ಉತ್ತರ ಪ್ರದೇಶ : ಕಾರಣವಿಲ್ಲದೆ ಪೊಲೀಸರಿಂದ ಹಲ್ಲೆಗೆ ಒಳಗಾದ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸೋಮವಾರ (ಜು.26) ರಾತ್ರಿ 20 ವರ್ಷ ವಯಸ್ಸಿನ ಯುವಕ ತಮ್ಮ ಮನೆಯ ಪಕ್ಕದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಈತನ ಸಾವಿಗೆ ಪೊಲೀಸರ ಹಲ್ಲೆ ಕಾರಣ ಎಂದು ಮೃತನ ಕುಟುಂಬದವರು ಆರೋಪಿಸಿ ದೂರು ನೀಡಿದ್ದಾರೆ.
ಘಟನೆ ಹಿನ್ನೆಲೆ :
ಸೋಮವಾರ ಕೋವಿಡ್ ಲಸಿಕೆ ಪಡೆಯಲೆಂದು ಲಸಿಕಾ ಕೇಂದ್ರಕ್ಕೆ ತೆರಳಿದ್ದ ವೇಳೆ ಪೊಲೀಸ್ ಹಾಗೂ ಯುವಕನ ನಡುವೆ ಜಗಳ ನಡೆದಿತ್ತು. ವೈದ್ಯಕೀಯ ಸಿಬ್ಬಂದಿ ತನ್ನ ಹೆಸರು ಕೂಗಿದಾಗಲೂ ಒಳಗೆ ಬಿಡದ ಪೊಲೀಸರನ್ನು ಪ್ರಶ್ನಿಸಿದ್ದಕ್ಕಾಗಿ ಇಬ್ಬರು ಪೇದೆಗಳು ಈತನ ಮೇಲೆ ಹಲ್ಲೆ ನಡೆಸಿದರು. ಬಳಿಕ ಆತನನ್ನು ರೂಮಿನೊಳಗೆ ಕರೆದೊಯ್ದು ಲಾಠಿಗಳಿಂದ ಮನಬಂದಂಥೆ ಥಳಿಸಲಾಗಿದೆ. ನಂತರ ದರ ದರನೇ ಎಳೆದು ತಂದು ಹೊರಗೆ ನೂಕಿದ್ದಾರೆ. ಈ ಘಟನೆಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಪೊಲೀಸರಿಂದ ಲಾಠಿ ಏಟು ತಿಂದು ಮನೆಗೆ ಮರಳಿದ ಯುವಕ ಖಿನ್ನತೆಗೊಳಗಾಗಿದ್ದ. ತಡರಾತ್ರಿ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಇವನ ಸಾವಿಗೆ ಪೊಲೀಸರೆ ಕಾರಣ ಎಂದು ಮೃತನ ಕುಟುಂಬದವರು ಆಕ್ರೋಶ ಹೊರಹಾಕಿದ್ದಾರೆ.
5 ಜನ ಪೊಲೀಸರ ವಿರುದ್ಧ ಎಫ್ ಐ ಆರ್ :
ಇನ್ನು ಯುವಕನ ಕುಟುಂಬದವರ ದೂರಿನ ಹಿನ್ನೆಲೆ ಐವರು ಪೊಲೀಸ್ ಸಿಬ್ಬಂದಿ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಎಫ್ ಐ ಆರ್ ದಾಖಲಾಗಿದೆ ಎಂದು ವರದಿಗಳು ತಿಳಿಸಿವೆ.