Advertisement
ಈ ರಾಜ್ಯ ಎಲ್ಲ ರಾಜಕೀಯ ಪಕ್ಷಗಳಿಗೆ ಅತ್ಯಂತ ಮಹತ್ವದ ಮಾತ್ರವಲ್ಲದೆ ಪ್ರತಿಷ್ಠೆಯ ಕಣ. 2014ರ ಲೋಕಸಭೆ ಚುನಾವಣೆವರೆಗೆ ಈ ರಾಜ್ಯದಲ್ಲಿ ಜಾತಿ ಸಮೀ ಕರಣಗಳೇ ಪ್ರತಿಯೊಂದೂ ಚುನಾವಣೆಯಲ್ಲೂ ಪ್ರಧಾನ ಪಾತ್ರ ವಹಿಸುತ್ತ ಬಂದಿದ್ದರೆ ಆ ಬಳಿಕ ರಾಜ್ಯದ ಜನತೆ ಅಭಿವೃದ್ಧಿ ಮತ್ತು ನಾಯಕರ ವರ್ಚಸ್ಸನ್ನು ಪರಿಗಣಿಸಿ ಮತ ಚಲಾಯಿಸಲಾರಂಭಿಸಿರುವುದು ಕಳೆದ ಮೂರೂ ಪ್ರಮುಖ ಚುನಾವಣೆಗಳಲ್ಲಿ ಸಾಬೀತಾಗಿದೆ.
Advertisement
ಉತ್ತರ ಪ್ರದೇಶ ಚುನಾವಣೆಯನ್ನು ಸ್ವತಃ ಪ್ರಧಾನಿ ಮೋದಿ ಅವರೂ ಗಂಭೀರವಾಗಿ ಪರಿಗಣಿಸಿದ್ದು ಕಳೆದ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ರಾಜ್ಯಕ್ಕೆ 12 ಬಾರಿ ಭೇಟಿ ನೀಡಿ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದ್ದಾರೆ. ಇದೇ ವೇಳೆ ಸಾರ್ವಜನಿಕ ರ‍್ಯಾಲಿಗಳನ್ನು ನಡೆಸಿ ಪಕ್ಷದ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಜತೆಯಲ್ಲಿ ವಿಪಕ್ಷಗಳು ಅಧಿಕಾರದಲ್ಲಿದ್ದ ವೇಳೆ ಉತ್ತರ ಪ್ರದೇಶದಲ್ಲಿನ ಸ್ಥಿತಿಗತಿಯತ್ತ ಬೆಳಕು ಚೆಲ್ಲಿ ಜನರನ್ನು ಪಕ್ಷದತ್ತ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.
ಯೋಗಿ ಆದಿತ್ಯನಾಥ್ ಅವರು ಅಧಿಕಾರಕ್ಕೇರಿದಾಗಿನಿಂದ ರಾಜ್ಯದ ಪ್ರತೀ ಜಿಲ್ಲೆಗೂ ಭೇಟಿ ನೀಡುವ ಮೂಲಕ ತಮ್ಮ ವರ್ಚಸ್ಸನ್ನು ವೃದ್ಧಿಸಿಕೊಂಡಿದ್ದಾರೆ. ಕಳೆದ ಎರಡು ತಿಂಗಳುಗಳ ಅವಧಿಯಲ್ಲಂತೂ 2017ರ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದ ಕ್ಷೇತ್ರಗಳಿಗೆ ಯೋಗಿ ಭೇಟಿ ನೀಡುವ ಮೂಲಕ ಪಕ್ಷದ ಬಲವರ್ಧನೆಗೆ ಪ್ರಯತ್ನಿಸಿದ್ದಾರೆ. 2017ರ ಚುನಾವಣೆಯಲ್ಲಿ 312 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ ತನ್ನ ಮಿತ್ರಪಕ್ಷವಾಗಿರುವ ಅಪ್ನಾ ದಳ್ ಜತೆಗೂಡಿ 300 ಸ್ಥಾನಗಳ ಗಡಿಯನ್ನು ದಾಟುವ ಗುರಿಯನ್ನು ಹಾಕಿಕೊಂಡಿದೆ.
