ಹೊಸದಿಲ್ಲಿ : ಅಕ್ರಮ ಮರಳುಗಾರಿಕೆ ಕೇಸಿಗೆ ಸಂಬಂಧಿಸಿ ಸಿಬಿಐ ಇಂದು ಶನಿವಾರ ಉತ್ತರ ಪ್ರದೇಶ ಮತ್ತು ದಿಲ್ಲಿಯ 12 ವಿವಿಧ ತಾಣಗಳಲ್ಲಿ ದಾಳಿ ನಡೆಸಿತು.
ದಿಲ್ಲಿ, ಲಕ್ನೋ, ಕಾನ್ಪುರ, ಹಮೀರ್‌ಪುರ ಮತ್ತು ಜಲೋನ್ ಸೇರಿದಂತೆ ಹನ್ನೆರಡು ವಿವಿಧ ತಾಣಗಳಲ್ಲಿ ಸಿಬಿಐ ದಾಳಿಗಳು ನಡೆದಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಐಎಎಸ್ ಅಧಿಕಾರಿ ಬಿ ಚಂದ್ರಕಲಾ ಸೇರಿದಂತೆ ಹಲವು ಹಿರಿಯ ಸರಕಾರಿ ಅಧಿಕಾರಿಗಳ ನಿವಾಸಗಳ ಮೇಲೂ ಸಿಬಿಐ ದಾಳಿ ನಡೆದಿರುವುದಾಗಿ ಎಎನ್‌ಐ ತಿಳಿಸಿದೆ.
ವಿಚಿತ್ರವೆಂದರೆ ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಸಮರವನ್ನೇ ನಡೆಸುತ್ತಿದ್ದ ಕಾರಣಕ್ಕೆ ಚಂದ್ರಕಲಾ ಭಾರೀ ಜನಪ್ರಿಯರಾಗಿದ್ದಾರೆ. ಈಕೆ 2008ರ ಯುಪಿ ಕೇಡರ್ ನ ಐಎಎಸ್ ಬ್ಯಾಚ್ ನವರು ಮತ್ತು ಮೂಲತಃ ತೆಲಂಗಾಣದವರು.
ಚಂದ್ರಕಲಾ ಅವರು 2012ರಲ್ಲಿ ಹಮೀರ್‌ಪುರ ಜಿಲ್ಲಾ ಮ್ಯಾಜಿಸ್ಟ್ರೇಟರಾಗಿದ್ದಾಗ ನೀತಿ ನಿಯಮಗಳ ಸಾರಾಸಗಟು ಉಲ್ಲಂಘನೆ ಗೈದು ಅಕ್ರಮ ಮರಳುಗಾರಿಕೆಗೆ ಪರವಾನಿಗೆಗಳನ್ನು ನೀಡಿದ್ದರು ಎನ್ನಲಾಗಿದೆ. ಅಂತೆಯೇ ಆಕೆಯ ನಿವಾಸದ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ಕೇಸಿಗೆ ಸಂಬಂಧಿಸಿದ ಹಲವಾರು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಇದೇ ವೇಳೆ ಸಿಬಿಐ ಅಧಿಕಾರಿಗಳು ಬಿಎಸ್‌ಪಿ ನಾಯಕ ಸತ್ಯದೇವ್ ದೀಕ್ಷಿತ್ ಮತ್ತು ಎಸ್‌ಪಿ ಎಂಎಲ್‌ಸಿ ರಮೇಶ್ ಮಿಶ್ರಾ ಅವರ ಹಮೀರ್‌ಪುರ ನಿವಾಸಗಳ ಮೇಲೆ ದಾಳಿ ನಡೆಸಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ಸಿಬಿಐ ಪ್ರಕೃತ ಉತ್ತರ ಪ್ರದೇಶದ ಐದು ಜಿಲ್ಲೆಗಳಾದ ಶಾಮ್ಲಿ, ಹಮೀರ್‌ಪುರ, ಫತೇಪುರ, ಸಿದ್ಧಾರ್ಥನಗರ ಮತ್ತು ದೇವರಿಯಾ ಗಳಲ್ಲಿ ವ್ಯಾಪಕವಾಗಿ ನಡೆದಿರುವ ಅಕ್ರಮ ಮರಳುಗಾರಿಕೆ ಕೇಸುಗಳ ತನಿಖೆ ನಡೆಸುತ್ತಿದೆ. ಈ ಸಂಬಂಧ ಅಲಹಾಬಾದ್ ಹೈಕೋರ್ಟ್ 2017ರ ಜುಲೈ ನಲ್ಲಿ ಸಿಬಿಐ ಗೆ ಆದೇಶ ನೀಡಿತ್ತು.