ಲಕ್ನೋ: 7 -8 ತಿಂಗಳು ಶಾಲೆ ತಪ್ಪಿದ್ದಕ್ಕೇ ಜಗತ್ತು ಪರಿತಪಿಸುತ್ತಿದೆ. ಇನ್ನು ಶಾಲೆ ಮೆಟ್ಟಿಲನ್ನೇ ಏರದ ಬೀದಿ ಬದಿಯ ಬಡ ಮಕ್ಕಳ ಸ್ಥಿತಿ ಹೇಗಿರಬೇಡ? ಇಂಥ ಶಿಕ್ಷಣ ವಂಚಿತ ಬಡ ಮಕ್ಕಳನ್ನು ಕೇವಲ 30 ಗಂಟೆಗಳಲ್ಲಿ “ಅಕ್ಷರಸ್ಥ’ ರನ್ನಾಗಿಸುವ ಮಾದರಿ ಕೆಲಸವನ್ನು ಉ.ಪ್ರ. ಶಿಕ್ಷಣ ತಜ್ಞೆಯೊಬ್ಬರು ಮಾಡುತ್ತಿದ್ದಾರೆ!
ಅವರು ಸುನೀತಾ ಗಾಂಧಿ. ಕಳೆದ 5 ವರ್ಷಗಳಿಂದ ಗ್ಲೋಬಲ್ ಡ್ರೀಮ್ಸ್ ಪ್ರಾಜೆಕ್ಟ್ ಅಡಿಯಲ್ಲಿ ಬಡಮಕ್ಕಳನ್ನೆಲ್ಲ ಒಟ್ಟುಗೂಡಿಸಿ, ಶ್ರದ್ಧೆಯಿಂದ ಅಕ್ಷರ ಕಲಿಸುತ್ತಿದ್ದಾರೆ. ಇವರಿಗಾಗಿಯೇ ಪಠ್ಯಕ್ರಮ ರೂಪಿಸಿದ್ದಾರೆ. ಕೇವಲ 30 ಗಂಟೆಯಲ್ಲಿ ತಮ್ಮದೇ ವಿಶಿಷ್ಟ ಬೋಧನೆ ಮೂಲಕ ಆ ಮಕ್ಕಳನ್ನು ವಿದ್ಯಾವಂತರ ನ್ನಾಗಿಸುತ್ತಿದ್ದಾರೆ.
ಹೇಗೆ ಕಲಿಸ್ತಾರೆ?: ಒಟ್ಟು 120 ಅವಧಿಗಳಲ್ಲಿ ಸುನೀತಾ ಮಕ್ಕಳಿಗೆ ಬೋಧಿಸುತ್ತಾರೆ. ಪುನರಾವರ್ತನೆ ಅಭ್ಯಾಸಕ್ಕಿಂತ ಹೆಚ್ಚಾಗಿ ಪ್ರಶ್ನೆಗಳನ್ನು ಕೇಳುವ ಮೂಲಕ ಶಾಶ್ವತವಾಗಿ ಉತ್ತರ ನೆನಪಿಟ್ಟುಕೊಳ್ಳುವ ಚಾತುರ್ಯ ಕಲಿಸುತ್ತಾರೆ. ಅಕ್ಷರ- ಪದಗಳನ್ನು ಗುರು ತಿಸುವುದು, ಚಿತ್ರಗಳ ಮೂಲಕ ಪದ- ವಾಕ್ಯಗಳ ರಚನೆ, ವೀಡಿಯೋ ಮತ್ತು ಆಡಿಯೋ ಮೂಲಕ ಪಾಠ… ಮುಂತಾದ ವಿಧಾನಗಳ ಮೂಲಕ ಪಾಠ ಹೇಳುತ್ತಾರೆ. ಇದಕ್ಕಾಗಿಯೇ 30 ಪಾಠಗಳನ್ನೊಳ ಗೊಂಡ ಕಿಟ್ ಸಿದ್ಧಪಡಿಸಿದ್ದಾರೆ. 60 ಕಿರು ವೀಡಿಯೋ, ಬುಕ್ಸ್, ಅಲ್ಫಾಬೆಟ್ ಕಟೌಟ್ ಮತ್ತು ಸ್ಟೇಷನರಿ ಐಟಮ್ಸ್- ಈ ಕಿಟ್‌ನಲ್ಲಿವೆ.
ಮುಂದಿನ ವರ್ಷದ ಅಂತ್ಯದೊಳಗೆ 20 ರಾಜ್ಯಗಳ, ಶಾಲೆಯಿಂದ ಹೊರಗುಳಿದ 20 ಲಕ್ಷ ಮಕ್ಕಳನ್ನು ಸಾಕ್ಷರಸ್ಥರನ್ನಾಗಿಸುವ ಗುರಿ ಇಟ್ಟುಕೊಂಡಿದ್ದೇನೆ.
ಸುನೀತಾ ಗಾಂಧಿ, ಶಿಕ್ಷಣ ತಜ್ಞೆ