ಲಕ್ನೋ : ಪಕ್ಷದ ವಕ್ತಾರ ಹುದ್ದೆಗೆ ನಡೆಸಲಾದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಲೀಕ್ ಮಾಡುವ ಮೂಲಕ ಉತ್ತರ ಪ್ರದೇಶ ಕಾಂಗ್ರೆಸ್ ನಾಯಕರು ಚೀಟಿಂಗ್ ಮಾಡಿರುವುದು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಇರಿಸುಮುರಿಸು ಉಂಟು ಮಾಡಿದೆ.
ವಿಚಿತ್ರವೆಂದರೆ ಇಂಥದ್ದೊಂದು ಪರೀಕ್ಷೆಯನ್ನು ಪಕ್ಷವು ನಡೆಸಲಿದೆ ಎಂಬ ವಿಷಯವೇ ಪಕ್ಷದ ಸದಸ್ಯರಿಗೆ ಮುಂಚಿತವಾಗಿ ಗೊತ್ತಿರಲಿಲ್ಲ.
ಪಕ್ಷದ ವಕ್ತಾರ ಹುದ್ದೆಗೆ ನೇಮಕಾತಿ ನಡೆಸಲು ನಿನ್ನೆ ಗುರುವಾರ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ (ಯುಪಿಸಿಸಿ) ತನ್ನ ಸದಸ್ಯರಿಗೆ ಪರೀಕ್ಷೆಯೊಂದನ್ನು ನಡೆಸಿತ್ತು. ಸುಮಾರು 70 ಮಂದಿ ಈ ಪರೀಕ್ಷೆಯನ್ನು ದಿಢೀರಾಗಿ ಎದುರಿಸಿದ್ದರು. ಈ ಪರೀಕ್ಷೆಗಾಗಿ ಅವರು ಸಿದ್ಧರಾಗಿದ್ದಾರೆಯೇ ಎಂಬ ಪ್ರಶ್ನೆಯೇ ಪರೀಕ್ಷಕರನ್ನು ಕಾಡಲಿಲ್ಲ !
ಈ ಪರೀಕ್ಷೆಯಲ್ಲಿ 14 ಪ್ರಶ್ನೆಗಳನ್ನು ಕೇಳಲಾಗಿತ್ತು. ವಿಶೇಷವೆಂದರೆ ಇದನ್ನು ಇಂಟರ್‌ನೆಟ್‌ನಲ್ಲಿ ನಡೆಸಲಾಗಿತ್ತು. ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆ ಮಾಡಿದ ಕೂಡಲೇ ಅದರ ಫೋಟೋ ಪ್ರತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಔಟ್ ಆಗಿದ್ದವು. ಹೀಗೆ ಪ್ರಶ್ನೆ ಪತ್ರಿಕೆ ಲೀಕ್ ಆಗುವಲ್ಲಿ ಕಾಂಗ್ರೆಸ್ ನಾಯಕರ ಮಟ್ಟದಲ್ಲಿ ಕರಾಮತ್ತು ನಡೆಯಿತೆಂದು ವರದಿಗಳು ತಿಳಿಸಿವೆ.
ಪರೀಕ್ಷೆಯಲ್ಲಿ ಕೇಳಲಾಗಿದ್ದ ಪ್ರಶ್ನೆಗಳ ಕೆಲವು ಸ್ಯಾಂಪಲ್ ಹೀಗಿವೆ : ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರದ ವೈಫಲ್ಯಗಳ ಮುಖ್ಯ ಪಾಯಿಂಟ್‌ಗಳು ಯಾವುವು? ಹಿಂದಿನ ಮನಮೋಹನ್ ಸಿಂಗ್ ಸರಕಾರದ ಸಾಧನೆಗಳು ಯಾವುವು ? ಇಂದು ಪತ್ರಿಕೆಗಳಲ್ಲಿ ಕಾಣಿಸಿರುವ ಮೂರು ಹೆಡ್‌ಲೈನ್‌ಗಳಿಗೆ ಪಕ್ಷದ ವಕ್ತಾರನಾಗಿ ನಿಮ್ಮ ಪ್ರತಿಕ್ರಿಯೆ ಏನು ? ಪಕ್ಷದ ವಕ್ತಾರನಾಗಲು ನೀವು ಏಕೆ ಬಯಸುತ್ತೀರಿ ? ನೀವಿರುವ ಪ್ರದೇಶದಲ್ಲಿ ಇರುವ ಬ್ಲಾಕ್ ಗಳ ಸಂಖ್ಯೆ ಎಷ್ಟು ?