Advertisement

ಮದರಸಾಗಳಲ್ಲೂ ಸ್ವಾತಂತ್ರ್ಯದಿನ ಆಚರಣೆ ಕಡ್ಡಾಯ!

06:00 AM Aug 12, 2017 | Team Udayavani |

ಲಕ್ನೋ: ಅಧಿಕಾರಕ್ಕೆ ಬಂದ ಆರಂಭದಲ್ಲೇ ಅಕ್ರಮ ಕಸಾಯಿ ಖಾನೆಗಳಿಗೆ ಬೀಗ ಹಾಕಿಸಿ ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರ್ಕಾರ, ಈಗ ರಾಜ್ಯದ ಮದರಸಾಗಳಲ್ಲಿ ಸ್ವಾತಂತ್ರ್ಯದಿನದ ಆಚರಣೆಯನ್ನು ಕಡ್ಡಾಯವಾಗಿ ಆಚರಿಸುವಂತೆ ಆದೇಶಿಸಿ, ಹೊಸದೊಂದು ವಿವಾದಕ್ಕೆ ನಾಂದಿ ಹಾಡುವ ಸೂಚನೆ ನೀಡಿದೆ.

Advertisement

“ರಾಜ್ಯದ ಎಲ್ಲ ಮದರಸಾಗಳಲ್ಲಿ (ಇಸ್ಲಾಮಿಕ್‌ ಶಾಲೆಗಳು) ಆಗಸ್ಟ್‌ 15ರಂದು ಸ್ವಾತಂತ್ರ್ಯದಿನ ಆಚರಿಸಬೇಕು. ಜೊತೆಗೆ ಆಚರಣೆಯ ವಿಡಿಯೋ ಚಿತ್ರೀಕರಣವನ್ನೂ ಕಡ್ಡಾಯವಾಗಿ ಮಾಡಬೇಕು,’ ಎಂದು ಉತ್ತರ ಪ್ರದೇಶದ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಲಕ್ಷ್ಮೀನಾರಾಯಣ್‌ ಚೌಧರಿ ಮದರಸಾಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಸಚಿವರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಸಹಾಯಕ ಸಚಿವ ಬಲದೇವ್‌ ಔಲಖ್‌, “ಸ್ವಾತಂತ್ರ್ಯ ದಿನೋತ್ಸವ ಆಚರಿಸದ ಮದರಸಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,’ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ. ಅಲ್ಲದೆ ಈ ಕುರಿತಂತೆ ಬಂದ ಎಲ್ಲ ಆಕ್ಷೇಪಣೆಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ.

ದೇಶಭಕ್ತಿ ಬಗ್ಗೆ ಅನುಮಾನವೇ?:
ಇದೇ ವೇಳೆ ಯೋಗಿ ಸರ್ಕಾರದ ಈ ಆದೇಶಕ್ಕೆ ಸ್ಥಳೀಯ ಮದರಸಾಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದೇಶದ ಉದ್ದೇಶವಾದರೂ ಏನು ಎಂದು ಕೇಳಿರುವ ಅಖೀಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯ ಮೌಲಾನಾ ಖಾಲಿದ್‌ ರಶೀದ್‌ ಫ‌ರಂಗಿ ಮಹ್ಲಿ, “ಈ ಆದೇಶ ರಾಜ್ಯದ ಎಲ್ಲ ಶಾಲೆಗಳಿಗೂ ಅನ್ವಯವೋ ಅಥವಾ ಮದರಸಾಗಳಿಗೆ ಮಾತ್ರ ಸೀಮಿತವೋ? ಒಂದು ವೇಳೆ ಮದರಸಾಗಳಿಗೆ ಸೀಮಿತವಾಗಿದ್ದರೆ, ಮುಸ್ಲಿಮರ ದೇಶಭಕ್ತಿಯನ್ನು ಸರ್ಕಾರ ಅನುಮಾನಿಸುತ್ತಿದೆಯೇ’ಎಂದು ಪ್ರಶ್ನಿಸಿದ್ದಾರೆ.

