ಲಕ್ನೋ:ಸ್ಮಾರ್ಟ್ ಫೋನ್ ಖರೀದಿಸಿದರೆ ಎರಡು ಬಿಯರ್ ಕ್ಯಾನ್ ಉಚಿತವಾಗಿ ನೀಡುವುದಾಗಿ ಘೋಷಿಸಿದ ಪರಿಣಾಮ ಮೊಬೈಲ್ ಶೋ ರೂಂ ಎದುರು ಭಾರೀ ಪ್ರಮಾಣದಲ್ಲಿ ಜನ ಸೇರಲು ಆರಂಭಿಸಿದ್ದು, ಇದರಿಂದ ಸಾರ್ವಜನಿಕ ಶಾಂತಿ ಕದಡಿದ ಆರೋಪದ ಮೇಲೆ ಅಂಗಡಿ ಮಾಲೀಕನನ್ನು ಬಂಧಿಸಿರುವ ಘಟನೆ ಉತ್ತರಪ್ರದೇಶದ ಭದೋಹಿಯಲ್ಲಿ ನಡೆದಿದೆ.
ಇದನ್ನೂ ಓದಿ:ಸಂಸತ್ತಿನಲ್ಲಿ ನಮಗೆ ಮೈಕ್ ಆನ್ ಮಾಡಲೂ ಅವಕಾಶವಿಲ್ಲ..; ಬ್ರಿಟಿಷ್ ಸಂಸದರ ಬಳಿ ರಾಹುಲ್
ಆರೋಪಿಯ ಮೊಬೈಲ್ ಶೋರೂಂ ಅನ್ನು ಸೀಲ್ ಮಾಡಲಾಗಿದೆ. ಚೌರಿ ರಸ್ತೆ ಸಮೀಪ ಮೊಬೈಲ್ ಅಂಗಡಿ ನಡೆಸುತ್ತಿರುವ ರಾಜೇಶ್ ಮೌರ್ಯ ಎಂಬಾತ ತನ್ನ ಶೋರೂಂನಲ್ಲಿ ಮಾರ್ಚ್ 3ರಿಂದ 7ರವರೆಗೆ ಆ್ಯಂಡ್ಯಾಯ್ಡ್ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಎರಡು ಕ್ಯಾನ್ ಬಿಯರ್ ಉಚಿತವಾಗಿ ನೀಡುವುದಾಗಿ ಪೋಸ್ಟರ್ಸ್ಸ್, ಕರಪತ್ರದ ಮೂಲಕ ಪ್ರಚಾರ ಮಾಡಿದ್ದ ಎಂದು ಕೋಟ್ವಾಲಿ ಪೊಲೀಸ್ ಠಾಣಾಧಿಕಾರಿ ಅಜಯ್ ಕುಮಾರ್ ಸೇಠ್ ತಿಳಿಸಿದ್ದಾರೆ.
ಆ್ಯಂಡ್ರಾಯ್ಡ್ ಸ್ಮಾರ್ಟ್ ಫೋನ್ ಖರೀದಿಸಿದರೆ ಉಚಿತವಾಗಿ ಎರಡು ಕ್ಯಾನ್ ಬಿಯರ್ ಪಡೆಯಿರಿ ಎಂಬ ಸುದ್ದಿ ಎಲ್ಲೆಡೆ ಹಬ್ಬಿದ ಪರಿಣಾಮ ಶೋರೂಂನತ್ತ ಜನರು ಲಗ್ಗೆ ಹಾಕತೊಡಗಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಅವರು ಶೋರೂಂ ಮಾಲೀಕನ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿರುವುದಾಗಿ ವರದಿ ವಿವರಿಸಿದೆ.
ಸೋಮವಾರ ಸಂಜೆ ಮೊಬೈಲ್ ಶೋರೂಂ ಮುಂಭಾಗ ನೆರೆದಿದ್ದ ಜನರ ಗುಂಪುನ್ನು ಲಾಠಿಚಾರ್ಜ್ ಮಾಡುವ ಮೂಲಕ ಚದುರಿಸಿದ್ದು, ಬಳಿಕ ಮಾಲೀಕ ಮೌರ್ಯನನ್ನು ಸಾರ್ವಜನಿಕ ಶಾಂತಿ ಕದಡಿದ ಆರೋಪದಡಿ ಬಂಧಿಸಿರುವುದಾಗಿ ಅಜಯ್ ಕುಮಾರ್ ಸೇಠ್ ತಿಳಿಸಿದ್ದಾರೆ.