ಪಾಟ್ನಾ: ಗುಜರಾತ್ ಮುಖ್ಯಮಂತ್ರಿಯಾಗಿದ್ದ ನಾನು ಹಾಗೂ ಬಿಹಾರದ ಸಿಎಂ ನಿತೀಶ್ ನವದೆಹಲಿಯಲ್ಲಿ ನಡೆದ ಯುಪಿಎ ಸಭೆಯಲ್ಲಿ ಭಾಗವಹಿಸಿದ್ದೇವು. ಬಿಹಾರದ ಅಭಿವೃದ್ದಿಯನ್ನು ತಡೆಯಬೇಡಿ ಎಂದು ನಿತೀಶ್ ಜೀ ಪದೇ, ಪದೇ ಮನವಿ ಮಾಡಿಕೊಂಡಿದ್ದರು. ಆದರೆ ಹತ್ತು ವರ್ಷಗಳ ಕಾಲ ಬಿಹಾರದ ಅಭಿವೃದ್ಧಿಗೆ ಯಾವುದೇ ನೆರವು ನೀಡದೆ ಹಾಳು ಮಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಬಿಹಾರದ ಅಭಿವೃದ್ದಿಗಾಗಿ ಮತ್ತೊಮ್ಮೆ ಎನ್ ಡಿಎಗೆ ಮತ ನೀಡಿ ಆಶೀರ್ವದಿಸಬೇಕೆಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ಅವರು ಶುಕ್ರವಾರ(ಅಕ್ಟೋಬರ್ 23, 2020) ಪ್ರಥಮ ಹಂತದ ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರ ಭಾಷಣದಲ್ಲಿ ಪಾಲ್ಗೊಂಡು ಮಾತನಾಡಿದ್ದು, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಎನ್ ಡಿಎ ಸರ್ಕಾರ ರದ್ದುಗೊಳಿಸಿದೆ. ಆದರೆ ವಿರೋಧ ಪಕ್ಷಗಳು ಅದನ್ನು ಮತ್ತೆ ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತಿರುವುದಾಗಿ ದೂರಿದರು.
ಬಿಹಾರವನ್ನು ಒಮ್ಮೆ ಆಳಿದವರು ಮತ್ತೆ ಅಭಿವೃದ್ದಿ ಹೊಂದುತ್ತಿರುವ ರಾಜ್ಯವನ್ನು ತಮ್ಮ ದುರಾಸೆಯ ಕಣ್ಣುಗಳಿಂದ ನೋಡುತ್ತಿದ್ದಾರೆ. ಆದರೆ ಬಿಹಾರವನ್ನು ಯಾರು ಹಿಂದುಳಿಯುವಂತೆ ಮಾಡಿದ್ದಾರೆ ಎಂಬುದನ್ನು ಮರೆಯಬಾರದು. ಆ ಸಂದರ್ಭ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು, ಭ್ರಷ್ಟಾಚಾರ ತಾಂಡವವಾಡಿತ್ತು ಎಂದು ಪ್ರಧಾನಿ ಪರೋಕ್ಷವಾಗಿ ಆರ್ ಜೆಡಿಯನ್ನು ಟೀಕಿಸಿದರು.
ಇದನ್ನೂ ಓದಿ:ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಂತಿಮ ಚರ್ಚೆ: ಭಾರತದ ವಿರುದ್ಧ ಟ್ರಂಪ್ ಆರೋಪವೇನು?
ಎಲ್ಲಾ ಸಮೀಕ್ಷೆಗಳು ಬಿಹಾರದಲ್ಲಿ ಮತ್ತೆ ಎನ್ ಡಿಎ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಬಿಹಾರ ಇಬ್ಬರು ಮಕ್ಕಳನ್ನು ಕಳೆದುಕೊಂಡಿದೆ. ನಾನು ರಾಮ್ ವಿಲಾಸ್ ಪಾಸ್ವಾನ್ ಜೀ ಅವರಿಗೆ ಈ ಸಭೆಯ ಮೂಲಕ ಗೌರವ ಸಲ್ಲಿಸುತ್ತೇನೆ. ಅವರು ಕೊನೆಯ ಉಸಿರಿರುವವರೆಗೂ ನನ್ನ ಬಳಿ ಹೇಳುತ್ತಿದ್ದದ್ದು, ತಮ್ಮ ಇಡೀ ಜೀವನ ಬಡವರು ಮತ್ತು ದಲಿತರ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟಿರುವುದಾಗಿ. ಅದೇ ರೀತಿ ಬಾಬು ರಘುವಂಸ್ ಪ್ರಸಾದ್ ಸಿಂಗ್ ಜೀ ಕೂಡಾ ಬಡವರ ಪರವಾಗಿಯೇ ಕೆಲಸ ಮಾಡಿದ್ದು, ಅವರಿಗೂ ಗೌರವ ಸಲ್ಲಿಸುವುದಾಗಿ ಪ್ರಧಾನಿ ಮೋದಿ ಹೇಳಿದರು.