“ಅವರೀಗ ರೀ ಲೋಡೆಡ್ ಆಗಿ ಬಂದಿದ್ದಾರೆ. ಅವರನ್ನೀಗ ಬದಲಾಯಿಸಿಕೊಂಡಿದ್ದಾರೆ. ಅವರ ಸ್ಕ್ರಿಪ್ಟ್ನ ಆಲೋಚನೆ 20 ವರ್ಷದ ಹುಡುಗನಂತಿದೆ…’
– ಹೀಗೆ ಹೇಳಿದ್ದು ಉಪೇಂದ್ರ. ಹೇಳಿಕೊಂಡಿದ್ದು ನಿರ್ದೇಶಕ ಆರ್.ಚಂದ್ರು ಕುರಿತು. ಸಂದರ್ಭ: “ಐ ಲವ್ ಯು’ ಚಿತ್ರದ ಮುಹೂರ್ತ. ಅದು ಉಪೇಂದ್ರ ಅಭಿನಯದ ಚಿತ್ರ. ಅಷ್ಟೇ ಅಲ್ಲ, ಆರ್.ಚಂದ್ರು ಜೊತೆಗೆ ಎರಡನೇ ಇನ್ನಿಂಗ್ಸ್. ಹಾಗಾಗಿ ಕಂಠೀರವ ಸ್ಟುಡಿಯೋ ಅಂದು “ಜಾತ್ರೆ’ ವಾತಾವರಣದಲ್ಲಿತ್ತು. ಅಲ್ಲಿ ಹಾಕಿದ್ದ ಉಪೇಂದ್ರ ಕಟೌಟ್ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಅಭಿಮಾನಿಗಳ ಸಂಭ್ರಮ ಒಂದು ಕಡೆಯಾದರೆ, ಶುಭ ಹಾರೈಸಲು ಬಂದ ಅತಿಥಿ ಗಣ್ಯರನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದ ಚಿತ್ರತಂಡದವರ ಸಂತಸ ಇನ್ನೊಂದೆಡೆ. ಈ ಮಧ್ಯೆ, ಶಿವರಾಜಕುಮಾರ್ ಆಗಮಿಸಿ ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಶುಭಹಾರೈಸಿದರು. ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಚಿತ್ರತಂಡಕ್ಕೆ ಶುಭಕೋರಿ ಹೋದ ಬಳಿಕ, ಚಿತ್ರತಂಡ ಪತ್ರಕರ್ತರ ಮುಂದೆ ಮಾತಿಗೆ ಶುರುವಿಟ್ಟುಕೊಂಡಿತು.
ಉಪೇಂದ್ರ ತಮ್ಮ ಎಂದಿನ ಶೈಲಿಯ ನಗುವಿನಲ್ಲೇ ಮಾತಿಗೆ ನಿಂತರು. ಅದಕ್ಕೂ ಮುನ್ನ ಚಂದ್ರು ಸಿಕ್ಕಾಪಟ್ಟೆ ಮಾತಾಡಿದ್ದರು. “ಚಂದ್ರು ಈಗಾಗಲೇ ಎಲ್ಲವನ್ನೂ ಮಾತಾಡಿದ್ದಾರೆ. ಅವರು ಮಾತಾಡೋದನ್ನು ನೋಡಿದರೆ, “ಪ್ರಜಾಕೀಯ ಪಾರ್ಟಿ’ಗೆ ನ್ಪೋಕ್‌ಪರ್ಸನ್ ಆಗಿ ಇಟ್ಟುಕೊಳ್ಳಬೇಕೆನಿಸುತ್ತೆ’ ಅಂತ ನಗುವಿನ ಅಲೆ ಎಬ್ಬಿಸಿದರು. ಮತ್ತೆ ಚಿತ್ರದ ಕಡೆ ವಾಲಿದ ಉಪೇಂದ್ರ, “ಕಥೆ ಕೇಳಿದಾಗ, ಖುಷಿಯಾಯ್ತು. ತುಂಬಾ ಎಮೋಷನಲ್ ಆಗಿದೆ. ಆರಂಭದಲ್ಲಿ ಒನ್‌ಲೈನ್ ಹೇಳ್ತೀನಿ ಅಂತ ಬಂದ ಚಂದ್ರು, ಕಥೆ ಹೇಳ್ತಾ ಹೇಳ್ತಾ, ಫುಲ್ ಸಿನಿಮಾನೇ ತೋರಿಸಿಬಿಟ್ಟರು. ನಾನು ಕಥೆ ಕೇಳುತ್ತಲೇ ಎಮೋಷನಲ್ ಆಗಿಬಿಟ್ಟೆ. ಈಗಿನ ಟ್ರೆಂಡ್‌ಗೆ ತಕ್ಕ ಕಥೆ ಅದು. ಒಳ್ಳೆಯ ಚಿತ್ರ ಆಗುತ್ತೆ ಎಂಬ ನಂಬಿಕೆ ಇದೆ. ನಿಮ್ಮೆಲ್ಲರ ಬೆಂಬಲ ಬೇಕು. ಇಂತಹ ಸ್ಕ್ರಿಪ್ಟ್ನಲ್ಲಿ ನಾನೂ ಒನ್ ಆಫ್ ದ ಪಾರ್ಟ್ ಅಂತ ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತೆ’ ಎಂದರು ಉಪೇಂದ್ರ.
ಅಂದು ತುಂಬಾ ಖುಷಿಯ ಮೂಡ್‌ನಲ್ಲಿದ್ದ ನಿರ್ದೇಶಕ ಆರ್. ಚಂದ್ರು, “ಉಪ್ಪಿ ಸರ್ “ಬ್ರಹ್ಮ’ ಬಳಿಕ ನೀನು ಸಿನಿಮಾ ಮಾಡುವ ಮುನ್ನ, ಅನೌನ್ಸ್ ಮಾಡಿಕೊಂಡೇ ನನ್ನ ಬಳಿ ಬಾ, ನಾನು ಡೇಟ್ ಕೊಡ್ತೀನಿ ಅಂದಿದ್ರು. ಅದರಂತೆ, ನಾನು ಮೊದಲು ಅವರಿಗೆ ಕಥೆ ಹೇಳ್ಳೋಕೆ ಹೋದೆ. ಕಥೆ ಕೇಳಿದಾಕ್ಷಣ, “ನಿನ್ನನ್ನು ನೀನು ತುಂಬಾನೇ ಬದಲಾಯಿಸಿಕೊಂಡಿದ್ದೀಯ’ ಅಂದರು. ಕಥೆ ಕೇಳಿ ಸಿನಿಮಾ ಮಾಡಲು ಒಪ್ಪಿದರು. ನನಗೆ ಗೊತ್ತಿರುವಂತೆ, ಲೈನ್‌ನಲ್ಲಿ ಆರೇಳು ಚಿತ್ರಗಳಿದ್ದರೂ “ಐ ಲವ್ ಯು’ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ನಾನು ಅವರಿಗೆ ಋಣಿಯಾಗಿರುತ್ತೇನೆ. ಚಿಕ್ಕಂದಿನಲ್ಲಿ ಶಿವಣ್ಣ, ಉಪೇಂದ್ರ ಅವರ ಚಿತ್ರಗಳನ್ನು ನೋಡಿ ಬೆಳೆದವನು. ಅವರಿಬ್ಬರು ನಮ್ಮ ಪೀಳಿಗೆಯ ಸಿನಿಮಾ ಲೆಜೆಂಡ್‌ಗಳು. ಮುಂದೊಂದು ದಿನ ಅವರ ಸಿನಿಮಾ ಮಾಡಬೇಕು ಎಂಬ ಸಂಕಲ್ಪ ಇಟ್ಟುಕೊಂಡಿದ್ದೆ. ಅದು ನೆರವೇರಿದೆ. ಇಬ್ಬರೂ ನನ್ನ ಕರೆದು ಸಿನಿಮಾ ಮಾಡುವ ಅವಕಾಶ ಕೊಟ್ಟಿದ್ದಾರೆ. ನೋಡ್ತಾ ನೋಡ್ತಾನೇ 10 ವರ್ಷಗಳ ಸಿನಿಮಾ ಪಯಣ ಆಗೋಗಿದೆ. ಈ ಹತ್ತು ವರ್ಷದಲ್ಲಿ ಹತ್ತು ಚಿತ್ರ ಮಾಡಿದ್ದೇನೆ. ಆದರೂ, “ಐ ಲವ್ ಯು’ ನನ್ನ ಮೊದಲ ಹೆಜ್ಜೆ. ಇಷ್ಟು ವರ್ಷಗಳಲ್ಲಿ ಏಳು-ಬೀಳು ಕಂಡಿದ್ದೇನೆ. ನನ್ನೆಲ್ಲಾ ತಪ್ಪು,ಸರಿಗಳನ್ನು ತಿದ್ದಿದ್ದರಿಂದ ಇಂದು ಚಂದ್ರು ಹೀಗಾಗಲು ಕಾರಣ’ ಅಂದರು ಚಂದ್ರು.
