮರುಕಳಿಸಿದಂತಿತ್ತು.
Related Articles
Advertisement
ಉಪೇಂದ್ರ ಅವರ ನಿರ್ದೇಶನದಲ್ಲಿ ಮೂಡಿಬರುವ ವಿಭಿನ್ನ ಕಾನ್ಸೆಪ್ಟ್ಗಳನ್ನು ನೋಡಿದವರು, “ನಿಮ್ಮ ತಲೆ ಸ್ಪೆಷಲ್ ಆಗಿ ಓಡುತ್ತದೆ, ಹೇಗೆ’ ಎಂದು ಹೊಗಳುತ್ತಾರಂತೆ. ಇದಕ್ಕೆ ಉಪ್ಪಿ ಹೇಳುವುದು ಹೀಗೆ, ” ದೇವರಾಣೆ ಏನೂ ಓಡುವುದಿಲ್ಲ. ನಾನು ತಲೆಯನ್ನು ಖಾಲಿ ಇಟ್ಟುಕೊಳ್ಳುತ್ತೀನಿ. ಖಾಲಿ ಇಟ್ಟುಕೊಂಡರೆ ಏನೇನೋ ಐಡಿಯಾಗಳು ಬರುತ್ತವೆ. ಆದರೆ ನಾವು ನಾವು ಖಾಲಿ ಇಟ್ಟುಕೊಳ್ಳುವುದಿಲ್ಲ. ಏನೇನೋ ವಿಷಯಗಳನ್ನು ತುಂಬುಕೊಳ್ಳುವ ಪ್ರಯತ್ನ ಮಾಡುತ್ತಲೇ ಇರುತ್ತೇವೆ’ ಎನ್ನುವುದು ಉಪ್ಪಿ ಮಾತು.
ಇದನ್ನೂ ಓದಿ:ಇಂದು ಫ್ರೆಂಚ್ ಓಪನ್ ವನಿತಾ ಫೈನಲ್: ಪ್ರಶಸ್ತಿ ರೇಸ್‌ನಲ್ಲಿ ಸ್ವಿಯಾಟೆಕ್-ಗಾಫ್
ನಟರಾಗಿ ತುಂಬಾ ಜಾಲಿಯಾಗಿ, ನಿರ್ದೇಶಕರ ಕನಸಿಗೆ ಜೀವ ತುಂಬುವ ಸ್ಟಾರ್ ಆಗಿರುವ ಉಪೇಂದ್ರ, ನಿರ್ದೇಶಕರಾಗಿ ಹೇಗೆ ಎಂಬ ಕುತೂಹಲ ಸಹಜ. ಇದಕ್ಕೆ ಉಪ್ಪಿ ನೇರವಾಗಿ ಉತ್ತರಿಸಿದ್ದಾರೆ. “ಇಡೀ ಚಿತ್ರ ನಿರ್ದೇಶಕರ ಸ್ಟೈಲ್‌ನಲ್ಲಿರುತ್ತದೆ. ನಾನು ನಿರ್ದೇಶಕನಾಗಿದ್ದಾಗ ಬಹಳ ಸ್ಟ್ರಾಂಗ್ ಆಗಿ ಇರುತ್ತೇನೆ. ತುಂಬಾ ಕಮಾಂಡಿಂಗ್ ಆಗಿ ಇರುತ್ತೇನೆ. ಟ್ರೂಥ್‌ಫುಲ್ ಆಗಿರುತ್ತೇನೆ. ಕಲಾವಿದನಾಗಿದ್ದಾಗ ಬೇರೆ. ನನಗೆ ಬಂದು ಕಥೆ ಹೇಳುತ್ತಾರೆ, ನಾನು ಅವರನ್ನು ನಂಬುತ್ತೇನೆ. ಹೇಳಿದಂತೆ ಮಾಡಲಿಲ್ಲ ಅಂದಾಗಲೂ ಬೇಸರ ನುಂಗಿಕೊಂಡು ಸುಮ್ಮನಿರುತ್ತೇನೆ. ಒಬ್ಬ ನಿರ್ದೇಶಕನಾಗಿದ್ದಾಗ, ನಾನು ಏನು ಅಂದು ಕೊಂಡಿದ್ದೇನೋ ಅದನ್ನೇ ಮಾಡುತ್ತೇನೆ. ಅದಕ್ಕೇ ಜನ ನನ್ನ ಬಗ್ಗೆ ಅಷ್ಟು ನಂಬಿಕೆ ಇಟ್ಟಿರುತ್ತಾರೆ. ನಾನು ಅದನ್ನು ಕಳೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಹೀಗಿದ್ದರೆ ಸಿನಿಮಾ ಮಾಡೋಣ. ಇಲ್ಲವಾದರೆ ಬೇಡ ಎಂದು ಮೊದಲೇ ಹೇಳಿಬಿಡುತ್ತೇನೆ. ಆಗ ಎಲ್ಲರಿಗೂ ಒಳ್ಳೆಯದು. ಪ್ರಾಮಾಣಿಕವಾಗಿರುವುದಕ್ಕಿಂತ ಇನ್ನೊಂದು ಯಶಸ್ಸು ಇಲ್ಲ’ ಎನ್ನುವುದು ಉಪ್ಪಿ ನುಡಿ.
ಅಂದಹಾಗೆ, ಉಪೇಂದ್ರ ಈ ಕಥೆಯನ್ನು 15-20 ವರ್ಷಗಳ ಹಿಂದೆಯೇ ಮಾಡಿಟ್ಟುಕೊಂಡಿದ್ದರಂತೆ. ಈ ಬಗ್ಗೆ ಮಾತನಾಡುವ ಅವರು, “ಈ ಕಥೆ ನಾನು ಮಾಡಿದ್ದು 15-20 ವರ್ಷಗಳ ಹಿಂದೆ. ಒಂದು ಲೈನ್ ಇಟ್ಟುಕೊಂಡಿದ್ದೆ. ಕೆಲವೊಮ್ಮೆ ಎಷ್ಟು ಅಂದುಕೊಂಡರೂ ಆಗುವುದಿಲ್ಲ. ಕೆಲವೊಮ್ಮೆ ಬೇಡ ಎಂದರೂ ಆಗಿಬಿಡುತ್ತದೆ. ಈ ಕಥೆ ನಾನು ಎಷ್ಟು ಜನರಿಗೆ ಹೇಳಿದ್ದೇನೆ ಎಂದರೆ, ಇದು ನಂದು ಅಂತ ಯಾರು ಬರುತ್ತಾರೋ ಗೊತ್ತಿಲ್ಲ. ಆದರೆ, ಅವರಿಗೆ ಗೊತ್ತಿಲ್ಲ, ನಿನ್ನೆ ಹೇಳಿರುವುದು, ನಾಳೆ ಬದಲಾಗುತ್ತದೆ ಎಂದು’ ಎನ್ನುವುದು ಉಪೇಂದ್ರ ಮಾತು.
ಉಪೇಂದ್ರ ನಿರ್ದೇಶನದ ಚಿತ್ರವನ್ನು ಲಹರಿ ಸಂಸ್ಥೆಯ ಮನೋಹರನ್ ಹಾಗೂ ಕೆ.ಪಿ. ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ.