ನವದೆಹಲಿ: ಸಿಂಗಾಪೂರ್ ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ 24 ವರ್ಷದ ಯುವಕನನ್ನು ಅರೆಸೇನಾಪಡೆ ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ:Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
ಉತ್ತರಪ್ರದೇಶದ ಗೌತಮ್ ಬುದ್ಧ ನಗರದ ಸಂಗೀತ್ ಸಿಂಗ್ ಎಂದು ಗುರುತಿಸಲ್ಪಟ್ಟ ಯುವಕ ಪೈಲಟ್ ಸಮವಸ್ತ್ರದಲ್ಲಿ ವಿಮಾನ ನಿಲ್ದಾಣದ ಸ್ಕೈವಾಕ್ ಬಳಿ ಸುಳಿದಾಡುತ್ತಿರುವುದನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ ಎಫ್) ಗಮನಿಸಿತ್ತು. ಸಿಂಗ್ ಕೊರಳಲ್ಲಿ ಐಡಿ ಕಾರ್ಡ್ ಹಾಕಿಕೊಂಡಿದ್ದು, ಅದರಲ್ಲಿ ಸಿಂಗಾಪೂರ್ ಏರ್ ಲೈನ್ಸ್ ಉದ್ಯೋಗಿ ಎಂದು ನಮೂದಿಸಿತ್ತು.
ಸಿಂಗ್ ನನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಈತ ಸಿಂಗಾಪೂರ್ ಏರ್ ಲೈನ್ಸ್ ಉದ್ಯೋಗಿ ಅಲ್ಲ ಎಂಬುದು ಪತ್ತೆಯಾಗಿತ್ತು. ಇದೊಂದು ನಕಲಿ ಐಡಿ ಕಾರ್ಡ್ ಆಗಿದ್ದು, ದೆಹಲಿಯ ದ್ವಾರಕಾ ಪ್ರದೇಶದಲ್ಲಿ ಪೈಲಟ್ ಯೂನಿಫಾರ್ಮ್ ಖರೀದಿಸಿದ್ದ ಎಂದು ವರದಿ ವಿವರಿಸಿದೆ.
2020ರಲ್ಲಿ ಸಿಂಗ್ ಮುಂಬೈನಲ್ಲಿ ಒಂದು ವರ್ಷದ ಏವಿಯೇಷನ್ ಹಾಸ್ಪಿಟಾಲಿಟಿ ಕೋರ್ಸ್ ಪೂರ್ಣಗೊಳಿಸಿದ್ದು, ಸಿಂಗ್ ಕುಟುಂಬ ಸದಸ್ಯರನ್ನು ಯಾಮಾರಿಸುವ ನಿಟ್ಟಿನಲ್ಲಿ ಈ ಕೃತ್ಯ ಎಸಗಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.