ಎಸ್‌ಪಿ ಹವಾ: ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ನಿರುದ್ಯೋಗ, ರೈತರ ಸಮಸ್ಯೆ, ಬೆಲೆ ಏರಿಕೆ, ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಜನಸಾಮಾನ್ಯರು ಮತ್ತು ಬಡವರ ನಿರ್ಲಕ್ಷ್ಯ ಮತ್ತಿತರ ವಿಷಯಗಳನ್ನು ಮುಂದಿಟ್ಟು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ.
ಈ ಬಾರಿ ಯಾದವೇತರ ಇತರ ಹಿಂದುಳಿದ ವರ್ಗಗಳ ಮತ ಸೆಳೆಯುವ ಪ್ರಯತ್ನದಲ್ಲಿ ಎಸ್‌ಪಿ ನಿರತರಾಗಿದ್ದು ಇದಕ್ಕಾಗಿ ಈ ಜಾತಿಗಳಿಗೆ ಸೇರಿದ ಸಣ್ಣಪುಟ್ಟ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ರಾಷ್ಟ್ರೀಯ ಲೋಕದಳದೊಂದಿಗೂ ಎಸ್‌ಪಿ ಮೈತ್ರಿ ಮಾಡಿಕೊಂಡಿದ್ದು ಪಶ್ಚಿಮ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದೆ. ಅಷ್ಟು ಮಾತ್ರವಲ್ಲದೆ ಬಿಎಸ್‌ಪಿ ಮತ್ತು ಬಿಜೆಪಿಯ ಹಲವು ಹಾಲಿ ಶಾಸಕರನ್ನು ಮತ್ತು ಬಿಎಸ್‌ಪಿಯ ಒಬಿಸಿ ನಾಯಕರನ್ನು ತನ್ನ ತೆಕ್ಕೆಗೆ ಸೆಳೆದು ಕೊಂಡಿದ್ದು ಈ ಮೂಲಕ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರುವ ಲೆಕ್ಕಾಚಾರ ಹಾಕಿಕೊಂಡಿದೆ. 2012ರ ಚುನಾವಣೆಯಲ್ಲಿ ತನ್ನ ಸ್ವಂತ ಬಲದಿಂದ ಅಧಿಕಾರಕ್ಕೇರಿದ್ದ ಎಸ್‌ಪಿ 2017ರ ಚುನಾ ವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡ ಹೊರ ತಾಗಿಯೂ ಕೇವಲ 47 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಿತ್ತು.
ಆನೆ ಅಗೋಚರ: ಮಾಯಾವತಿ ನೇತೃತ್ವದ ಬಿಎಸ್‌ಪಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಚುನಾವಣ ಕಣಕ್ಕೆ ಇಳಿದಿಲ್ಲವಾಗಿದ್ದು ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಪ್ರಯತ್ನದಲ್ಲಿ ನಿರತವಾಗಿದೆ. ಸತತ ಎರಡು ಸೋಲಿನಿಂದ ಕಂಗೆಟ್ಟಿರುವ ಮಾಯಾವತಿ ಅವರು ಈ ಬಾರಿ ತಮ್ಮ ಈ ಹಿಂದಿನ “ದಲಿತ-ಬ್ರಾಹ್ಮಣರ ನಡುವೆ ಸಹೋದರತೆ’ಯ ಮಂತ್ರಕ್ಕೇ ಜೋತುಬಿದ್ದಿದ್ದಾರೆ. ಅಷ್ಟು ಮಾತ್ರವಲ್ಲದೆ ದಲಿತರನ್ನು ಜಾಟ್, ಮುಸ್ಲಿಂ ಮತ್ತು ಇತರ ಹಿಂದುಳಿದ ವರ್ಗಗಳ ಜನರ ನಡುವೆಯೂ ಜತೆಗೂಡಿ ಸುವ ಪ್ರಯತ್ನ ನಡೆಸಿದ್ದಾರೆ. 2007ರ ಚುನಾವಣೆಯಲ್ಲಿ 206 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಅವರು 2012ರಲ್ಲಿ 80, 2017ರ ಚುನಾವಣೆಯಲ್ಲಿ 17 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು.