ಕಾರ್ಯಕ್ರಮದಲ್ಲಿ ಏನೇನಿರಬೇಕು?
ಆ.15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ, ತ್ರಿವರ್ಣ ಧ್ವಜಾರೋಹಣ, ರಾಷ್ಟ್ರಗೀತೆ ಗಾಯನ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಮರ್ಪಣೆಯನ್ನು ಒಳಗೊಂಡಿರಬೇಕು. ಇದರೊಂದಿಗೆ ದೇಶದ ಪರಂಪರೆಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ದೇಶಕ್ಕಾಗಿ ಬಲಿದಾನ ನೀಡಿದ ಹುತಾತ್ಮರ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕು ಎಂದು ಸಚಿವ ಚೌದರಿ ಸೂಚಿಸಿದ್ದಾರೆ.

“ಮಕ್ಕಳಿಗೆ ದೇಶದ ಸ್ವಾತಂತ್ರ್ಯ ಹೋರಾಟ, ಹೋರಾಟಗಾರರ ಇತಿಹಾಸ, ಹುತಾತ್ಮರ ತ್ಯಾಗ, ಬಲಿದಾನಗಳನ್ನು ಪರಿಚಯಿಸುವುದು ಸರ್ಕಾರದ ಉದ್ದೇಶ. ಮದರಸಾಗಳ ಸ್ವಾತಂತ್ರೊéàತ್ಸವ ಆಚರಣೆಯ ವಿಡಿಯೋಗಳನ್ನು ತಂತ್ರಜ್ಞಾನದ ನೆರವಿನಿಂದ ಎಲ್ಲರಿಗೂ ತಲುಪಿಸಿದರೆ ದೇಶದ ಲಕ್ಷಾಂತರ ಮಕ್ಕಳಿಗೆ ಪ್ರೇರಣೆ ನೀಡಿದಂತಾಗುತ್ತದೆ,’ ಎನ್ನುವ ಮೂಲಕ ಸರ್ಕಾರದ ನಿಲುವನ್ನು ಸಚಿವರು ಸಮರ್ಥಿಸಿಕೊಂಡಿದ್ದಾರೆ.

Advertisement

“ಉತ್ತರ ಪ್ರದೇಶದಲ್ಲಿ 8000 ಮದರಸಾಗಳಿದ್ದು, ಈ ಪೈಕಿ 560 ಸರ್ಕಾರಿ ಅನುದಾನಿತ ಮದರಸಾಗಳಾಗಿವೆ. ಅಲ್ಲದೆ ಎಲ್ಲ ಮದರಸಾಗಳೂ ಸರ್ಕಾರದಿಂದ ಆರ್ಥಿಕ ನೆರವು ಪಡೆಯುತ್ತಿವೆ. ಹೀಗಾಗಿ ಸ್ವಾತಂತ್ರ್ಯ ದಿನ ಸೇರಿದಂತೆ ಯಾವುದೇ ರಾಷ್ಟ್ರೀಯ ಹಬ್ಬವನ್ನು ದೇಶಭಕ್ತಿ ಹಾಗೂ ಗೌರವದೊಂದಿಗೆ ಆಚರಿಸುವುದು ಮದರಸಾಗಳ ಕರ್ತವ್ಯ,’ ಎಂದು ಸಹಾಯಕ ಸಚಿವ ಔಲಖ್‌ ತಾಕೀತು ಮಾಡಿದ್ದಾರೆ. ಹಾಗೇ “ದೇಶದಲ್ಲಿ ಎಲ್ಲ ಧರ್ಮದವರೂ ಪ್ರತ್ಯೇಕವಾಗಿ ಹಲವು ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ರಾಷ್ಟ್ರೀಯ ಹಬ್ಬಗಳು ಧರ್ಮ ಹಾಗೂ ಜಾತಿಯ ಎಲ್ಲೆ ಮೀರಿ ಆಚರಣೆಯಾಗಬೇಕು,’ ಎಂದು ಪ್ರತಿಪಾದಿಸಿದ್ದಾರೆ.

ಕಾರ್ಯಕ್ರಮದ ಟೈಮ್‌ ಟೇಬಲ್‌
ಬೆಳಗ್ಗೆ 8 ಗಂಟೆಗೆ ತ್ರಿವರ್ಣಧ್ವಜಾರೋಹಣ, ರಾಷ್ಟ್ರಗೀತೆ
ಬೆಳಗ್ಗೆ 8.10ಕ್ಕೆ  ಹುತಾತ್ಮರಿಗೆ ನಮನ, ಸಾಂಸ್ಕೃತಿಕ ಕಾರ್ಯಕ್ರಮ

Advertisement

Udayavani is now on Telegram. Click here to join our channel and stay updated with the latest news.

Next