ನವದೆಹಲಿ: ಟೀಮ್ ಇಂಡಿಯಾ ಬಾಂಗ್ಲಾವನ್ನು 188 ರನ್ ಗಳ ಅಂತರದಿಂದ ಸೋಲಿಸಿ, ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದಿದೆ.
ಚತ್ತೋಗ್ರಾಮ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬಾಂಗ್ಲಾವನ್ನು ತನ್ನ ಬಲಿಷ್ಠ ಬೌಲಿಂಗ್ ನಿಂದ ಕಟ್ಟಿಹಾಕಿ ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಇತ್ತ ಗಬ್ಬಾದಲ್ಲಿ ಆಸೀಸ್ ವೇಗಿಗಳು ದಕ್ಷಿಣ ಆಫ್ರಿಕಾ ತಂಡ ವನ್ನು ಹೀನಾಯವಾಗಿ ಸೋಲಿಸಿದೆ. ಎರಡೇ ದಿನದಲ್ಲಿ ಆಸ್ಟ್ರೇಲಿಯಾ – ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯ ಮುಕ್ತಾಯ ಕಂಡಿದೆ.
ಈ ಎರಡು ಟೆಸ್ಟ್ ಪಂದ್ಯದ ಫಲಿತಾಂಶ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ನ ಅಂಕಪಟ್ಟಿಯಲ್ಲಿ ಪರಿಣಾಮ ಬೀರಿದ್ದು, ಆಸ್ಟ್ರೇಲಿಯಾ 13 ಪಂದ್ಯದಲ್ಲಿ 9 ಪಂದ್ಯವನ್ನು ಗೆದ್ದು, 1 ಪಂದ್ಯದಲ್ಲಿ ಸೋತು, 3 ಪಂದ್ಯವನ್ನು ಡ್ರಾ ಮಾಡಿಕೊಂಡು, 120 ಅಂಕದೊಂದಿಗೆ, 76.92 ಶೇಕಡಾವಾರುನೊಂದಿಗೆ ಮೊದಲ ಸ್ಥಾನದಲ್ಲಿದೆ.
ಭಾರತ 55.77 ಶೇಕಡಾವಾರುನೊಂದಿಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಟೀಮ್ ಇಂಡಿಯಾ 87 ಅಂಕವನ್ನು ಪಡೆದುಕೊಂಡಿದೆ. 13 ಪಂದ್ಯದಲ್ಲಿ 7 ರಲ್ಲಿ ಜಯಗಳಿಸಿದ್ದು, 4 ರಲ್ಲಿ ಸೋತಿದೆ. 2 ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡ ಕಾರಣ ದಕ್ಷಿಣ ಆಫ್ರಿಕಾ 54.55 ಶೇಕಡಾವಾರುನೊಂದಿಗೆ 72 ಅಂಕದೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದೆ.
ಭಾರತದ ಗೆಲುವಿನ ಪರಿಣಾಮ 53.33 ಶೇಕಡಾವಾರುನೊಂದಿಗೆ ಶ್ರೀಲಂಕಾ 4ನೇ ಸ್ಥಾನಕ್ಕೆ ಕುಸಿದಿದೆ. ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವೆ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯುತ್ತಿದೆ. ಇಂಗ್ಲೆಂಡ್ 5 ನೇ ಸ್ಥಾನದಲ್ಲಿದ್ದು, ಪಾಕಿಸ್ತಾನ 6ನೇ ಸ್ಥಾನದಲ್ಲಿದೆ.
ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ನ್ಯೂಜಿಲ್ಯಾಂಡ್ 8ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ ಕಡೆಯ ಸ್ಥಾನ (9) ದಲ್ಲಿದೆ.