ಲಕ್ನೋ: ಕೆಲವೊಂದು ಸಂದರ್ಭದಲ್ಲಿ ವಿಚಿತ್ರ ಕಾರಣಕ್ಕೆ ಮದುವೆಗಳು ಮುರಿದು ಬೀಳುವುದುಂಟು. ಅಂಥದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮದುವೆ ಮಂಟಪದಲ್ಲಿ ಕೊನೆ ಕ್ಷಣದಲ್ಲಿ ವಧುವಿನ ಮನೆಯವರಿಂದ ವರ ಹೆಚ್ಚುವರಿಯಾಗಿ ವರದಕ್ಷಿಣೆಯನ್ನು ಕೇಳಿದ್ದಕ್ಕೆ ಮದುವೆಯೇ ಮುರಿದು ಬಿದ್ದಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಜೂ.18 ರಂದು ಬಾದಲ್ ಎನ್ನುವ ವರನ ವಿವಾಹ ರಾಮ ಎನ್ನುವಳೊಂದಿಗೆ ನಿಶ್ಚಯವಾಗಿತ್ತು. ಮದುವೆಯ ಮೆರವಣಿಗೆಯನ್ನು ಸ್ವಾಗತ ಮಾಡಿ, ವಿಧಿವಿಧಾನಗಳು ಶುರುವಾಗಿದ್ದವು. ಇನ್ನೇನು ತಾಳಿ ಕಟ್ಟುವ ಸಂಪ್ರದಾಯ ಮಾತ್ರ ಬಾಕಿಯಿರುವಾಗಲೇ ವರ ವಧುವಿನ ಮನೆಯವರಿಂದ ಹೆಚ್ಚುವರಿಯಾಗಿ ವರದಕ್ಷಿಣೆಯ ಬೇಡಿಕೆಯನ್ನಿಟ್ಟಿದ್ದಾರೆ. ಬುಲೆಟ್ ಬೈಕ್ ಹಾಗೂ 1 ಲಕ್ಷ ರೂ. ನಗದನ್ನು ನೀಡಿಯೆಂದು ಬೇಡಿಕೆಯಿಟ್ಟಿದ್ದಾನೆ.
ಈ ಮಾತು ಎರಡೂ ಕಡೆಯವರ ವಾಗ್ವಾದಕ್ಕೆ ಕಾರಣವಾಗಿದೆ. ತಾನು ಕೇಳಿದ ಬೇಡಿಕೆಯನ್ನು ನೆರವೇರಿಸಲು ಸಾಧ್ಯವಾಗದಿದ್ದಕ್ಕೆ ವರ ಮದುವೆಯನ್ನು ಮುರಿದು ಹಾಕಿದ್ದಾನೆ.
ಈ ಸಂಬಂಧ ವಧುವಿನ ತಂದೆ ಮೋತಿಲಾಲ್ ವರ ಹಾಗೂ ಅವರ 49 ಸಂಬಂಧಿಕರ ವಿರುದ್ಧ ದೂರು ನೀಡಿದ್ದಾರೆ. ಜೂನ್ 9 ರಂದು, ವರ ಮತ್ತು ಅವರ ಸಂಬಂಧಿಕರು ವರದಕ್ಷಿಣೆಯ ಭಾಗವಾಗಿ ಬೈಕ್ ಖರೀದಿಸಿದ್ದಾರೆ. ಆದರೆ ಅವರು ಮದುವೆಯ ದಿನದಂದು ಬುಲೆಟ್ ಮತ್ತು 1 ಲಕ್ಷ ರೂ. ಹೆಚ್ಚುವರಿಯಾಗಿ ಕೇಳಿದ್ದಾರೆ ಎಂದು ವರದಿ ತಿಳಿಸಿದೆ.
ವರ ಮತ್ತು 49 ಮದುವೆಗೆ ಹಾಜರಾದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಕ್ಬರ್‌ಪುರದ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಸಿಂಗ್ ಹೇಳಿದ್ದಾರೆ.