Advertisement

“ನಾನೂ ಸಿಂಪಲ್‌,ನನ್ನ ಸಿದ್ಧಾಂತವೂ ಸಿಂಪಲ್‌’

10:11 AM Dec 07, 2017 | |

ಉಡುಪಿ: “ನಾನು ಸರಳ, ನನ್ನ ಹೊಸ ಪಕ್ಷ ಪ್ರಜಾಕೀಯದ ಸಿದ್ಧಾಂತಗಳೂ ಸರಳ. ಅದನ್ನು ಜನರಿಗೆ ಅರ್ಥಮಾಡಿಸಿಕೊಡುವುದು ಕಷ್ಟವೂ ಅಲ್ಲ’ ಹೀಗಂದಿದ್ದು ರಿಯಲ್‌ ಸ್ಟಾರ್‌ ಉಪೇಂದ್ರ. 

Advertisement

ಡಿ.6ರಂದು ಉಡುಪಿಗೆ ಭೇಟಿ ನೀಡಿದ್ದ ಉಪೇಂದ್ರ ಬ್ರಹ್ಮಗಿರಿಯ ಪತ್ರಿಕಾಭವನದಲ್ಲಿ  ಪತ್ರಕರ್ತರೊಂದಿಗೆ ಸಂವಾದ ನಡೆಸಿದರು. ಸಾಮಾನ್ಯವಾಗಿ ಚಿತ್ರದ ಶೂಟಿಂಗ್‌ನಲ್ಲಿ ಆ್ಯಕ್ಷನ್‌ ಕಟ್‌ ಹೇಳುವ ಅವರು ತಮ್ಮ ರಾಜಕೀಯ ಆಕಾಂಕ್ಷೆಗಳನ್ನು ಬಿಚ್ಚಿಟ್ಟರು. ನೂತನ ಪಕ್ಷ ಪ್ರಜಾಕೀಯದ ಬಗ್ಗೆ ಹಲವು ವಿಚಾರಗಳನ್ನು ಹೇಳುತ್ತಲೇ ಹೋದರು. ಮೂರು ಗಂಟೆಗಳ ಅವರ ಈ ಮಾತುಗಳಲ್ಲಿ ಈಗಿನ ರಾಜಕೀಯ, ಆಡಳಿತ ವ್ಯವಸ್ಥೆಯ ಕಡೆಗೊಂದು ಅಸಮಾಧಾನ ಕಾಣಿಸುತ್ತಿತ್ತು. 

ಹೆಸರು,ದುಡ್ಡು ಮಾಡುವ ಉದ್ದೇಶವಿಲ್ಲ
ದುಡ್ಡು, ಹೆಸರು ಮಾಡುವ ಉದ್ದೇಶ ನನ್ನದಲ್ಲ. ರಾಜಕೀಯ ವ್ಯವಸ್ಥೆ ಬದಲಾಗಬೇಕು. ರಾಜಕೀಯ ಹಣ ಹಾಕಿ ಹಣ ತೆಗೆವ ಪಕ್ಕಾ ವ್ಯವಹಾರದ ಕ್ಷೇತ್ರವಾಗಿದೆ. ಇದೇ ಭ್ರಷ್ಟಾಚಾರಕ್ಕೆ ಮೂಲ ಕಾರಣವಾಗಿದ್ದು, ಇದನ್ನು ಬದಲಾಯಿಸಬೇಕು. ಪ್ರಜಾಕೀಯದಲ್ಲಿ ಎಲ್ಲರೂ ಪ್ರಜೆಗಳೇ. ರಾಜರು ಯಾರೂ ಇಲ್ಲ. ಈ ರಾಜ್ಯ, ದೇಶದ ಒಳಿತಿಗಾಗಿ ಏನು ಮಾಡಬಹುದು ಎಂಬುದನ್ನು ಯೋಚಿಸಿ ಅದನ್ನು ಕಾರ್ಯಗತಗೊಳಿಸಲು ನನ್ನೊಂದಿಗೆ ಬರಬಹುದು ಎಂದು ಜನರಿಗೆ ಮುಕ್ತ ಆಹ್ವಾನವನ್ನೂ ನೀಡಿದರು.  