ಕಾಂಗ್ರೆಸ್‌ಗೆ ನಾಯಕತ್ವದ್ದೇ ಸಮಸ್ಯೆ: ಕಳೆದ ಮೂರು ದಶಕಗಳಿಗಿಂತಲೂ ಅಧಿಕ ಸಮಯದಿಂದ ರಾಜ್ಯದಲ್ಲಿ ಅಧಿಕಾರದಿಂದ ದೂರವೇ ಉಳಿದಿರುವ ಕಾಂಗ್ರೆಸ್‌ನ ಸ್ಥಿತಿ ಈ ಬಾರಿಯೂ ಅಷ್ಟೇನೂ ಉತ್ತೇಜನಕಾರಿಯಾಗಿಲ್ಲ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರನ್ನು ಮುಂದಿಟ್ಟುಕೊಂಡು ಈ ಬಾರಿಯ ಚುನಾವಣೆ ಯನ್ನು ಎದುರಿಸಲು ಕಾಂಗ್ರೆಸ್ ಸನ್ನದ್ಧವಾಗಿದೆ. ಪ್ರಿಯಾಂಕಾ ವಾದ್ರಾ ಅವರಂತೂ ಆರಂಭದಿಂದಲೂ ಮಹಿಳಾ ಮಂತ್ರವನ್ನು ಜಪಿಸುತ್ತಿದ್ದು ಈ ಚುನಾವಣೆಯಲ್ಲಿ ಶೇ.40ರಷ್ಟು ಟಿಕೆಟ್‌ಗಳನ್ನು ಮಹಿಳಾ ಅಭ್ಯರ್ಥಿಗಳಿಗೆ ನೀಡುವುದಾಗಿ ಘೋಷಿಸಿ, ಮಹಿಳಾ ಪರ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ. ರಾಜ್ಯ ಮಟ್ಟದಲ್ಲಿ ಪಕ್ಷದಲ್ಲಿ ಪ್ರಬಲ ಸಂಘಟನೆಯಾಗಲೀ ನಾಯಕರಾಗಲೀ ಇಲ್ಲದಿರುವುದು ಕಾಂಗ್ರೆಸ್ ಪಾಲಿಗೆ ಬಲು ದೊಡ್ಡ ಹಿನ್ನಡೆಯಾಗಿದೆ. ಹೀಗಾಗಿ ಕಾಂಗ್ರೆಸ್ ಪಾಲಿಗೆ ಈ ಬಾರಿಯ ಚುನಾವಣೆ ಕೂಡ ಅಷ್ಟೇನೂ ಆಶಾದಾಯಕ ಫಲಿತಾಂಶ ತಂದುಕೊಡುವ ಸಾಧ್ಯತೆ ಕಡಿಮೆ.
ಒಟ್ಟಾರೆ ಈ ಬಾರಿಯ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಬಿಜೆಪಿ ಮತ್ತು ಸಮಾಜವಾದಿ ಪಾರ್ಟಿ ನಡುವಣ ನೇರ ಸಮರದಂತೆ ಭಾಸವಾಗುತ್ತಿದ್ದು ಮುಂದಿನ ದಿನಗಳಲ್ಲಿ ಅಂದರೆ ಪ್ರಚಾರದ ವೇಳೆ ಇತರ ಪಕ್ಷಗಳ ಕಾರ್ಯ ವೈಖರಿಯಿಂದಾಗಿ ರಾಜಕೀಯ ಚಿತ್ರಣ ಬದಲಾದರೂ ಅಚ್ಚರಿ ಇಲ್ಲ. ರಾಜ್ಯದಲ್ಲಿ ಈ ಹಿಂದಿನಿಂದಲೂ ಪ್ರಾದೇಶಿಕವಾರು ವಿಷಯಗಳೇ ಚುನಾವಣೆಯ ಸಂದರ್ಭದಲ್ಲಿ ಪ್ರಮುಖ ವಿಷಯಗಳಾಗಿ ಮಾರ್ಪಾಡಾಗುತ್ತಿರುವುದರಿಂದ ಸದ್ಯದ ಒಟ್ಟಾರೆ ರಾಜಕೀಯ ಚಿತ್ರಣ ಏರುಪೇರಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಆದರೆ ಬಿಜೆಪಿ ಮಾತ್ರ ಅಧಿಕಾರವನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸುತ್ತಿದೆ.
-ಹರೀಶ್ ಕೆ.