ಸುಮಾರು ಆರು ತಿಂಗಳ ಹಿಂದೆ ಇಂಥದ್ದೊಂದು ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಇತ್ತು. ಏಕೆಂದರೆ, ಉಪೇಂದ್ರ ಅಷ್ಟರಲ್ಲಾಗಲೇ ಖಾಕಿ ಅಂಗಿ ತೊಟ್ಟು
ಪ್ರಜಾಕೀಯ ಮಾಡುವುದಾಗಿ ಹೇಳಿದ್ದರು. ಮಾಡಬೇಕಿದ್ದ ಸಿನಿಮಾ ಎಲ್ಲ ಮುಂದಕ್ಕೆ ಹಾಕಿ, ಪ್ರಜಾಕೀಯದ ಮಾತಾಡಿದ್ದರು. ಹಾಗಾಗಿ ಉಪೇಂದ್ರ ಅವರು ಮತ್ತೆ ಬಣ್ಣ ಹಚ್ಚುತ್ತಾರಾ ಅಥವಾ ಪ್ರಜಾಕೀಯದಲ್ಲೇ ಕಳೆದು ಹೋಗುತ್ತಾರಾ ಎಂಬ ಪ್ರಶ್ನೆಯೊಂದು ಅವರ ಅಭಿಮಾನಿಗಳೂ ಸೇರಿದಂತೆ ಹಲವರಲ್ಲಿತ್ತು. ಅದಕ್ಕೆ ಉತ್ತರವಾಗಿ ಅವರ ಹೊಸ ಚಿತ್ರವೊಂದು ಇಂದಿನಿಂದ ಪ್ರಾರಂಭವಾಗುತ್ತಿದೆ. ಅದರ ನಂತರ ಕನಕಪುರ ಶ್ರೀನಿವಾಸ್ ನಿರ್ಮಾಣದ ಹೊಸ ಚಿತ್ರವೊಂದರಲ್ಲಿ ನಟಿಸುವ ಸಾಧ್ಯತೆ ಇದೆ. ಇದರ ಜೊತೆಗೆ ಉಪೇಂದ್ರ ಅವರು ಗೇಟ್ ಓಪನ್ ಮಾಡಿರುವುದರಿಂದ, ಚಿತ್ರರಂಗದ ಮಂದಿ ಅವರ ಮನೆಗೆ ಬಂದು ಹೋಗುವುದು ನಡೆಯುತ್ತಿದೆ. ಅಲ್ಲಿಗೆ ಉಪೇಂದ್ರ ಅವರು ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗುವುದಕ್ಕೆ ತೀರ್ಮಾನಿಸಿದ್ದಾರೆ.
Advertisement
“ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದು ಸಾಧ್ಯವಿಲ್ಲ ಅಂತಾದಾಗ, “ಹೋಮ್ ಮಿನಿಸ್ಟರ್’ ಚಿತ್ರ ಮುಗಿಸಿದೆ. ಅಷ್ಟರಲ್ಲಿ ಚಂದ್ರು ಒಂದೊಳ್ಳೆಯ ಕಥೆ ತಂದರು. “ಎ’ ಮತ್ತು “ಉಪೇಂದ್ರ’ದ ಪ್ರೀತಿ ಮತ್ತು ಜೀವನದ ಫಿಲಾಸಫಿಯನ್ನು ಈಗಿನ ಟ್ರೆಂಡ್ ಗೆ ಬ್ಲೆಂಡ್ ಮಾಡಿ ಒಂದು ಕಥೆ ಮಾಡಿದ್ದಾರೆ.ಆ ಕಥೆ ಇಷ್ಟವಾಯಿತು. ಕಾಲಕ್ಕೆ ತಕ್ಕಂತೆ ಚಂದ್ರು ಸಹ Reload ಆಗಿ ಬಂದಿದ್ದಾರೆ. ಬಹಳ ದಿನ ಆಗಿತ್ತು, ಆ ತರಹದ್ದೊಂದು ಕಥೆ ಕೇಳಿ.
ಸಾಮಾನ್ಯವಾಗಿ ಒಂದು ಕಥೆ ಕೇಳಿದ ನಂತರ ಕೆಲವು ಸಂಶಯಗಳು, ಭಿನ್ನಾಭಿಪ್ರಾಯಗಳು ಎಲ್ಲವೂ ಇರುತ್ತವೆ. ಆದರೆ, ಚಂದ್ರು ಕಥೆಯಲ್ಲಿ ಅದ್ಯಾವುದೂ ಇರಲಿಲ್ಲ. ತಪ್ಪು, ಗೊಂದಲಗಳಿಲ್ಲದ ಕಥೆ ಅದಾಗಿತ್ತು. ಹಾಗಾಗಿ ಆ ಕಥೆಯನ್ನು ಒಪ್ಪಿಕೊಂಡಿದ್ದೇನೆ. ಇನ್ನೊಂದಿಷ್ಟು ಜನ
ಚಿತ್ರ ಮಾಡೋಣ ಅಂತ ಬಂದಿದ್ದಾರೆ. ಕನಕಪುರ ಶ್ರೀನಿವಾಸ್ ಅವರಿಗೆ ಒಂದು ಚಿತ್ರ ಮಾಡುವ ಸಾಧ್ಯತೆ ಇದೆ’ ಎನ್ನುತ್ತಾರೆ ಉಪೇಂದ್ರ. ಉಪೇಂದ್ರ ಅವರು ರಾಜಕೀಯಕ್ಕೆ ಬರುವ ಮುನ್ನ ಒಂದಿಷ್ಟು ಚಿತ್ರಗಳಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಇತ್ತು.