ಸರಳತೆ, ಆಪ್ತ ಮಾತು
ನಸುಗೆಂಪು  ಬಣ್ಣದ ಚೌಕುಳಿ ಶರ್ಟ್‌ ಮತ್ತು ಜೀನ್ಸ್‌, ಕಾಲಿಗೆ ಸಾಮಾನ್ಯ ಚಪ್ಪಲಿ ಧರಿಸಿದ್ದ ಉಪೇಂದ್ರ ಅತ್ಯಂತ ಸರಳವಾಗಿದ್ದು, ಎಲ್ಲರೊಂದಿಗೂ ಮುಕ್ತವಾಗಿ ಮಾತನಾಡಿದರು. ಸಣ್ಣಪುಟ್ಟ ವಿಚಾರಗಳಿಂದ ಹಿಡಿದು ಗಂಭೀರ ವಿಚಾರಗಳ ಕುರಿತು ಕೂಡ ಮಾತನಾಡುತ್ತಾ ಹೋದರು. ತಮ್ಮ ರಿಯಲ್‌ ಲೈಫ್ನ ಮಗ್ಗುಲನ್ನು 

ತೋರಿದ ಈ ನಟ, ಸೆಲ್ಫಿ ತೆಗೆಯಲು ನಿಂತವರೊಂದಿಗೆ ನಗುನಗುತ್ತಲೇ ಪೋಸು ಕೊಟ್ಟರು. ಮಾಧ್ಯಮದವರೆದುರು ಮಾತನಾಡುವ ವೇಳೆ ಪ್ರಜಾಕೀಯದ ಸಮವಸ್ತ್ರ ಖಾಕಿ ಅಂಗಿಯನ್ನು ತೊಟ್ಟು ಕೂತರು. ಇದೇ ಸಂದರ್ಭದಲ್ಲಿ  ರಾಮಮಂದಿರ ಕುರಿತು ಮಾಧ್ಯಮ ಹೇಳಿಕೆ ನೀಡಲು ಆಗಮಿಸಿದ್ದ  ಬೈಕಾಡಿ ಸುಪ್ರಸಾದ್‌ ಶೆಟ್ಟಿ ಅವರ ಜತೆಗೂ ಮಾತನಾಡಿ ರಾಮಮಂದಿರ ಕುರಿತಾಗಿ ಮಾಹಿತಿ ಪಡೆದುಕೊಂಡರು.

Advertisement

ಗುರುತೇ ಸಿಗಲಿಲ್ಲ !
ಪತ್ರಿಕಾಭವನಕ್ಕೆ ಪ್ರವೇಶಿಸುವ ಮುನ್ನ ನಟ ಉಪೇಂದ್ರ ರಸ್ತೆ ಪಕ್ಕ ನಿಂತಿದ್ದರು. ಯಾರೊಂದಿಗೋ ಮೊಬೈಲ್‌ನಲ್ಲಿ ಮಾತನಾಡುತ್ತ ಬಹುಹೊತ್ತು ಕಳೆದರು. ಅಕ್ಕಪಕ್ಕದಲ್ಲೇ ಜನರು ಹೋಗುತ್ತಿದ್ದರೂ, ಇವರೇ ಉಪೇಂದ್ರ ಎಂಬುದು ಗೊತ್ತೇ ಆಗಲಿಲ್ಲ! ಕಾರಣ ಸಿಂಪಲ್‌ ಆಗಿದ್ದರು. 

ನೀರ್‌ ದೋಸೆ ತುಂಬಾ ಇಷ್ಟ
ಉಪೇಂದ್ರ ಅವರ ಪ್ರಕಾರ ಅವರ ಪ್ರೀತಿಯ ಊರುಗಳಲ್ಲಿ ಉಡುಪಿ ಕೂಡ ಒಂದು. “ಇಲ್ಲಿನ ಎಲ್ಲವೂ ನನಗೆ ಇಷ್ಟ. ತಿಂಡಿಗಳ ಕುರಿತು ಹೇಳುವುದಾದರೆ ನೀರ್‌ದೋಸೆ ತುಂಬಾ ಇಷ್ಟ. ಇಲ್ಲಿಗೆ ಬಂದವನು ನೀರು ದೋಸೆ ತಿಂದೇ ಬಿಟ್ಟೆ. ಮಧ್ಯಾಹ್ನವೂ ಇಲ್ಲಿನ ಊಟ ಸವಿಯುತ್ತೇನೆ’ ಎಂದರು.   

Advertisement

Udayavani is now on Telegram. Click here to join our channel and stay updated with the latest news.

Next