ಹೊಸದಿಲ್ಲಿ: “ಈ ವರ್ಷ ಮಾ.18ರ ಬದಲಾಗಿ ಮಾ.10ರಂದೇ ಹೋಳಿ ಹಬ್ಬ ಆಚರಿಸಲು ಉತ್ತರಪ್ರದೇಶದ ಜನತೆ ನಿರ್ಧರಿಸಿಯಾಗಿದೆ. ಮತ ಎಣಿಕೆಯ ದಿನದಂದು ಬಿಜೆಪಿಯ ವಿಜಯೋತ್ಸವದೊಂದಿಗೆ ಹಬ್ಬ ಆಚರಿಸಲು ಜನ ಸಿದ್ಧರಾಗಿದ್ದಾರೆ’.
ಉತ್ತರಪ್ರದೇಶದ ಫತೇಪುರದ ರ್ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಆಡಿರುವ ವಿಶ್ವಾಸದ ನುಡಿಗಳಿವು. ಗುರುವಾರ ಪ್ರಚಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, “ಮುಂದಿನ 5 ಹಂತಗಳ ಫಲಿತಾಂಶವೇನೆಂದು ನಿಮ್ಮ ಆಸಕ್ತಿಯನ್ನು ನೋಡಿದರೇ ತಿಳಿಯುತ್ತದೆ. ರಾಜ್ಯದಲ್ಲಿ ಬಿಜೆಪಿಯನ್ನು ಬೆಂಬಲಿಸುವವರ ಸಂಖ್ಯೆಯೂ ಹೆಚ್ಚಳವಾಗಿದೆ’ ಎಂದಿದ್ದಾರೆ.
ವಿಪಕ್ಷಗಳ ವಿರುದ್ಧ ಕಿಡಿಕಾರಿದ ಅವರು, “ಬಿಜೆಪಿ ಸರಕಾರವು ಇಡೀ ದೇಶಕ್ಕೆ ಉಚಿತ ಲಸಿಕೆ ನೀಡುತ್ತಿದೆ. ಆದರೆ ಈ ಪರಿವಾರವಾದಿ ಗಳು ಅದನ್ನು ಬಿಜೆಪಿಯ ಲಸಿಕೆ ಎನ್ನುತ್ತಾರೆ. ದೇಶಕ್ಕೆ ಏನೇ ಒಳ್ಳೆಯದು ಮಾಡಿದರೂ ಅವರು ಅದನ್ನು ಪ್ರಶ್ನೆ ಮಾಡುತ್ತಾರೆ’ ಎಂದಿದ್ದಾರೆ. ಇದೇ ವೇಳೆ, ಪಂಜಾಬ್‌ನ ಅಬೋಹಾರ್‌ನಲ್ಲಿ ಗುರುವಾರ ನಡೆದ ಪ್ರಚಾರ ರ್ಯಾಲಿಯಲ್ಲಿ ಮೋದಿ ಅವರು ಸಿಎಂ ಚನ್ನಿ ಅವರ “ಭಯ್ನಾಸ್’ ಎಂಬ ವಿವಾದಿತ ಹೇಳಿಕೆ ಕುರಿತೂ ಪ್ರಸ್ತಾಪಿಸಿದ್ದಾರೆ. “ಚನ್ನಿ ಅವರು ಭಯ್ನಾಸ್ ಎಂದು ಕರೆಯುವಾಗ ದಿಲ್ಲಿಯ ಕುಟುಂಬವೊಂದರ ಕುಡಿಯು ಚಪ್ಪಾಳೆ ತಟ್ಟುತ್ತಿತ್ತು’ ಎಂದು ಪ್ರಿಯಾಂಕಾ ವಾದ್ರಾರನ್ನು ಪರೋಕ್ಷವಾಗಿ ಕುಟುಕಿದ್ದಾರೆ.
ಮುಲಾಯಂ ಪ್ರಚಾರ: ಪ್ರಸಕ್ತ ಚುನಾವಣೆಯಲ್ಲಿ ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಇದೇ ಮೊದಲ ಬಾರಿಗೆ ಗುರುವಾರ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕರ್ಹಾಲ್ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಪುತ್ರ ಅಖೀಲೇಶ್ ಯಾದವ್ ಪರವಾಗಿ ಅವರು ಪ್ರಚಾರ ನಡೆಸಿದ್ದಾರೆ.
ಉಚಿತ ಸ್ಕೂಟರ್, 100 ಕೋಟಿ ಸ್ಟಾರ್ಟ್ ಆಪ್ ನಿಧಿ :
ಮಣಿಪುರದಲ್ಲಿ ಗುರುವಾರ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟರ್, ಹಿರಿಯ ನಾಗರಿಕರಿಗೆ 1,000 ರೂ.ಗಳ ಮಾಸಿಕ ಪಿಂಚಣಿ, 100 ಕೋಟಿ ರೂ.ಗಳ ಸ್ಟಾರ್ಟ್ ಆಪ್ ನಿಧಿ ಸ್ಥಾಪಿಸುವುದಾಗಿ ಘೋಷಿಸಲಾಗಿದೆ.