“ಉಪೇಂದ್ರ ಅವರಿಗೆ ಮಾಡಿದ ಈ ಕಥೆ ಎಲ್ಲರಿಗೂ ಇಷ್ಟವಾಗಬೇಕೆಂಬ ಕಾರಣಕ್ಕೆ, ನನ್ನ ತಂಡದ ಜೊತೆಗೆ ಹಗಲಿರುಳು ಶ್ರಮಿಸಿದ್ದೇನೆ. ಈ ಬಾರಿ ಒಳ್ಳೆಯ ತಂತ್ರಜ್ಞರು ಜತೆಗಿದ್ದಾರೆ. ನವೀನ್ ಛಾಯಾಗ್ರಹಣ ಮಾಡಿದರೆ, ಕಿರಣ್ ತೊಟಂಬೈಲು ಸಂಗೀತವಿದೆ. ದೀಪು ಎಸ್.ಕುಮಾರ್ ಸೇರಿದಂತೆ ಇನ್ನೂ ಹಲವರು ನನ್ನೊಂದಿಗಿದ್ದಾರೆ. ಇದು ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗುತ್ತಿದೆ. ತೆಲುಗಿನಲ್ಲಿ ಗೋನಾಲು ಜಿ. ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಇಷ್ಟರಲ್ಲೇ ಅಲ್ಲೂ ಮುಹೂರ್ತ ನಡೆಯಲಿದೆ. ಮೊದಲಿಗೆ ಆ್ಯಕ್ಷನ್ ಎಪಿಸೋಡ್ ನಡೆಸಿ, ಆ ಬಳಿಕ ಮಾತಿನ ಭಾಗ ನಡೆಯಲಿದೆ. ನಾಯಕಿ ಆಯ್ಕೆ ಸೇರಿದಂತೆ ಉಳಿದ ತಾರಾಬಳಗದ ಆಯ್ಕೆ ಮಾಡಬೇಕಿದೆ. ಇನ್ನೊಂದು ವಿಷಯವೆಂದರೆ, ಈ ಬಾರಿ ಉಪೇಂದ್ರ ಅವರ ಹುಟ್ಟುಹಬ್ಬಕ್ಕೆ “ಐ ಲವ್ ಯು’ ಚಿತ್ರ ಬಿಡುಗಡೆ ಮಾಡುವ ಆಲೋಚನೆ ಇದೆ. ಅದಕ್ಕಾಗಿ ತಂಡ ರಾತ್ರಿ-ಹಗಲು ಕೆಲಸ ಮಾಡಲು ನಿರ್ಧರಿಸಿದೆ. ಇದೊಂದು ಚಾಲೆಂಜಿಂಗ್ ಕೆಲಸ. ಒಂದು ವೇಳೆ ಆಗದಿದ್ದರೆ, ಆಡಿಯೋ ಬಿಡುಗಡೆ ಮಾಡುವುದಾಗಿ’ ಹೇಳಿಕೊಂಡರು ಚಂದ್ರು.
ವಿಜಯ್ ಭರಮಸಾಗರ