ಉಪೇಂದ್ರ ಅವರ ಕೈಯಲ್ಲಿ ಒಂದಿಷ್ಟು ಚಿತ್ರಗಳಿದ್ದವು. ಈಗ ಉಪೇಂದ್ರ ಅವರು ಮತ್ತೆ ನಟಿಸುತ್ತಿರುವುದರಿಂದ, ಆ ಚಿತ್ರಗಳು ಸಹ ಮುಂದುವರೆಯುತ್ತವಾ ಎಂಬ ಪ್ರಶ್ನೆ ಬರಬಹುದು. ಈ ಪ್ರಶ್ನೆಯನ್ನು ಅವರ ಮುಂದಿಟ್ಟರೆ, “ಅಂತಹ ಕೆಲವು ಕಥೆಗಳನ್ನು ಓಕೆ ಮಾಡಿದ್ದೆ. ಕ್ರಮೇಣ
ನಾನು ಈ ಕಡೆ ಬಂದಿದ್ದರಿಂದ, ಆ ಚಿತ್ರಗಳನ್ನು ಮಾಡಬೇಕಾಗಿದ್ದವರು ಸಹ ತಮ¤ಮ್ಮ ಕೆಲಸಗಳಲ್ಲಿ ಬಿಝಿಯಾದರು. ಈಗ ಅವರೂ
ಚಿತ್ರಗಳನ್ನ ಮಾಡುತ್ತಿದ್ದಾರೆ. ಎಲ್ಲಾ ಮುಗಿದ ಮೇಲೆ ಮುಂದೆ ನೋಡಬೇಕು’ ಎನ್ನುತ್ತಾರೆ ಉಪೇಂದ್ರ. ಇದಲ್ಲದೆ ಇನ್ನೊಂದಿಷ್ಟು ಚಿತ್ರಗಳು ಲೈನ್‌ನಲ್ಲಿವೆಯಂತೆ. “ಒಂದಿಷ್ಟು ಚಿತ್ರಗಳು ಲೈನ್‌ನಲ್ಲಿವೆ. ಈಗಷ್ಟೇ “ಉತ್ತಮ ಪ್ರಜಾಕೀಯ ಪಕ್ಷ’
ನೋಂದಣಿಯಾಗಿದೆ. ಅದರ ಕೆಲಸಗಳು ಒಂದಿಷ್ಟಿವೆ. ಪಕ್ಷವನ್ನು ಸಂಘಟಿಸಿ, ಮುಂದೆ ಯಾವ ಚುನಾವಣೆಗೆ ಸ್ಪರ್ಧಿಸಬೇಕೆಂದು ನೋಡಬೇಕು. ಆವತ್ತೂ ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ. ಸಿನಿಮಾ ನನ್ನ ದಾರಿ, ಪ್ರಜಾಕೀಯ ನನ್ನ ಗುರಿ’ ಎನ್ನುತ್ತಾರೆ ಉಪೇಂದ್ರ. ಇನ್ನು ರಾಜಕೀಯದ ಅನುಭವ ಹೇಗಿತ್ತು ಎಂದರೆ, “224 ಕ್ಷೇತ್ರಗಳ ಪೈಕಿ 175 ಕಡೆ ಸಂದರ್ಶನ ಮಾಡಿದ್ದೆ. ಹಲವು ಕಡೆ ಎರಡಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದರು. ಒಂದು ಅಧಿಕಾರ ಸಿಗುತ್ತದೆ ಎಂದು ಬರಬೇಡಿ, ಗೆದ್ದರೆ ಚೆನ್ನಾಗಿ ಕೆಲಸ ಮಾಡಿ ಅಂತ ಹೇಳಿದ್ದೆ. ಆದರೆ, ಈ ಬಾರಿ ಸ್ಪರ್ಧಿಸಲಾಗಲಿಲ್ಲ. ಅದು ನನಗೆ ಒಳ್ಳೆಯ ಪಾಠ ಎನ್ನುವುದಕ್ಕಿಂತ ಜನರಿಗೆ ಒಳ್ಳೆಯ ಪಾಠ ಎಂದರೆ ತಪ್ಪಿಲ್ಲ. ಈ ಕ್ಷೇತ್ರಕ್ಕೆ ಬರಬೇಕಾದವರಿಗೆ ಒಳ್ಳೆಯ ಪಾಠ ಇದು. ಇಲ್ಲಿ ಹೇಗಿರಬೇಕು ಎಂಬುದು ಜನರಿಗೆ ಚೆನ್ನಾಗಿ ಅರ್ಥವಾಗಿದೆ. ನಾನು ಆಗಲೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ಇದೊಂದು ವೇದಿಕೆ ಅಷ್ಟೇ. ಇಲ್ಲಿ ವಿಚಾರ ಮುಖ್ಯ. ಐಡಿಯಾಗಳಿದ್ದರೆ ಯಾರು ಬೇಕಾದರೂ ತರಬಹುದು. ಇಲ್ಲಿ ನಾಯಕನಾಗಬೇಕು ಅಂತಿದ್ದರೆ ಬರಬೇಡಿ. ಕೆಲಸ ಮಾಡೋಕೆ ಬನ್ನಿ. ಫ್ರೀಯಾಗಿ ಕೆಲಸ ಮಾಡಬೇಡಿ. ಕೆಲಸ ಮಾಡಿದ್ದಕ್ಕೆ ಸಂಬಳ ಸಹ ಇದೆ’ ಎಂದು ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾರೆ ಉಪೇಂದ್ರ.
Related Articles
ಈ ಬಾರಿ ಉಪೇಂದ್ರ ಮತ್ತು ಅವರ ಪಕ್ಷ ಸ್ಪರ್ಧಿಸದಿದ್ದರೂ, ತಮ್ಮ ವಿಚಾರಗಳು ಒಂದು ಮೌನಕ್ರಾಂತಿಯಾಗುತ್ತಿದೆ ಎನ್ನುತ್ತಾರೆ ಅವರು. “ಇದೆಲ್ಲಾ ಸಂಪೂರ್ಣ ಬದಲಾಗಬೇಕು. ಇಲ್ಲಿ ಹಣ ಮುಖ್ಯವಾಗಬಾರದು, ವಿಚಾರಗಳು ಮುಖ್ಯವಾಗಬೇಕು. ನಾವು ಏನು ಮಾಡುತ್ತೀವಿ ಎನ್ನುವುದನ್ನು ಪ್ರಣಾಳಿಕೆ ಮೂಲಕ ಹೇಳಬೇಕು. ಪ್ರಣಾಳಿಕೆಗಳು ಚುನಾವಣೆಗೆ ಕೆಲವು ದಿನಗಳ ಮುನ್ನ ಬಿಡುಗಡೆಯಾದರೆ ಹೇಗೆ? ಈಗ ಬೆಂಗಳೂರಿನಲ್ಲಿ ಮತದಾನ ಕಡಿಮೆಯಾಗಿದೆ. ಯಾಕೆ ಹಲವರು ಮತದಾನ ಮಾಡಿಲ್ಲ ಎಂದರೆ ಅವರೆಲ್ಲಾ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಪ್ರಣಾಳಿಕೆ ಕೊಡಿ. ನೀವೇನು ಮಾಡುತ್ತೀರಿ ಎಂದು ಹೇಳಿ. ಆಗ ಯಾಕೆ ಬರೋದಿಲ್ಲ ನೋಡೋಣ? ಆ ವರ್ಗದ ಜನರನ್ನು ಕಳೆದುಕೊಂಡು, ಬರೀ ದುಡ್ಡಿಗೆ ವೋಟು ಹಾಕುವವರೇ ಮುಖ್ಯ ಎಂದು ಅವರನ್ನೇ ಕೊಂಡುಕೊಳ್ಳುವ ಪರಿಸ್ಥಿತಿ ಬರುತ್ತದೆ. ಅದೇ ಕಾರಣಕ್ಕೆ ಬುದ್ಧಿವಂತರು ಮೊದಲು ಜಾಗೃತರಾಗಬೇಕು. ಅವರಿಗೆ ಯಾವುದೋ ಅಭ್ಯರ್ಥಿ ಇಷ್ಟವಿಲ್ಲದಿದ್ದರೆ, ಪ್ರತಿಭಟಿಸಬೇಕೆಂದಿದ್ದರೆ ನೋಟನಾದರೂ ಒತ್ತಿ ತಮ್ಮ ಅಭಿಪ್ರಾಯವನ್ನು ಸೂಚಿಸಬಹುದಿತ್ತು. ಆದರೆ, ಬುದ್ಧಿವಂತರು ಮತದಾನ ಮಾಡದೆ ಒಂದು ತಪ್ಪು ಸಂದೇಶ ಕೊಟ್ಟಂಗಾಗಿದೆ’ ಎನ್ನುತ್ತಾರೆ ಉಪೇಂದ್ರ.
Advertisement